ಬೆಂಗಳೂರಿನ ಅನೇಕ ಪೊಲೀಸ್ ಠಾಣೆಗಳಲ್ಲಿ ಇನ್ಸ್ಪೆಕ್ಟರ್ಗಳೇ ಇಲ್ಲ! ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲು
ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳ ತೀವ್ರ ಕೊರತೆ ಎದುರಾಗಿದೆ. 15ಕ್ಕೂ ಹೆಚ್ಚು ಠಾಣೆಗಳಲ್ಲಿ ಹುದ್ದೆಗಳು ಖಾಲಿಯಿದ್ದು, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಇದು ದೊಡ್ಡ ಸವಾಲಾಗಿದೆ. ಅಸ್ತಿತ್ವದಲ್ಲಿರುವ ಇನ್ಸ್‌ಪೆಕ್ಟರ್‌ಗಳ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ರಾಜಕೀಯ ಹಸ್ತಕ್ಷೇಪದಿಂದ ವರ್ಗಾವಣೆಗಳು ಕೂಡ ವಿಳಂಬವಾಗಿದ್ದು, ಇಲಾಖೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರು, ಜನವರಿ 22: ರಾಜಧಾನಿ ಬೆಂಗಳೂರಿನ (Bangalore) ಹಲವಾರು ಪೊಲೀಸ್ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳ ಕೊರತೆ ತೀವ್ರವಾಗಿ ಕಾಣಿಸಿಕೊಂಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಗರದಲ್ಲೇ 15ಕ್ಕೂ ಹೆಚ್ಚು ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳು ಹಲವು ದಿನಗಳು ಹಾಗೂ ತಿಂಗಳಿನಿಂದ ಖಾಲಿಯಾಗಿವೆ. ಅಮಾನತು, ಕಡ್ಡಾಯ ರಜೆ, ನಿವೃತ್ತಿ ಹಾಗೂ ಭಡ್ತಿ ಪ್ರಕ್ರಿಯೆಗಳ ಪರಿಣಾಮವಾಗಿ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಯಾವೆಲ್ಲ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆ ಖಾಲಿ?
ಶಿವಾಜಿನಗರ, ಸಂಪಿಗೇಹಳ್ಳಿ, ಯಶವಂತಪುರ, ಮಲ್ಲೇಶ್ವರ, ಜ್ಞಾನಭಾರತಿ, ಬಾಗಲೂರು, ವಿವೇಕನಗರ, ಬಂಡೆಪಾಳ್ಯ, ಸದಾಶಿವನಗರ (OOD), ಡಿಜೆ ಹಳ್ಳಿ (OOD), ಕೊತ್ತನೂರು (OOD), ಜಾಲಹಳ್ಳಿ (OOD) ಸೇರಿದಂತೆ ಹಲವು ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯೇ ಉಳಿದಿವೆ.
ಇದಷ್ಟೇ ಅಲ್ಲದೆ, ಮಾಗಡಿ ರೋಡ್ ಟ್ರಾಫಿಕ್, ಮಡಿವಾಳ ಟ್ರಾಫಿಕ್ ಠಾಣೆಗಳು ಹಾಗೂ ಶೇಷಾದ್ರಿಪುರಂ ಎಸಿಪಿ, ಮಲ್ಲೇಶ್ವರ ಎಸಿಪಿ, ಕೆಜಿ ಹಳ್ಳಿ ಎಸಿಪಿ ವ್ಯಾಪ್ತಿಗಳಲ್ಲೂ ಇನ್ಸ್‌ಪೆಕ್ಟರ್ ಮತ್ತು ಎಸಿಪಿ ಹುದ್ದೆಗಳು ಖಾಲಿಯಾಗಿವೆ. ಸರ್ಕಾರವು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲು, ಬೇರೆ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಹೆಚ್ಚುವರಿ ಹೊಣೆ ನೀಡುವುದು ಅಥವಾ OOD ಮೂಲಕ ವ್ಯವಸ್ಥೆ ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವುದೇ ಕಷ್ಟ
ಒಬ್ಬೊಬ್ಬ ಇನ್ಸ್‌ಪೆಕ್ಟರ್‌ಗಳು ಎರಡು ಠಾಣೆಗಳ ಉಸ್ತುವಾರಿ ವಹಿಸಿಕೊಂಡು ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುವುದು ಕಷ್ಟಕರವಾಗಿದೆ. ಹೆಚ್ಚುವರಿ ಹೊಣೆಗಾರಿಕೆಯ ಒತ್ತಡದಿಂದ ಅನೇಕ ಇನ್ಸ್‌ಪೆಕ್ಟರ್‌ಗಳು ಹೈರಾಣಾಗಿದ್ದಾರೆ ಎನ್ನಲಾಗಿದೆ.
ಸಾಮಾನ್ಯ ವರ್ಗಾವಣೆಯ ಪ್ರಕ್ರಿಯೆಯೂ ಸ್ಥಗಿತ
ಇನ್ಸ್‌ಪೆಕ್ಟರ್ ಮತ್ತು ಎಸಿಪಿಗಳ ಸಾಮಾನ್ಯ ವರ್ಗಾವಣೆಯ ಪ್ರಕ್ರಿಯೆಯೂ ಸ್ಥಗಿತಗೊಂಡಿರುವುದು ಇಲಾಖೆಯೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲಿಗೆ ಒಂದು ವರ್ಷಕ್ಕೊಮ್ಮೆ ನಡೆಯುತ್ತಿದ್ದ ವರ್ಗಾವಣೆ ನಿಯಮವನ್ನು ಎರಡು ವರ್ಷಗಳಿಗೆ ಬದಲಾಯಿಸಲಾಗಿತ್ತು. ಆದರೆ ಇದೀಗ 2.4 ವರ್ಷ ಕಳೆದರೂ ಬೆಂಗಳೂರನ್ನು ಸೇರಿಸಿ ಹಲವು ಜಿಲ್ಲೆಗಳ ಇನ್ಸ್‌ಪೆಕ್ಟರ್ ಹಾಗೂ ಎಸಿಪಿಗಳ ಸಾಮಾನ್ಯ ವರ್ಗಾವಣೆ ಇನ್ನೂ ಜಾರಿಯಾಗಿಲ್ಲ.
ಇದನ್ನೂ ಓದಿ: 1997ರ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸ್: 29 ವರ್ಷ ಬಳಿಕ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್ ಸದಸ್ಯ
ಪೊಲೀಸರ ಸಾಮಾನ್ಯ ವರ್ಗಾವಣೆ ಪಟ್ಟಿ ರಿಲೀಸ್‌ಗೆ ಪದೇಪದೇ ಅಡೆತಡೆ ಉಂಟಾಗುತ್ತಿದ್ದು, ಕೆಲ ರಾಜಕೀಯ ನಾಯಕರ ಮುಸುಕಿನ ಗುದ್ದಾಟ ಹಾಗೂ ತಮ್ಮ ತಮ್ಮ ‘ನೆಚ್ಚಿನ’ ಅಧಿಕಾರಿಗಳ ವರ್ಗಾವಣೆಯನ್ನು ತಡೆಯುವ ಪ್ರಯತ್ನಗಳಿಂದಾಗಿ ಪ್ರಕ್ರಿಯೆ ಮುಂದೂಡಲ್ಪಡುತ್ತಿದೆ ಎನ್ನಲಾಗಿದೆ. ಇದರಿಂದಾಗಿ ನಿಗದಿತ ಅವಧಿ ಕಳೆದರೂ ವರ್ಗಾವಣೆ ಆಗದೆ, ಪೊಲೀಸ್ ಇಲಾಖೆಯೊಳಗೆ ಅಸಮಾಧಾನದ ಹೊಗೆ ಕಾಡುತ್ತಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
