
ಬೆಂಗಳೂರು, ಜೂನ್ 02: ಕರ್ನಾಟಕದ ಪ್ರಮುಖ ನಗರಗಳಲ್ಲಿ ಮತ್ತು ವಿಶೇಷವಾಗಿ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಅತ್ಯಂತ ಉತ್ತಮ ಹಾಗೂ ತೃಪ್ತಿದಾಯಕ ಮಟ್ಟದಲ್ಲಿದೆ. ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಮಳೆ ಹಾಗೂ ಬೀಸಿದ ಬಲವಾದ ಬಿರುಗಾಳಿಯಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕಗಳು ತಂಗಿದ್ದು, ಗಾಳಿಯು ಶುದ್ಧವಾಗಿದೆ.
ಬೆಂಗಳೂರು ನಗರದಲ್ಲಿ ಇಂದು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 42 ರಿಂದ 44ರಷ್ಟು ದಾಖಲಾಗಿದೆ. ಹವಾಮಾನ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಪನದ ಪ್ರಕಾರ, 0 ಇಂದ 50 ರವರೆಗಿನ ಸೂಚ್ಯಂಕವನ್ನು ‘ಉತ್ತಮ’ (Good) ಎಂದು ಪರಿಗಣಿಸಲಾಗುತ್ತದೆ.
ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರೆ ಜಿಲ್ಲೆಗಳು ಮತ್ತು ನಗರಗಳಲ್ಲೂ ಇಂದಿನ ವಾಯು ಗುಣಮಟ್ಟ ಬಹುತೇಕ ಕಡೆ ಉತ್ತಮವಾಗಿದೆ. ಇಂದಿನ ದೇಶದ ಅತ್ಯಂತ ಸ್ವಚ್ಛ ಗಾಳಿಯಿರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಚಿಕ್ಕಮಗಳೂರು (AQI 17) ಮತ್ತು ಗದಗ (AQI 19) ಮೊದಲ ಸಾಲಿನಲ್ಲಿ ನಿಂತಿವೆ. ಇಲ್ಲಿನ ಪರಿಸರ ಅತ್ಯಂತ ಶುದ್ಧವಾಗಿದೆ. ಇತ್ತೀಚಿನ ಮಳೆಯಿಂದಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದ್ದು, ಗಾಳಿ ಸ್ವಚ್ಛವಾಗಿದೆ. ಮೈಸೂರು, ಮಂಡ್ಯ, ಬೆಳಗಾವಿ ಮತ್ತು ಬಾಗಲಕೋಟೆ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 35 ರಿಂದ 60 ರ ಆಸುಪಾಸಿನಲ್ಲಿದ್ದು, ‘ಉತ್ತಮ’ ಹಾಗೂ ‘ತೃಪ್ತಿದಾಯಕ’ ಪರಿಸರವನ್ನು ಹೊಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.