ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲ ಸೌಕರ್ಯ ಕಾಮಗಾರಿಗಳಿಗೆ ವೇಗ ನೀಡಲು ಬಿಡಿಎ ಆಯುಕ್ತರ ಆದೇಶ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಬಿಡಿಎ ಆಯುಕ್ತ ಜಿ ಕುಮಾರನಾಯ್ಕ ಅಧಿಕಾರಿಗಳಿಗೆ ಆದೇಶಿಸಿದರು
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಬಿಡಿಎ ಆಯುಕ್ತ ಜಿ ಕುಮಾರನಾಯ್ಕ ಅಧಿಕಾರಿಗಳಿಗೆ ಆದೇಶಿಸಿದರು.
ಬಿಡಿಎ ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಭೂತ ಸೌಕರ್ಯಗಳ ಕಾಮಗಾರಿಗಳ ಅನುಷ್ಠಾನ ಕುರಿತು ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಇಂದು (ಡಿ.7) ಆಯುಕ್ತ ಜಿ ಕುಮಾರನಾಯ್ಕ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಭೂತ ಸೌಕರ್ಯಗಳ ಕಾಮಗಾರಿಗಳ ಅನುಷ್ಠಾನ ವಿಳಂಬವಾಗುತ್ತಿರುವುದಕ್ಕೆ ಕಾರಣವಾಗಿರುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರದ ವಿಷಯಗಳನ್ನು ವಿಸ್ಮೃತವಾಗಿ ಆಯುಕ್ತರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮುಖ್ಯ ಸಂಪರ್ಕ ರಸ್ತೆ (MAR) ನಿರ್ಮಾಣಕ್ಕಾಗಿ ಹಸ್ತಾಂತರಿಸಲು ಬಾಕಿ ಇರುವ ಒಟ್ಟು 59 ಎಕರೆ ಪ್ರದೇಶವನ್ನು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸುವುದು. ಮುಖ್ಯ ಸಂಪರ್ಕ ರಸ್ತೆಯ ಉದ್ದದ ಚೈನೇಜ್ 0.70 ರಿಂದ 10.77 ಕಿ.ಮೀ ರವರೆಗಿನ ವಿವಿಧ ಟ್ರೈನೇಜ್ಗಳಲ್ಲಿ ಅಭಿಯಂತರ ವಿಭಾಗಕ್ಕೆ ಈಗಾಗಲೇ ಹಸ್ತಾಂತರಿಸಿರುವ ಜಮೀನುಗಳ ವಿವರ ಹಾಗೂ ಸದರಿ ಜಮೀನುಗಳಲ್ಲಿ ಕೈಗೊಂಡಿರುವ ರಸ್ತೆಯ ವಿವಿಧ ಕಾಮಗಾರಿಗಳ ಬಗ್ಗೆ ಆಯುಕ್ತರು ಗಮನ ನೀಡುವಂತೆ ಸೂಚಿಸಿದರು.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುವುದು: ವಿಶೇಷ ಅಧಿಕಾರಿ ಅಜಯ್ ನಾಗಭೂಷಣ್
2014 ರಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಭೂ ಸ್ವಾಧೀನದ ಅಧಿಸೂಚನೆಯ ವಿರುದ್ಧ ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿರುವ ಪ್ರಕರಣದ ಬಗ್ಗೆ ಈಗಾಗಲೇ ಹೈಕೋರ್ಟ್ನಲ್ಲಿ ಹೂಡಿರುವ ಅಪೀಲಿನ ಬಗ್ಗೆ ನ್ಯಾಯಲಯಕ್ಕೆ ಬಡಾವಣೆಯಲ್ಲಿ ಆಗಿರುವ ಇತ್ತೀಚಿನ ಕೆಲಸ ಕಾರ್ಯಗಳ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಮನವರಿಕೆ ಮಾಡಿ, ಕೂಡಲೇ ಅಧಿಸೂಚನೆಯ ಆದೇಶದ ಬಗ್ಗೆ ನ್ಯಾಯಾಲಯದ ನಿರ್ಣಯವನ್ನು ಪಡೆಯುವ ಸಂಬಂಧ ಸೂಕ್ತ ಕ್ರಮಕೈಗೊಳ್ಳುಬೇಕು. ಸದರಿ ವಿಷಯದ ಬಗ್ಗೆ ನ್ಯಾಯಾಲಯದ ನಿರ್ಣಯವನ್ನು ಪಡೆಯುವ ಸಂಬಂಧ ಪ್ರಾಧಿಕಾರದ ಕಾನೂನು ವಿಭಾಗದ ಮುಖ್ಯಸ್ಥರೊಂದಿಗೆ ಚರ್ಚಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಬಡಾವಣೆಯ ಭೂ ಸ್ವಾಧೀನಕ್ಕೆ, ನಿರ್ಮಾಣಕ್ಕಾಗಿ ಮತ್ತು ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಇದುವರೆವಿಗೂ ವ್ಯಯಿಸಿರುವ ಮೊತ್ತದ ವಿವರ ಹಾಗೂ ನಿವೇಶನಗಳ ಮಾರಾಟದಿಂದ ಪ್ರಾಧಿಕಾರಕ್ಕೆ ಸಂಗ್ರಹಣೆಯಾಗಿರುವ ಮೊತ್ತದ ಬಗೆಗಿನ ಮಾಹಿತಿಯನ್ನು ಪಡೆದರು.
