ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಸರಣಿ ಕೊಲೆ ಪ್ರಕರಣ; ಆ 15 ದಿನಗಳಲ್ಲಿ ಏನಾಯಿತು? ಇಲ್ಲಿದೆ ಕಂಪ್ಲೀಟ್ ಟೈಮ್‌ಲೈನ್

ಬೆಂಗಳೂರಿನ ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ದಂಗಾಗಿಸಿದೆ. ಅಕ್ಟೋಬರ್ 14ರಿಂದ ನವೆಂಬರ್ 4ರವರೆಗೆ ಪತ್ನಿ, ಅತ್ತೆ, ಸಂಬಂಧಿಕರು ಸೇರಿದಂತೆ ಏಳು ಮಂದಿಯ ಹತ್ಯೆಗೆ ಆರೋಪಿ ಇಂದು ಶೇಖರ್ ಹಾಗೂ ಆತನ ಅಪ್ರಾಪ್ತ ಮಗಳು ರೂಪಿಸಿದ ಸಂಚು, ಮೃತದೇಹಗಳ ವಿಲೇವಾರಿ ಸೇರಿದಂತೆ ಕಂಪ್ಲೀಟ್ ಟೈಮ್​ಲೈನ್ ಮಾಹಿತಿ ಇಲ್ಲಿದೆ.

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಸರಣಿ ಕೊಲೆ ಪ್ರಕರಣ; ಆ 15 ದಿನಗಳಲ್ಲಿ ಏನಾಯಿತು? ಇಲ್ಲಿದೆ ಕಂಪ್ಲೀಟ್ ಟೈಮ್‌ಲೈನ್
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಸರಣಿ ಕೊಲೆ ಪ್ರಕರಣ
Edited By:

Updated on: Nov 07, 2026 | 11:22 AM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹಂತಕ ಇಂದುಶೇಖರ್ ಭೀಕರವಾಗಿ ಹತ್ಯೆಗೈದಿದ್ದಾನೆ.
  • ಅಕ್ಟೋಬರ್ 14ರಿಂದ ನವೆಂಬರ್ 4ರವರೆಗೆ ನಡೆದ ಹತ್ಯೆಗಳ ಸಂಪೂರ್ಣ ಟೈಮ್‌ಲೈನ್ ಇಲ್ಲಿದೆ.
  • ಬಾಲಕ ಯತೀನ್ ಸೇರಿ ಇನ್ನಿಬ್ಬರ ಹತ್ಯೆಗೂ ಆರೋಪಿ ಸಂಚು ರೂಪಿಸಿದ್ದ.

ಬೆಂಗಳೂರು, ನವೆಂಬರ್ 07: ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಾಷ್ಯಂ ಸರ್ಕಲ್ ಸಮೀಪ ನಡೆದ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪತ್ನಿ, ಅತ್ತೆ, ಸಂಬಂಧಿಕರು ಸೇರಿದಂತೆ ಏಳು ಮಂದಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆರೋಪಿ ಇಂದುಶೇಖರ್, ಈ ಕೃತ್ಯಕ್ಕೆ ಮೊದಲೇ ವ್ಯವಸ್ಥಿತವಾಗಿ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಕೊಲೆ ಮಾಡುವುದಕ್ಕೂ ಮುನ್ನ ನಿದ್ದೆ ಮಾತ್ರೆ, ಪ್ಲಾಸ್ಟಿಕ್ ಚೀಲ, ಹಗ್ಗ ಖರೀದಿಸಿದ್ದ ಆರೋಪಿ, ಪ್ರತಿಯೊಂದು ಹತ್ಯೆಯ ಬಳಿಕ ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಿಗೆ ವಿಲೇವಾರಿ ಮಾಡಿದ್ದ. ಅಷ್ಟೇ ಅಲ್ಲ, ಯಾರಿಗೂ ಅನುಮಾನ ಬಾರದಂತೆ ಕುಟುಂಬದವರು ಪ್ರವಾಸಕ್ಕೆ ಹೋಗಿದ್ದಾರೆ ಎಂದು ಸುಳ್ಳು ಕಥೆಯನ್ನೂ ಕಟ್ಟಿದ್ದ. ಅಕ್ಟೋಬರ್ 14ರಂದು ಆರಂಭವಾದ ಈ ಭೀಕರ ಸರಣಿ ಹತ್ಯೆಗಳು ನವೆಂಬರ್ 4ರಂದು ಆರೋಪಿಗಳ ಬಂಧನದೊಂದಿಗೆ ಬೆಳಕಿಗೆ ಬಂದಿವೆ. ಹಾಗಾದರೆ, ಈ 15 ದಿನಗಳಲ್ಲಿ ಏನೇನಾಯಿತು? ಏಳು ಮಂದಿಯ ಹತ್ಯೆ ಯಾವಾಗ ನಡೆಯಿತು? ಹತ್ಯೆ ನಡೆದ ಸಂಪೂರ್ಣ ಟೈಮ್‌ಲೈನ್ ಇಲ್ಲಿದೆ.

