
ಬೆಂಗಳೂರು, ಮಾರ್ಚ್ 31: ಬಿಬಿಎಂಪಿ ಆಸ್ತಿ ತೆರಿಗೆ (BBMP Property Tax) ಪಾವತಿಗೆ ಇಂದು (March 31) ಕೊನೆಯ ದಿನವಾಗಿದೆ. ಒಂದು ವೇಳೆ ಇಂದಿನ ಒಳಗೆ ತೆರಿಗೆ ಪಾವತಿಸಲು ವಿಫಲವಾದರೆ ದುಪ್ಪಟ್ಟು ಮೊತ್ತ ಪಾವತಿಸಬೇಕಾಗಲಿದೆ. ಮಾರ್ಚ್ 31 ರ ವರೆಗೆ ತೆರಿಗೆ ಬಾಕಿ ಪಾವತಿಸಲು ಬಿಬಿಎಂಪಿ (BBMP) ಅವಕಾಶ ಕಲ್ಪಿಸಿದೆ. ಒಂದು ಬಾರಿಯ ಪಾವತಿಗೆ (One Time Settlement) ನೀಡಿದ್ದ ಅವಕಾಶವನ್ನು ಹಲವು ಬಾರಿ ವಿಸ್ತರಿಸಿದ್ದ ಬಿಬಿಎಂಪಿ, ಅಂತಿಮವಾಗಿ ಮಾರ್ಚ್ 31ರ ಗಡುವು ವಿಧಿಸಿತ್ತು. ಇದೀಗ ತೆರಿಗೆ ಪಾವತಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಿದೆ.
ಆಸ್ತಿ ತೆರಿಗೆ ಪಾವತಿಗೆ ಕೊನೆಯ ದಿನವಾಗಿರುವ ಕಾರಣ ಬಿಬಿಎಂಪಿ ಕಂದಾಯ ಇಲಾಖೆ ಕಚೇರಿಗೆ ರಂಜಾನ್ ರಜೆ ರದ್ದುಗೊಳಿಸಲಾಗಿದೆ. ರಾತ್ರಿ 11 ರ ವರೆಗೆ ಬಿಬಿಎಂಪಿ ಕಂದಾಯ ಇಲಾಖೆ ಕಚೇರಿ ತೆರೆದಿರಲಿದ್ದು, ಆಸ್ತಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.
ಒಂದು ವೇಳೆ ಗಡುವಿನ ಒಳಗೆ ಆಸ್ತಿ ತೆರಿಗೆ ಪಾವತಿಸಲು ವಿಫಲರಾದರೆ, ಏಪ್ರಿಲ್ 1 ರಿಂದ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅದೆ ಜತೆಗೆ, ಶೇ 9 ರ ಬಡ್ಡಿ ಸಹ ಪಾವತಿಸಬೇಕಾಗುತ್ತದೆ. ಬಿಬಿಎಂಪಿ ಕಾಯ್ದೆಯಲ್ಲಿ ತಿದ್ದುಪಡಿ ಹಿನ್ನೆಲೆ ಡಬಲ್ ತೆರಿಗೆ ಪಾವತಿಸಬೇಕಾಗುತ್ತದೆ.
ಸದ್ಯ ಪಾಲಿಕೆಗೆ 400 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಬರಬೇಕಿದೆ. ಇವುಗಳಲ್ಲಿ ಕೆಲವು ಸರ್ಕಾರಿ ಕಟ್ಟಡಗಳ ಆಸ್ತಿ ತೆರಿಗೆ ಕೂಡ ಬಾಕಿ ಇದೆ ಎನ್ನಲಾಗಿದೆ. ತೆರಿಗೆ ಬಾಕಿ ಪಾವತಿಸಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಆಸ್ತಿ ಹರಾಜು ಹಾಕುವ ಸಾಧ್ಯತೆಯೂ ಇದೆ.
ತೆರಿಗೆ ಪಾವತಿಸದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದೇವೆ. ತೆರಿಗೆ ಮೊತ್ತ ವಶಪಡಿಸಿಕೊಳ್ಳುವುದು ಮತ್ತು ಆಸ್ತಿ ಹರಾಜು ಮಾಡುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿಯ ಕಂದಾಯ ವಿಶೇಕ್ಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
2022-23 ಅಥವಾ ಅದಕ್ಕಿಂತ ಮೊದಲಿನ ತೆರಿಗೆ ಬಾಕಿಗೆ ವಾರ್ಷಿಕ ಶೇ 9 ರ ಬಡ್ಡಿ ವಿಧಿಸಲಾಗುತ್ತದೆ. 2023-24 ರ ಬಾಕಿಗೆ ಶೇ 15 ರ ಬಡ್ಡಿ ವಿಧಿಸಲಾಗುತ್ತದೆ. 2024-25 ರ ಹಣಕಾಸು ವರ್ಷಕ್ಕೆ ತೆರಿಗೆ ಬಾಕಿ ಇರಿಸಿಕೊಂಡರೆ ಶೇ 15 ರ ಬಡ್ಡಿ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಉದಾಹರಣೆಗೆ, 2022-23 ರಿಂದ ಆಸ್ತಿ ಮಾಲೀಕರು 1,000 ರೂ. ತೆರಿಗೆ ಬಾಕಿ ಉಳಿದಿದ್ದರೆ, ಅವರು 2,000 ರೂ. ಪಾವತಿಸಬೇಕಾಗುತ್ತದೆ. ಜೊತೆಗೆ ಶೇ 9 ರ ಬಡ್ಡಿ ಪಾವತಿಸಬೇಕಾಗುತ್ತದೆ.
ಪ್ರಸ್ತುತ, ಬಿಬಿಎಂಪಿ ಮಿತಿಯಲ್ಲಿ ಸುಮಾರು 1,82,467 ಆಸ್ತಿಗಳು ತೆರಿಗೆ ಬಾಕಿ ಉಳಿಸಿಕೊಂಡಿವೆ. ಮಹದೇವಪುರ, ಪೂರ್ವ ಮತ್ತು ದಕ್ಷಿಣ ವಲಯಗಳಲ್ಲಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ.
Published On - 9:41 am, Mon, 31 March 25