ಬಡಾವಣೆಯಲ್ಲಿ ಸುಮಾರು 193 ಎಕರೆಯ ಸರ್ಕಾರಿ ಜಮೀನು ಪ್ರಸ್ತುತ ಕಂದಾಯ ಇಲಾಖೆಯ ಸುಪರ್ಧಿಯಲ್ಲಿದ್ದು ಪ್ರಾಧಿಕಾರಕ್ಕೆ ಹಸ್ತಾಂತರಿಸಿರುವುದಿಲ್ಲ. ಸುಮಾರು 150 ಎಕರೆ ಸರ್ಕಾರಿ ಜಮೀನನ್ನು ವಿವಿಧ ಹಿಡುವಳಿದಾರರಿಗೆ ಮಂಜೂರು ಮಾಡಲಾಗಿದ್ದು, ಹಿಡುವಳಿದಾರರ ನೈಜತೆಯ ಬಗ್ಗೆ ಪರಿಶೀಲಿಸಿ ಜಮೀನನ್ನು ಪ್ರಾಧಿಕಾರದ ವಶಕ್ಕೆ ಪಡೆಯುವ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲು ಪ್ರಾಧಿಕಾರದ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ನಾಡಪ್ರಭು ಕೆಂಪೇಗೌಡ ಬಡಾವಣೆ ರಚನೆಗಾಗಿ ಬಾಕಿ ಹಸ್ತಾಂತರಿಸಬೇಕಾಗಿರುವ ಜಮೀನುಗಳ ಮೇಲೆ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 583 ದಾವೆಗಳು ಇವೆ. ಹಸ್ತಾಂತರಿಸಲಾದ ಜಮೀನುಗಳ ಮೇಲೂ ಸಹ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 80 ದಾವೆಗಳು ಇವೆ. ಇವುಗಳನ್ನು ತುರ್ತಾಗಿ ಇತ್ಯರ್ಥಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಬಡಾವಣೆಯಲ್ಲಿ ಬಾಕಿ ಉಳಿದಿರುವ 9.00ಮೀ, 12.00ಮೀ ಮತ್ತು 15.00ಮೀ ರಸ್ತೆಗಳಿಗೆ ಮೊದಲ ಹಂತದಲ್ಲಿ ಮಣ್ಣಿನ ಸ್ಥಿರೀಕರಣ (Soil Stabilisation) ಮಾದರಿಯಲ್ಲಿ ನವೀನ ತಂತ್ರಜ್ಞಾನದಡಿಯಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುವ ಸಲುವಾಗಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಕಾಮಗಾರಿಗೆ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ತುರ್ತಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಹಾಗೂ ವಿದ್ಯುಧೀಕರಣಕ್ಕಾಗಿ ವೇರಿಯೇಷನ್ ಪ್ರಸ್ತಾವನೆಯನ್ನು ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಬೇಕು. ಮತ್ತು ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪ್ರಾಧಿಕಾರದ ಮಂಡಳಿ ಸಭೆಯಿಂದ ಅನುಮೋದನೆಗೊಂಡಿರುವ ವಿವಿಧ ಪ್ರಸ್ತಾವನೆಗಳಿಗೆ ಟೆಂಡರ್ ಕರೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಅಭಿಯಂತರ ಸದಸ್ಯರಾದ ಶಾಂತರಾಜಣ್ಣ, ಆರ್ಥಿಕ ಸದಸ್ಯರಾದ ಡಾ ಲೋಕೇಶ್, ಕಾರ್ಯದರ್ಶಿಗಳಾದ ಶಾಂತರಾಜ ಹಾಗೂ ಉಪ ಆಯುಕ್ತರು ಭೂ ಸ್ವಾದೀನ ಶ್ರೀಮತಿ ಸೌಜನ್ಯ ಅವರು ಸೇರಿದಂತೆ ಇತರೆ ಸಂಬಂಧಿಸಿದ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