Chamrajpet Idgah Maidan: ತನ್ನ ಸುಪರ್ದಿಗೆ ಮೈದಾನ ಒಪ್ಪಿಸಲು ಬಿಬಿಎಂಪಿ ಮನವಿ ಸಾಧ್ಯತೆ
BBMP: ವಕ್ಫ್ ಬೋರ್ಡ್ ಮನವಿ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾದ ಕಾರಣ 2.5 ಎಕರೆ ಭೂಮಿಯನ್ನು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಘೋಷಿಸಿತ್ತು.
ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಈದ್ಗಾ ಮೈದಾನವನ್ನು ಕಂದಾಯ ಇಲಾಖೆಗೆ ಸೇರಿದ ಸ್ವತ್ತು ಎಂದು ಬಿಬಿಎಂಪಿ ಘೋಷಿಸಿದೆ. ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಘೋಷಿಸಿದ್ದಾರೆ. ಈ ನಡುವೆ ಬಿಬಿಎಂಪಿಯ ಮುಂದಿನ ಹೆಜ್ಜೆ ಏನಿರಬಹುದು ಎನ್ನುವ ಬಗ್ಗೆ ಕುತೂಹಲ ವ್ಯಕ್ತವಾಗಿದೆ. ಈದ್ಗಾ ಮೈದಾನವು ವಕ್ಫ್ ಮಂಡಳಿಗೆ ಸೇರಿದ್ದಲ್ಲ ಎಂದು ಘೋಷಿಸಿರುವ ಬಿಬಿಎಂಪಿ ಶೀಘ್ರದಲ್ಲಿಯೇ ಜಂಟಿ ಆಯುಕ್ತರ ಮೂಲಕ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಭೂಮಿಯನ್ನು ತನ್ನ ಸುಪರ್ದಿಗೇ ವಹಿಸಿಕೊಡುವಂತೆ ಕಂದಾಯ ಇಲಾಖೆಯನ್ನು ಕೋರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಚಾಮರಾಜಪೇಟೆನಲ್ಲಿ ಆಟದ ಮೈದಾನ ಇಲ್ಲದ ಕಾರಣ, ಇದೀಗ ಈದ್ಗಾ ಮೈದಾನ ಎಂದು ಕರೆಯಲಾಗುತ್ತಿರುವ ಭೂಮಿಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಬೇಕು ಎಂದು ಬಿಬಿಎಂಪಿ ವಿನಂತಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಂದಾಯ ಇಲಾಖೆಯು ಈ ಕೋರಿಕೆಯನ್ನು ಒಪ್ಪುವ ಸಾಧ್ಯತೆ ಹೆಚ್ಚು. ಬಿಬಿಎಂಪಿಯ ವಿನಂತಿ ಮನ್ನಿಸಿ, ಮೈದಾನವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಇತರ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ಬಿಬಿಎಂಪಿ ಜಿಲ್ಲಾಡಳಿತಕ್ಕೇ ಬಿಟ್ಟುಕೊಡುವ ಸಾಧ್ಯತೆಯಿದೆ. ಆಗಸ್ಟ್ 15ರ ಒಳಗೆ ಈ ಬೆಳವಣಿಗೆಗಳು ಆಗಬಹುದು ಎಂದು ಹೇಳಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿದ್ದ ಬಿಬಿಎಂಪಿ ಇಂಡೀಕರಣ ಮಾಡಿಕೊಡಲು ನಿರಾಕರಿಸಿತ್ತು. ಈ ಸಂಬಂಧ ವಕ್ಫ್ ಬೋರ್ಡ್ ಮನವಿ ಸಲ್ಲಿಸಿತ್ತಾದರೂ, ಸೂಕ್ತ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾಗಿತ್ತು. ಹೀಗಾಗಿ 2.5 ಎಕರೆ ಜಾಗವನ್ನು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಘೋಷಿಸಿತ್ತು.
ಪೊಲೀಸ್ ಕಾವಲು
ಈದ್ಗಾ ಮೈದಾನವನ್ನು ಕಂದಾಯ ಇಲಾಖೆ ಆಸ್ತಿ ಎಂದು ಬಿಬಿಎಂಪಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಮೈದಾನ ಬಳಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಅಹಿತಕರ ಘಟನೆ ನಡೆಯದಂತೆ ತಡೆಯಲೆಂದು 2 ಪೊಲೀಸ್ ವಾಹನ, 25ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಒಂದು ಕೆಎಸ್ಆರ್ಪಿ ತುಕಡಿಯೂ ಮೈದಾನದಲ್ಲಿ ನಿಂತಿದೆ. ಸದ್ಯ ಮೈದಾನದ ಬಳಿ ಯಾವುದೇ ಸಂಭ್ರಮಾಚರಣೆ, ಪ್ರತಿಭಟನೆಗೆ ಅವಕಾಶವನ್ನು ನೀಡುತ್ತಿಲ್ಲ. ಪರಿಸ್ಥಿತಿ ಗಮನಿಸಿ ಮತ್ತಷ್ಟು ಸಿಬ್ಬಂದಿಯನ್ನು ನಿಯೋಜಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
Published On - 10:44 am, Sun, 7 August 22