ಜೆಪಿ ನಗರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ರ್ಯಾಂಪ್ಗೆ ವಿರೋಧ! ಕಾರಣ ಇಲ್ಲಿದೆ
ಕಳೆದ ವಾರವಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ 3ನೇ ಹಂತದ ನಮ್ಮ ಮೆಟ್ರೋ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಬಿಎಂಆರ್ಸಿಎಲ್ ಮುಂದಾಗಿದೆ. ಆದರೆ, ಇದಕ್ಕೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಕಾರಣವೇನು? ಸ್ಥಳೀಯರು ಹೇಳುವುದೇನು? ಇಲ್ಲಿದೆ ಮಾಹಿತಿ.

ಬೆಂಗಳೂರು, ಆಗಸ್ಟ್ 21: ಜೆಪಿ ನಗರದಿಂದ ಕೆಂಪಾಪುರ ವರೆಗಿನ ನಮ್ಮ ಮೆಟ್ರೋ ಆರೆಂಜ್ ಲೈನ್ಗಾಗಿ ಜೆಪಿ ನಗರದ ನಾಲ್ಕನೇ ಹಂತದಲ್ಲಿರುವ ಡೆಲ್ಮಿಯಾ ಜಂಕ್ಷನ್ ಬಳಿ ಡಬಲ್ ಡೆಕ್ಕರ್ ಫ್ಲೈ ಓವರ್ ರ್ಯಾಂಪ್ ನಿರ್ಮಾಣ ಮಾಡಲು ಬಿಎಂಆರ್ಸಿಎಲ್ (BMRCL) ಮುಂದಾಗಿದೆ. ಆದರೆ, ಡಬಲ್ ಡೆಕ್ಕರ್ ಫ್ಲೈ ಓವರ್ ರ್ಯಾಂಪ್ ಅನ್ನು ಜೆಪಿ ನಗರದ ಕಡೆ ಇಳಿಸುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಬಲ್ ಡೆಕ್ಕರ್ ರ್ಯಾಂಪ್ ಜೆಪಿ ನಗರದ ಕಡೆ ಇಳಿಸುವ ಬದಲು ಬನ್ನೇರುಘಟ್ಟದ ಕಡೆ ಇಳಿಸುವುಂತೆ ಒತ್ತಾಯಿಸಿದ್ದಾರೆ.
ಜೆಪಿ ನಗರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ರ್ಯಾಂಪ್ಗೆ ಸ್ಥಳೀಯರ ವಿರೋಧ ಏಕೆ?
ಡಬಲ್ ಡೆಕ್ಕರ್ ಫ್ಲೈ ಓವರ್ ರ್ಯಾಂಪ್ ಅನ್ನು ಜೆಪಿ ನಗರದ ಕಡೆ ಇಳಿಸಿದರೆ, ಸ್ಥಳೀಯ ನಿವಾಸಿಗಳಿಗೆ ತುಂಬಾ ಸಮಸ್ಯೆ ಆಗುತ್ತದೆ ಹಾಗೂ ಸಂಚಾರ ದಟ್ಟಣೆ ಉಂಟಾಗುತ್ತದೆ. ಜೆಪಿ ನಗರದೊಳಗೆ ತುಂಬಾ ಕಿರಿದಾದ ರಸ್ತೆಗಳಿವೆ. ಅವುಗಳ ಅಗಲ ಕೇವಲ 30 ಅಡಿಗಳಿವೆ. ಈ ರಸ್ತೆಗಳ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ರ್ಯಾಂಪ್ ನಿರ್ಮಾಣ ಮಾಡಿದರೆ, ಶಾಲೆಗೆ ಹೋಗುವ ಮಕ್ಕಳಿಗೆ ಮತ್ತು ಹಿರಿಯರಿಗೆ ತುಂಬಾ ಕಷ್ಟ ಆಗಲಿದೆ. ಈ ಪ್ರದೇಶದಲ್ಲಿ ನಾಲ್ಕು ಶಾಲೆಗಳಿವೆ. ಸಾವಿರಾರು ಮಕ್ಕಳು ಈ ರಸ್ತೆ ಮೂಲಕ ಓಡಾಡುತ್ತಾರೆ ಎಂಬುದು ಸ್ಥಳೀಯರ ವಾದವಾಗಿದೆ.
ಬನ್ನೇರುಘಟ್ಟದ ಕಡೆಗೆ ಡಬಲ್ ಡೆಕ್ಕರ್ ಫ್ಲೈಓವರ್ ರ್ಯಾಂಪ್ಗೆ ಮನವಿ
ಅಷ್ಟೇ ಅಲ್ಲದೆ, ಈ ಪ್ರದೇಶದಲ್ಲಿ ರ್ಯಾಂಪ್ ಇಳಿಸಿದರೆ ಸಾಕಷ್ಟು ಮರಗಳನ್ನು ಕಡಿಯಬೇಕಾಗುತ್ತದೆ. ಅದರ ಬದಲು ಬನ್ನೇರುಘಟ್ಟದ ಕಡೆ ಇಳಿಸಿದರೆ ಯಾವುದೇ ಮರ ಕಡಿಯುವ ಅವಶ್ಯಕತೆ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ, ಬನ್ನೇರುಘಟ್ಟದ ಕಡೆಗೆ ಮಾಡುವಂತೆ ಮನವಿ ಮಾಡಿದ್ದಾರೆ.
ಡಬಲ್ ಡೆಕ್ಕರ್ ಫ್ಲೈಓವರ್ ರ್ಯಾಂಪ್ಗೆ ವಿರೋಧ: ಬಿಎಂಆರ್ಸಿಎಲ್ ಹೇಳುವುದೇನು?
ಡಬಲ್ ಡೆಕ್ಕರ್ ಫ್ಲೈಓವರ್ಗೆ ಸ್ಥಳೀಯರ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶ್ವಂತ್ ಚೌವ್ಹಾಣ್, ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ. ಆ ಕುರಿತು ಚರ್ಚೆ ಮಾಡಲಾಗುತ್ತದೆ. ರ್ಯಾಂಪ್ ಅನ್ನು ಜೆಪಿ ನಗರದ ಕಡೆ ಇಳಿಸಬೇಕಾ ಅಥವಾ ಬನ್ನೇರುಘಟ್ಟ ರೋಡ್ ಕಡೆ ಇಳಿಸಬೇಕಾ ಎಂದು ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಹೊಸೂರು ರಸ್ತೆ ಟ್ರಾಫಿಕ್ಗೆ ಬಿಗ್ ರಿಲೀಫ್ ನೀಡಿದ ಮೆಟ್ರೋ ಯೆಲ್ಲೋ ಲೈನ್!
ಒಟ್ಟಿನಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳು ಟ್ರಾಫಿಕ್ ಕಡಿಮೆ ಆಗಲಿ ಎಂದು ಮೆಟ್ರೋ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ ಅದೇ ಮೆಟ್ರೋ ನಿರ್ಮಾಣದ ಡಬಲ್ ಡೆಕ್ಕರ್ ರ್ಯಾಂಪ್ನಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ ಎಂದು ಜನ ಹೇಳುತ್ತಿರುವುದು ವಿಶೇಷ.



