ತನ್ನ ಪಾಸ್ಪೋರ್ಟ್​, ವೀಸಾದಲ್ಲಿ ಸ್ನೇಹಿತನನ್ನು ಯುಕೆಗೆ ಕಳಿಸಿದ ಆರೋಪಿ ಅರೆಸ್ಟ್!

ಶ್ರೀಲಂಕಾ ಪ್ರಜೆಯೊಬ್ಬ ತನ್ನ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಬಳಸಿ ಸ್ನೇಹಿತನನ್ನು ಯುಕೆಗೆ ಕಳುಹಿಸಿ, ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತನ್ನ ದಾಖಲೆಗಳು ಕಳೆದುಹೋಗಿವೆ ಎಂದು ಸುಳ್ಳು ನಾಟಕವಾಡಿದ ಘಟನೆ ಬೆಂಗಳೂರಿನ ಅಂತಾರಾಷ್ಟ್ಟೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಯುಕೆನಲ್ಲಿ ಆಶ್ರಯ ಪಡೆಯಲು ಈ ಕೃತ್ಯ ನಡೆಸಲಾಗಿದೆ ಎಂದು ಶಂಕಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತನ್ನ ಪಾಸ್ಪೋರ್ಟ್​, ವೀಸಾದಲ್ಲಿ ಸ್ನೇಹಿತನನ್ನು ಯುಕೆಗೆ ಕಳಿಸಿದ ಆರೋಪಿ ಅರೆಸ್ಟ್!
ತನ್ನ ಪಾಸ್ಪೋರ್ಟ್​, ವೀಸಾದಲ್ಲಿ ಸ್ನೇಹಿತನನ್ನು ಯುಕೆಗೆ ಕಳಿಸಿದ ಆರೋಪಿ ಅರೆಸ್ಟ್!
Edited By:

Updated on: Jan 23, 2026 | 8:46 AM

ದೇವನಹಳ್ಳಿ, ಜನವರಿ 23: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಒಂದೇ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಇಬ್ಬರು ವ್ಯಕ್ತಿಗಳು ಬಳಸಿ ಯುಕೆ ಪ್ರಯಾಣಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಶ್ರೀಲಂಕಾ ಮೂಲದ ಕಾಂಡಿಯಾ ರಾಜಗೋಪಾಲ್ ಎಂಬಾತನನ್ನು ಏರ್‌ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

ಪಾಸ್​ಪೋರ್ಟ್​ ಕಾಣೆಯಾಗಿದೆ ಎಂದು ಆರೋಪಿ ಹೈಡ್ರಾಮಾ

ಬಂಧಿತ ಆರೋಪಿ ಕಳೆದ ಭಾನುವಾರ ಯುನೈಟೆಡ್ ಕಿಂಗ್‌ಡಂಗೆ ಪ್ರಯಾಣಿಸಬೇಕಿತ್ತು. ವಿಮಾನ ನಿಲ್ದಾಣದ ಪ್ಯಾಸೆಂಜರ್ ಎಕ್ಸ್‌ಚೇಂಜ್ ಪ್ರದೇಶದಲ್ಲಿ ಫ್ಲೈಟ್‌ಗಾಗಿ ಕಾಯುತ್ತಿದ್ದ ವೇಳೆ, ತನ್ನ ಪಾಸ್‌ಪೋರ್ಟ್ ಹಾಗೂ ವೀಸಾ ಕಳೆದುಹೋಗಿದೆ ಎಂದು ಆರೋಪಿಯು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಬದಲಿ ದಾಖಲಾತಿ ಪಡೆಯಲು ಯತ್ನಿಸಿದ್ದ.ಆದರೆ ಪೊಲೀಸ್ ವಿಚಾರಣೆ ವೇಳೆ ಆರೋಪಿಯ ಸಂಚು ಬಹಿರಂಗವಾಗಿದೆ. ಆರೋಪಿಯ ಸ್ನೇಹಿತ ಶಾರುಷನ್ ಕುನಸೇಕರನ್ ಎಂಬಾತ ಈಗಾಗಲೇ ರಾಜಗೋಪಾಲ್‌ನ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಬಳಸಿ ಯುಕೆ ಪ್ರಯಾಣಿಸಿರುವುದು ತಿಳಿದುಬಂದಿದೆ.

ಈ ಅಕ್ರಮ ನಡೆದಿದ್ದು ಹೇಗೆ?

ಆರೋಪಿ ಮೊದಲೇ ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡು, ತನ್ನ ಮೂಲ ದಾಖಲಾತಿಗಳನ್ನು ನೀಡಿದ್ದಾನೆ. ನಂತರ ದಾಖಲೆಗಳು ಕಳೆದುಹೋಗಿವೆ ಎಂದು ನಾಟಕವಾಡಿ ಅಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಯುಕೆಯಲ್ಲಿ ಶರಣಾರ್ಥಿ (refugee) ಸ್ಥಾನ ಪಡೆಯುವ ಉದ್ದೇಶದಿಂದ ಈ ಕೃತ್ಯ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಮತ್ತೊಬ್ಬ ಆರೋಪಿ ಹೇಗೆ ಕಣ್ತಪ್ಪಿಸಿ ಪ್ರಯಾಣಿಸಿದ್ದಾನೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.