ಅಕ್ಟೋಬರ್ 14: ಪತ್ನಿ ಸುನೀತಾ ಹತ್ಯೆಗೆ ಸ್ಕೆಚ್!

  • ಅಕ್ಟೋಬರ್ 14, ಬುಧವಾರ: ಪತ್ನಿ ಸುನೀತಾ ಜೊತೆ ಜಗಳವಾಡಿದ್ದ ಇಂದುಶೇಖರ್, ಆಕೆಯನ್ನು ಹತ್ಯೆ ಮಾಡಲು ನಿರ್ಧರಿಸಿದ್ದ.
  •  ಅಂದೇ ಹತ್ಯೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದ ಆರೋಪಿ, ನಿದ್ದೆ ಮಾತ್ರೆಗಳು, ಮೃತದೇಹಗಳನ್ನು ತುಂಬಲು ಪ್ಲಾಸ್ಟಿಕ್ ಚೀಲಗಳು ಹಾಗೂ ಕಟ್ಟಲು ಹಗ್ಗ ಖರೀದಿಸಿದ್ದ.
  •  ಅಕ್ಟೋಬರ್ 16, ಶುಕ್ರವಾರ: ಪತ್ನಿಯ ಹತ್ಯೆಗೆ ಸಜ್ಜಾಗಿದ್ದ ಇಂದುಶೇಖರ್, ರಾತ್ರಿ ಮಾಂಸಾಹಾರದ ಅಡುಗೆ ಮಾಡಿ ಮದ್ಯ ಸೇವಿಸಿದ್ದ.
  •  ಪತ್ನಿ ಸುನೀತಾಗೆ ಮದ್ಯದಲ್ಲಿ ಮತ್ತೇರಿಸುವ ಮಾತ್ರೆ ಬೆರೆಸಿ ನೀಡಿದ್ದ. ಆಕೆ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಕಾಯುತ್ತಿದ್ದ.
  •  ಬಳಿಕ ರುಬ್ಬುವ ಕಲ್ಲಿನಿಂದ ಸುನೀತಾಳ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದ.
  •  ಈ ಭೀಕರ ಕೃತ್ಯವನ್ನು ಕಣ್ಣಾರೆ ಕಂಡ ಅಪ್ರಾಪ್ತ ಮಗಳು ಆಘಾತಕ್ಕೊಳಗಾಗಿದ್ದಳು.
  •  ಆದರೆ, ತಂದೆ ಮಗಳನ್ನು ಮನವೊಲಿಸಿ ತನ್ನ ಕೃತ್ಯಕ್ಕೆ ಸಹಕರಿಸುವಂತೆ ಮಾಡಿದ್ದ ಎನ್ನಲಾಗಿದೆ.
  •  ತಂದೆ-ಮಗಳು ಸೇರಿ ಸುನೀತಾಳ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಪ್ಯಾಕ್ ಮಾಡಿದ್ದರು.
  •  ಬಳಿಕ ಮೃತದೇಹವನ್ನು ಮನೆಯ ಬೆಡ್‌ರೂಮ್‌ನಲ್ಲಿಯೇ ಇರಿಸಿದ್ದ ಇಂದುಶೇಖರ್.

ಅಕ್ಟೋಬರ್ 17-19: ಅತ್ತೆ ರೂಪವತಿಯನ್ನೂ ಬಿಡದ ಹಂತಕ!

