ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಉದ್ಯೋಗಿ ಪೂಜಾ ದತ್ತ ಅನುಮಾನಾಸ್ಪದ ಸಾವು; ಆಡುಗೋಡಿ ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ!

ಬೆಂಗಳೂರಿನ ಆಡುಗೋಡಿಯಲ್ಲಿ 34 ವರ್ಷದ ಖಾಸಗಿ ಕಂಪೆನಿ ಉದ್ಯೋಗಿ ಪೂಜಾ ದತ್ತ ಅವರ ಮೃತದೇಹ ಬಾಡಿಗೆ ಮನೆಯಲ್ಲಿ ಬೆತ್ತಲೆ ಮತ್ತು ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನವಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ.

ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಉದ್ಯೋಗಿ ಪೂಜಾ ದತ್ತ ಅನುಮಾನಾಸ್ಪದ ಸಾವು; ಆಡುಗೋಡಿ ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ!
ಪೂಜಾ ದತ್ತ
Edited By:

Updated on: Apr 27, 2026 | 10:27 PM

ಬೆಂಗಳೂರು, ಏ.27: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಯುವತಿಯೊಬ್ಬಳ ಮೃತದೇಹ, ಆಕೆಯ ಆಡುಗೋಡಿ (Adugodi) ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ಯುವತಿಯನ್ನು ಪೂಜಾ ದತ್ತ (34) ಎಂದು ಗುರುತಿಸಲಾಗಿದೆ. ಪೂಜಾ ದತ್ತ ಅವರು ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದರು. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೂಜಾ ಅವರ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ.

ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ. ಪೂಜಾ ದತ್ತ ಅವರ ಮೃತದೇಹ ಸಂಪೂರ್ಣವಾಗಿ ಬೆತ್ತಲೆ ಸ್ಥಿತಿಯಲ್ಲಿ ಮತ್ತು ಅರೆಕೊಳೆತ ಸ್ಥಿತಿಯಲ್ಲಿತ್ತು. ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವು ಸಂಭವಿಸಿ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ನೈಜ ಕ್ರೈಂಗೆ ಎಫ್‌ಐಆರ್ ಮಾಡಲ್ಲ, 2 ವರ್ಷಗಳ ಹಳೆಯ ಹಸು ನಾಪತ್ತೆ ಕೇಸ್‌ಗೆ ತರಾತುರಿ ಮಾಡ್ತೀರಾ? ಪೊಲೀಸರಿಗೆ ಹೈಕೋರ್ಟ್ ತರಾಟೆ

ಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಮತ್ತು ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದು ಸಾವಿನ ಕುರಿತು ಭಾರಿ ಅನುಮಾನಗಳನ್ನು ಮೂಡಿಸಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೂಜಾ ಅವರ ಫೋನ್ ಕರೆಗಳು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಬಾಡಿಗೆ ಮನೆ ಮಾಲಕಿ ಜಾನಕಮ್ಮ ಬಿಚ್ಚಿಟ್ಟ ಸ್ಫೋಟಕ ಸತ್ಯ!

“ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಳು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಅವಿವಾಹಿತೆಯಾಗಿದ್ದಳು. ಹೆಚ್ಚಾಗಿ ಹಿಂದಿ ಭಾಷೆಯಲ್ಲೇ ಮಾತನಾಡುತ್ತಿದ್ದಳು.” ಎಂದು ಮಾಲಕಿ ಜಾನಕಮ್ಮ ಹೇಳಿದ್ದಾರೆ. “ಪೂಜಾಳನ್ನು ನೋಡಲು ಓರ್ವ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ.”

“ಕೊನೆಯ ಬಾರಿಗೆ ನಾನು ಪೂಜಾಳನ್ನು ಕಳೆದ ಗುರುವಾರ ನೋಡಿದ್ದೆ. ಆಕೆ ದಿನಸಿ ಸಾಮಗ್ರಿಗಳನ್ನು ತರಲು ಮೂರನೇ ಮಹಡಿಯಿಂದ ಕೆಳಗಿಳಿದು ಬರುತ್ತಿದ್ದಳು. ಆನಂತರ ಆಕೆ ಕಾಣಿಸಿಕೊಂಡಿರಲಿಲ್ಲ.” “ಇಂದು ಪಕ್ಕದ ಮನೆಯ ಯುವಕರು ಮನೆಯಿಂದ ಭಾರಿ ದುರ್ನಾತ ಬರುತ್ತಿದೆ ಎಂದು ತಿಳಿಸಿದರು. ತಕ್ಷಣ ಬಾಗಿಲು ಒಡೆದು ನೋಡಿದಾಗ ಪೂಜಾ ಬೆತ್ತಲಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮೃತದೇಹ ಸಂಪೂರ್ಣವಾಗಿ ಕೊಳೆತು ಹೋಗಿತ್ತು.” ಎಂದು ಹೇಳಿದ್ದಾರೆ.

ಮನೆ ಮಾಲಕಿ ಹೇಳಿಕೆಯಂತೆ, ಪೂಜಾ ಜೊತೆ ಜಗಳವಾಡುತ್ತಿದ್ದ ಆ ಯುವಕ ಯಾರು? ಗುರುವಾರದ ನಂತರ ನಡೆದಿದ್ದೇನು? ಎಂಬ ಪ್ರಶ್ನೆಗಳು ಈಗ ಕಾಡುತ್ತಿವೆ. ಬೆತ್ತಲೆ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿರುವುದು ಇದು ವ್ಯವಸ್ಥಿತ ಕೊಲೆ ಎಂಬ ಅನುಮಾನವನ್ನು ಬಲಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Mon, 27 April 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us