ಐಷಾರಾಮಿ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ: ನಾಲ್ವರು ಆರೋಪಿಗಳ ಬಂಧನ!

ಐಷಾರಾಮಿ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಸರಣಿ ವಂಚನೆ ಎಸಗುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.74 ಕೋಟಿ ರೂಪಾಯಿ ಮೌಲ್ಯದ ಫಾರ್ಚೂನರ್, ವೋಲ್ವೋ ಸೇರಿದಂತೆ 7 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರುಗಳನ್ನು ಸರಣಿಯಾಗಿ ಅಡಮಾನವಿಟ್ಟು ವಂಚಿಸುತ್ತಿದ್ದ ಈ ಜಾಲದಿಂದ ಮೂಲ ಮಾಲೀಕರನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.

ಐಷಾರಾಮಿ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ: ನಾಲ್ವರು ಆರೋಪಿಗಳ ಬಂಧನ!
ಆರೋಪಿಗಳೊಂದಿಗೆ ಆಡುಗೋಡಿ ಪೊಲೀಸರು
Edited By:

Updated on: Jul 28, 2026 | 1:55 PM

ಮುಖ್ಯಾಂಶಗಳು

  • ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದರು.
  • ಆರೋಪಿಗಳಿಂದ 1.74 ಕೋಟಿ ಮೌಲ್ಯದ 7 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ಸರಣಿ ಅಡಮಾನ ಜಾಲದಿಂದ ಕಾರುಗಳ ಮೂಲ ಮಾಲೀಕರ ಪತ್ತೆ ಸವಾಲಾಗಿದೆ.

ಬೆಂಗಳೂರು, ಜುಲೈ 28: ಐಷಾರಾಮಿ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಣಿ ವಂಚನೆ ಎಸಗುತ್ತಿದ್ದ ಭಾರಿ ಜಾಲವನ್ನು ಆಡುಗೋಡಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 1.74 ಕೋಟಿ ರೂಪಾಯಿ ಮೌಲ್ಯದ 7 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಭಾಕರ್, ಪ್ರಶಾಂತ್, ವೇಣುಗೌಡ ಹಾಗೂ ಭಾಗೇಶ್ ಬಂಧಿತ ಆರೋಪಿಗಳು. ಇವರಿಂದ 2 ಫಾರ್ಚೂನರ್, 1 ವೋಲ್ವೋ, 1 ಇನ್ನೋವಾ, ಫೋರ್ಡ್ ಹಾಗೂ ಸ್ವಿಫ್ಟ್ ಸೇರಿದಂತೆ ಒಟ್ಟು 7 ಕಾರುಗಳನ್ನು ಜಪ್ತಿ ಮಾಡಲಾಗಿದೆ.

ವಂಚನೆಯ ಜಾಲ ಹೇಗಿತ್ತು?

ಬಂಧಿತ ಆರೋಪಿಗಳು ಕಾರು ಬ್ರೋಕರ್ ಕೆಲಸದ ನೆಪದಲ್ಲಿ ವಂಚನೆಗೆ ಇಳಿಯುತ್ತಿದ್ದರು. 40 ರಿಂದ 50 ಲಕ್ಷ ರೂಪಾಯಿ ಮೌಲ್ಯದ ಕಾರುಗಳನ್ನು ಅಡವಿಟ್ಟು 4-5 ಲಕ್ಷ ರೂಪಾಯಿ ಸಾಲ ಪಡೆಯುವ ಆಟೋಮೊಬೈಲ್ ಮಾಲೀಕರನ್ನು ಈ ಜಾಲ ಟಾರ್ಗೆಟ್ ಮಾಡುತ್ತಿತ್ತು. ಮಾಲೀಕರು ಕಾರು ಅಡಮಾನವಿಟ್ಟ ತಕ್ಷಣ, ಆ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು ಅಥವಾ ಒರಿಜಿನಲ್ ಆರ್‌ಸಿ (RC) ಕಾರ್ಡ್ ಟ್ಯಾಂಪರ್ ಮಾಡಿ ಹೆಸರು ಬದಲಾಯಿಸುತ್ತಿದ್ದರು.

ಬಳಿಕ, ಹೆಸರು ಬದಲಾಯಿಸಿದ ನಕಲಿ ದಾಖಲೆಗಳೊಂದಿಗೆ ಮತ್ತೊಬ್ಬ ಡೀಲರ್ ಬಳಿ ಹೋಗಿ, 4-5 ಲಕ್ಷಕ್ಕೆ ಅಡಮಾನವಿದ್ದ ಕಾರನ್ನು 20 ರಿಂದ 25 ಲಕ್ಷ ರೂಪಾಯಿಗೆ ಮತ್ತೆ ಅಡ ಇಡುತ್ತಿದ್ದರು. ಬಂದ ಹಣದಲ್ಲಿ ಮೂಲ ಮಾಲೀಕರಿಗೆ 4-5 ಲಕ್ಷ ನೀಡಿ ಕಾರು ಬಿಡಿಸಿಕೊಂಡು, ಅದನ್ನು ಮತ್ತೆ ಬೇರೊಬ್ಬರಿಗೆ ಅಡಮಾನವಿಡುತ್ತಿದ್ದರು. ಹೀಗೆ ಸರಣಿಯಾಗಿ ಹಲವರಿಗೆ ಅಡಮಾನವಿಟ್ಟು ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದರು.

ಪೊಲೀಸರಿಗೆ ಸವಾಲಾದ ‘ಮೂಲ ಮಾಲೀಕರು’

ಆರೋಪಿಗಳು ಸೃಷ್ಟಿಸಿದ್ದ ನಕಲಿ ದಾಖಲೆಗಳು ಮತ್ತು ಸರಣಿ ಅಡಮಾನ ಪ್ರಕ್ರಿಯೆಯಿಂದಾಗಿ, ಜಪ್ತಿಯಾಗಿರುವ ಕಾರುಗಳ ನಿಜವಾದ ಮೂಲ ಮಾಲೀಕರು ಯಾರು ಎಂಬುದನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಮ್ಮ ಕಾರನ್ನು ಪಡೆದು ವಾಪಸ್ ನೀಡದೆ ವಂಚಿಸಲಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಆಡುಗೋಡಿ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us