  • ಅಕ್ಟೋಬರ್ 17, ಶನಿವಾರ: ಮಗಳು ಸುನೀತಾಳಿಗೆ ರೂಪವತಿ ನಿರಂತರವಾಗಿ ಕರೆ ಮಾಡಿದ್ದರು. ಆದರೆ, ಸುನೀತಾಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
  •  ಇದರಿಂದ ಅನುಮಾನಗೊಂಡ ರೂಪವತಿ, ಅಳಿಯ ಇಂದುಶೇಖರ್‌ಗೆ ಕರೆ ಮಾಡಿದ್ದರು.
  •  ಈ ವೇಳೆ ಸುನೀತಾ ಮನೆಯಲ್ಲಿಯೇ ಇದ್ದಾಳೆ, ಮನೆಗೆ ಬನ್ನಿ ಎಂದು ರೂಪವತಿಯನ್ನು ಆಹ್ವಾನಿಸಿದ್ದ ಇಂದುಶೇಖರ್.
  •  ಅಕ್ಟೋಬರ್ 18, ಭಾನುವಾರ: ಬೆಳಗ್ಗೆ ಭಾಷ್ಯಂ ಸರ್ಕಲ್ ಬಳಿಯ ಅಳಿಯನ ಮನೆಗೆ ರೂಪವತಿ ಬಂದಿದ್ದರು.
  •  ಮನೆಗೆ ಬಂದ ಕೂಡಲೇ ಮಗಳು ಸುನೀತಾ ಎಲ್ಲಿ ಎಂದು ಪ್ರಶ್ನಿಸಿದ್ದರು. ಆದರೆ, ಇಂದುಶೇಖರ್ ದ್ವಂದ್ವ ಉತ್ತರ ನೀಡಿದ್ದ.
  • ಈ ಸಂದರ್ಭದಲ್ಲಿ ಅಪ್ರಾಪ್ತ ಮಗಳು ತಂದೆಗೆ ಸಾಥ್ ನೀಡಿದ್ದಳು.
  •  ಅಜ್ಜಿ ರೂಪವತಿಗೆ ಊಟ ಮಾಡುವಂತೆ ಹೇಳಿದ್ದ ಬಾಲಕಿ, ಮಾಂಸಾಹಾರದ ಊಟ ಬಡಿಸಿ ಮದ್ಯವನ್ನೂ ನೀಡಿದ್ದಳು.
  •   ಇದೇ ವೇಳೆ ಟಿವಿ ಸೌಂಡ್ ಜೋರಾಗಿ ಇಟ್ಟುಕೊಂಡು ಊಟ ಮಾಡುತ್ತಿದ್ದ ರೂಪವತಿಯ ತಲೆಗೆ ಹಿಂದಿನಿಂದ ರುಬ್ಬುವ ಕಲ್ಲಿನಿಂದ ಹೊಡೆದು ಇಂದುಶೇಖರ್ ಹತ್ಯೆ ಮಾಡಿದ್ದ.
  •   ಬಳಿಕ ತಂದೆ-ಮಗಳು ಸೇರಿ ರೂಪವತಿಯ ಮೃತದೇಹವನ್ನೂ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿದ್ದರು
  •   ಅಕ್ಟೋಬರ್ 19, ಸೋಮವಾರ: ರಾತ್ರಿ ಮಗಳ ಸಹಾಯದಿಂದ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿಯ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿದ್ದ.
  • ತಮಿಳುನಾಡಿನ ಸೇಲಂ ಮತ್ತು ಧರ್ಮಪುರಿ ನಡುವಿನ ಘಾಟ್ ಪ್ರದೇಶದಲ್ಲಿ ಎರಡೂ ಮೃತದೇಹಗಳನ್ನು ಎಸೆದು ಬಂದಿದ್ದರು.
  •   ಆದರೆ, ಸುನೀತಾ ಮತ್ತು ರೂಪವತಿಯ ಮೊಬೈಲ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇದರಿಂದ ಅವರಿಬ್ಬರೂ ಸಂಪರ್ಕಕ್ಕೆ ಸಿಗದಿರುವ ಬಗ್ಗೆ ತಕ್ಷಣ ಅನುಮಾನ ಮೂಡದಂತೆ ನೋಡಿಕೊಂಡಿದ್ದರು.

ಅಕ್ಟೋಬರ್ 23-27: ಶಿವಕುಮಾರ್, ದಿವ್ಯಾ, ಪುನೀತ್ ಹತ್ಯೆ

  •  ಅಕ್ಟೋಬರ್ 23, ಶುಕ್ರವಾರ: ಶಿವಕುಮಾರ್ ತನ್ನ ಅಕ್ಕ ಹಾಗೂ ತಾಯಿಗೆ ಕರೆ ಮಾಡಿದ್ದ. ಆದರೆ, ಯಾರಿಂದಲೂ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಭಾವ ಇಂದುಶೇಖರ್‌ಗೆ ಕರೆ ಮಾಡಿದ್ದ.
  • ಈ ವೇಳೆ ಸುನೀತಾ ಹಾಗೂ ಅತ್ತೆ ರೂಪವತಿ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದ ಇಂದುಶೇಖರ್.
  • ಅಷ್ಟೇ ಅಲ್ಲ, ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಶಿವಕುಮಾರ್‌ಗೆ ಆಹ್ವಾನ ನೀಡಿದ್ದ.
  • ಅಕ್ಟೋಬರ್ 24, ಶನಿವಾರ: ಭಾವನ ಮಾತು ನಂಬಿದ ಶಿವಕುಮಾರ್, ಪತ್ನಿ ದಿವ್ಯಾ ಹಾಗೂ ಮಗ ಪುನೀತ್ ಜೊತೆ ಅಕ್ಕನ ಮನೆಗೆ ಬಂದಿದ್ದ.
  • ರಾತ್ರಿ ದಂಪತಿಗೆ ಮಾಂಸಾಹಾರದ ಊಟ ಹಾಗೂ ಮದ್ಯದ ಜೊತೆ ನಿದ್ದೆ ಮಾತ್ರೆ ನೀಡಲಾಗಿತ್ತು.
  • ಊಟದ ಬಳಿಕ ದಿವ್ಯಾ ಮತ್ತು ಪುನೀತ್ ಬೆಡ್‌ರೂಮ್‌ನಲ್ಲಿ ಮಲಗಿದ್ದರೆ, ಶಿವಕುಮಾರ್ ಹಾಲ್‌ನಲ್ಲಿ ಮಲಗಿದ್ದ.
  • ಎಲ್ಲರೂ ನಿದ್ದೆಗೆ ಜಾರಿದ ಬಳಿಕ ಹೊಂಚು ಹಾಕುತ್ತಿದ್ದ ಇಂದುಶೇಖರ್, ರುಬ್ಬುವ ಕಲ್ಲಿನಿಂದ ಶಿವಕುಮಾರ್ ತಲೆಗೆ ಹೊಡೆದು ಹತ್ಯೆ ಮಾಡಿದ್ದ.
  • ಬಳಿಕ ಅಪ್ರಾಪ್ತ ಮಗಳ ಸಹಾಯದಿಂದ ಶಿವಕುಮಾರ್ ಮೃತದೇಹವನ್ನು ಪ್ಯಾಕ್ ಮಾಡಿ ಅಡುಗೆಮನೆಯಲ್ಲಿ ಇರಿಸಲಾಗಿತ್ತು.
  • ಅಕ್ಟೋಬರ್ 25, ಭಾನುವಾರ: ಬೆಳಗಿನ ಜಾವ ವಾಶ್‌ರೂಮ್‌ಗೆ ಹೋಗಲು ಎದ್ದಿದ್ದ ದಿವ್ಯಾ, ಪತಿ ಶಿವಕುಮಾರ್ ಎಲ್ಲಿ ಎಂದು ಪ್ರಶ್ನಿಸಿದ್ದಳು.
  • ಈ ವೇಳೆ ಆಕೆಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಇಂದುಶೇಖರ್ ಹತ್ಯೆ ಮಾಡಿದ್ದ.
  • ತಾಯಿಯ ಕಿರುಚಾಟ ಕೇಳಿ ಓಡಿಬಂದ ಬಾಲಕ ಪುನೀತ್‌ನನ್ನೂ ಹಂತಕರು ಕೊಲೆ ಮಾಡಿದ್ದರು.
  • ಬಳಿಕ ತಂದೆ-ಮಗಳು ಸೇರಿ ದಿವ್ಯಾ ಮತ್ತು ಪುನೀತ್ ಮೃತದೇಹಗಳನ್ನೂ ಪ್ಯಾಕ್ ಮಾಡಿದ್ದರು.
  • ಅಕ್ಟೋಬರ್ 27, ಮಂಗಳವಾರ: ಬೆಳಗಿನ ಜಾವ ಮೂರು ಮೃತದೇಹಗಳನ್ನು ಕಾರಿನ ಡಿಕ್ಕಿಯಲ್ಲಿ ಇಟ್ಟುಕೊಂಡು ಆರೋಪಿಗಳು ಮನೆಯಿಂದ ಹೊರಟಿದ್ದರು.
  • ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶಿವಕುಮಾರ್ ಮತ್ತು ದಿವ್ಯಾ ಮೃತದೇಹಗಳನ್ನು ಎಸೆದಿದ್ದರು.
  • ಆದರೆ, ಬಾಲಕ ಪುನೀತ್‌ನ ಮೃತದೇಹವನ್ನು ಬೆಂಗಳೂರಿಗೆ ವಾಪಸ್ ತಂದಿದ್ದರು.
  • ಇತ್ತ ದಿವ್ಯಾಳ ಮೊಬೈಲ್‌ನಿಂದ ಆಕೆಯ ತಾಯಿಗೆ ಸಂದೇಶ ಕಳುಹಿಸಿದ್ದ ಇಂದುಶೇಖರ್, ನಾವು ಪ್ರವಾಸಕ್ಕೆ ಬಂದಿದ್ದೇವೆ ಎಂದು ನಂಬಿಸಿದ್ದ.

ಅಕ್ಟೋಬರ್ 31- ನವೆಂಬರ್ 2: ಶಂಕರ್, ನಳಿನಿ ಹತ್ಯೆ; ಬಾಲಕ ಯತೀನ್‌ಗೂ ಸಂಚು!

  • ಅಕ್ಟೋಬರ್ 31, ಶನಿವಾರ: ಶಂಕರ್ ತನ್ನ ಅಕ್ಕ, ತಾಯಿ ಹಾಗೂ ಶಿವಕುಮಾರ್‌ಗೆ ಕರೆ ಮಾಡಿದ್ದ. ಆದರೆ, ಯಾರೂ ಕರೆ ಸ್ವೀಕರಿಸಿರಲಿಲ್ಲ.
  • ಬಳಿಕ ಭಾವ ಇಂದುಶೇಖರ್‌ಗೆ ಕರೆ ಮಾಡಿದ್ದ ಶಂಕರ್.
  • ಈ ವೇಳೆ ಅಕ್ಕ, ತಾಯಿ, ಶಿವು, ದಿವ್ಯಾ ಹಾಗೂ ಅವರ ಮಗ ಎಲ್ಲರೂ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದ ಆರೋಪಿ.
  • ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಶಂಕರ್‌ನನ್ನು ಆಹ್ವಾನಿಸಿದ್ದ.
  • ನವೆಂಬರ್ 1, ಭಾನುವಾರ: ಪತ್ನಿ ನಳಿನಿ ಹಾಗೂ ಮಗ ಯತೀನ್ ಜೊತೆ ಶಂಕರ್ ಅಕ್ಕನ ಮನೆಗೆ ಬಂದಿದ್ದ.
  • ರಾತ್ರಿ ದಂಪತಿಗೆ ಮಾಂಸಾಹಾರದ ಊಟ ಮತ್ತು ಮದ್ಯದ ಜೊತೆ ನಿದ್ದೆ ಮಾತ್ರೆ ನೀಡಲಾಗಿತ್ತು.
  • ದಂಪತಿ ನಿದ್ದೆಯ ಮಂಪರಿಗೆ ಜಾರುತ್ತಿದ್ದಂತೆ ಶಂಕರ್ ಮತ್ತು ನಳಿನಿ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿತ್ತು.
  • ಬಳಿಕ ತಂದೆ-ಮಗಳು ಸೇರಿ ಇಬ್ಬರ ಮೃತದೇಹಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಿದ್ದರು.
  • ಆದರೆ, ಬಾಲಕ ಯತೀನ್‌ನನ್ನು ತಕ್ಷಣವೇ ಹತ್ಯೆ ಮಾಡದೆ, ಆತನ ಕೊಲೆಗೆ ಬೇರೆ ದಿನ ನಿಗದಿಪಡಿಸಿದ್ದರು ಎನ್ನಲಾಗಿದೆ.
  • ಅಷ್ಟರಲ್ಲಿಯೂ ಬಾಲಕ ಪುನೀತ್‌ನ ಮೃತದೇಹ ಕಾರಿನ ಡಿಕ್ಕಿಯಲ್ಲಿಯೇ ಇತ್ತು.
  • ಇದೇ ರಾತ್ರಿ ಮೂರು ಮೃತದೇಹಗಳನ್ನು ವಿಲೇವಾರಿ ಮಾಡಲು ಆರೋಪಿಗಳು ಹೊರಟಿದ್ದರು.
  • ನವೆಂಬರ್ 2, ಸೋಮವಾರ: ಬೆಳಗಿನ ಜಾವ ಶಿರಾಡಿ ಘಾಟ್ ಬಳಿ ಶಂಕರ್ ಮತ್ತು ನಳಿನಿ ಮೃತದೇಹಗಳನ್ನು ಎಸೆದಿದ್ದರು.
  • ಯಾರಿಗೂ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಅಂದೇ ನಂದಿಬೆಟ್ಟದ ಬಳಿ ಬಾಲಕ ಪುನೀತ್ ಮೃತದೇಹವನ್ನೂ ಎಸೆದಿದ್ದರು.
  • ಈ ಮೂರು ಮೃತದೇಹಗಳನ್ನು ವಿಲೇವಾರಿ ಮಾಡುವಾಗ ಬಾಲಕ ಯತೀನ್ ಕೂಡ ಆರೋಪಿಗಳ ಜೊತೆಯಲ್ಲಿದ್ದ ಎನ್ನಲಾಗಿದೆ.

ನವೆಂಬರ್ 2-3: ಏಳು ಮಂದಿ ನಾಪತ್ತೆ; ಕುಟುಂಬಸ್ಥರಿಂದ ದೂರು

  • ಎರಡು ದಿನಗಳಾದರೂ ಕುಟುಂಬದ ಏಳು ಮಂದಿ ಯಾರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಸಂಬಂಧಿಕರಲ್ಲಿ ಆತಂಕ ಹೆಚ್ಚಾಗಿತ್ತು.
  • ನವೆಂಬರ್ 2, ಸೋಮವಾರ: ಕುಟುಂಬಸ್ಥರು ಶ್ರೀರಾಮಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು.
  • ಆದರೆ, ರಾತ್ರಿ ತಡವಾಗಿದ್ದರಿಂದ ಮರುದಿನ ದೂರು ನೀಡಲು ನಿರ್ಧರಿಸಿದ್ದರು.
  •  ನವೆಂಬರ್ 3, ಮಂಗಳವಾರ: ನಳಿನಿ ಅವರ ತಾಯಿ ತುಂಗಮ್ಮ, ಏಳು ಮಂದಿ ಕಾಣೆಯಾಗಿದ್ದಾರೆ ಎಂದು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
  • ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ನವೆಂಬರ್ 4: ಟವರ್ ಡಂಪ್ ಮೂಲಕ ಸಿಕ್ಕಿಬಿದ್ದ ಹಂತಕರು!

  • ನವೆಂಬರ್ 4, ಬುಧವಾರ: ಏಳು ಮಂದಿ ನಾಪತ್ತೆಯಾಗಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದ ಶ್ರೀರಾಮಪುರ ಪೊಲೀಸರು, ಮೊಬೈಲ್ ಟವರ್ ಡಂಪ್ ಪರಿಶೀಲನೆ ನಡೆಸಿದ್ದರು.
  • ಈ ವೇಳೆ ಒಂದೇ ಪ್ರದೇಶದಲ್ಲಿ ಆರು ಮಂದಿಯ ಮೊಬೈಲ್ ನೆಟ್‌ವರ್ಕ್ ದಾಖಲಾಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.
  • ಈ ಆರು ಮೊಬೈಲ್‌ಗಳ ಪೈಕಿ ಪ್ರಮುಖ ಆರೋಪಿ ಇಂದುಶೇಖರ್‌ನ ಮೊಬೈಲ್ ಸಂಖ್ಯೆಯೂ ಆ್ಯಕ್ಟಿವ್ ಆಗಿರುವುದು ಪತ್ತೆಯಾಗಿತ್ತು.
  • ಇದರಿಂದ ಅನುಮಾನಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಂದುಶೇಖರ್ ಹಾಗೂ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದಿದ್ದರು.
  • ಮತ್ತೊಂದೆಡೆ, ಬಾಲಕ ಯತೀನ್‌ನನ್ನು ಪೊಲೀಸರು ರಕ್ಷಿಸಿದ್ದರು.
  • ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಏಳು ಮಂದಿಯ ಹತ್ಯೆಯ ಭೀಕರ ರಹಸ್ಯ ಬಯಲಾಗಿದೆ ಎನ್ನಲಾಗಿದೆ.

ಏಳು ಕೊಲೆಗಳ ಹಿಂದಿನ ಭೀಕರ ಸಂಚು: ಇನ್ನೂ ಇಬ್ಬರ ಹತ್ಯೆಗೆ ಪ್ಲಾನ್!

ಪತ್ನಿ ಸುನೀತಾಳಿಂದ ಆರಂಭವಾದ ಹತ್ಯೆಗಳ ಸರಣಿ ಅತ್ತೆ ರೂಪವತಿ, ಸಂಬಂಧಿಕರಾದ ಶಿವಕುಮಾರ್, ದಿವ್ಯಾ, ಪುನೀತ್, ಶಂಕರ್ ಹಾಗೂ ನಳಿನಿ ಹತ್ಯೆಯವರೆಗೆ ಮುಂದುವರಿದಿತ್ತು. ಪ್ರತಿಯೊಂದು ಹತ್ಯೆಗೂ ಮುನ್ನ ಆರೋಪಿಗಳು ಊಟ, ಮದ್ಯ ಹಾಗೂ ನಿದ್ದೆ ಮಾತ್ರೆಗಳ ಮೂಲಕ ಸಂತ್ರಸ್ತರನ್ನು ಅಸಹಾಯಕರನ್ನಾಗಿ ಮಾಡುತ್ತಿದ್ದರು ಎನ್ನಲಾಗಿದೆ. ಹತ್ಯೆಗೆ ರುಬ್ಬುವ ಕಲ್ಲನ್ನೇ ಬಳಸಲಾಗಿತ್ತು. ಮೃತದೇಹಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಕಾರಿನಲ್ಲಿ ಸಾಗಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆಯಲಾಗಿತ್ತು.

Loading...

ಕುಟುಂಬಸ್ಥರಿಗೆ ಅನುಮಾನ ಬರದಂತೆ ಮೃತರು ಪ್ರವಾಸಕ್ಕೆ ಹೋಗಿದ್ದಾರೆ ಎಂಬ ಸುಳ್ಳು ಕಥೆಯನ್ನೂ ಸೃಷ್ಟಿಸಲಾಗಿತ್ತು. ಅಚ್ಚರಿಯ ಸಂಗತಿಯೆಂದರೆ, ಬಾಲಕ ಯತೀನ್‌ನನ್ನೂ ಹತ್ಯೆ ಮಾಡಲು ಇಂದುಶೇಖರ್ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲ, ಇನ್ನೂ ಇಬ್ಬರನ್ನು ಹತ್ಯೆ ಮಾಡುವ ಸಂಚನ್ನೂ ರೂಪಿಸಿದ್ದ ಎಂಬ ಆಘಾತಕಾರಿ ವಿಚಾರ ವಿಚಾರಣೆಯಲ್ಲಿ ಬಯಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More
Loading...
Unable to load recommendations.
Follow Us