ಬೆಂಗಳೂರು ಏರ್ಪೋರ್ಟ್ ಪ್ರಯಾಣಿಕರೇ ಗಮನಿಸಿ: ಹೊಸ ಪಿಕ್ ಅಪ್ ವ್ಯವಸ್ಥೆ ವಿರುದ್ಧ ಟ್ಯಾಕ್ಸಿ ಚಾಲಕರ ಪ್ರತಿಭಟನೆ, ಸಂಚಾರ ಅವ್ಯವಸ್ಥೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಪಿಕಪ್ ನಿಯಮ ಟ್ಯಾಕ್ಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ವಾಹನಗಳಿಗೆ 8 ನಿಮಿಷ ಉಚಿತವಾಗಿ ವಾಹನ ನಿಲುಗಡೆಗೆ ಅವಕಾಶವಿದ್ದು. ಈ ಅವಧಿ ಮೀರಿದರೆ ದಂಡ ವಿಧಿಸುವ ಈ ನಿಯಮದಿಂದ ತಮ್ಮ ಆದಾಯಕ್ಕೆ ಧಕ್ಕೆಯಾಗಿದೆ ಎಂದು ಟ್ಯಾಕ್ಸಿ ಚಾಲಕರು ಪ್ರತಿಭಟಿಸಿದ್ದಾರೆ. ಸುರಕ್ಷತೆ ಮತ್ತು ಅನಧಿಕೃತ ಟ್ಯಾಕ್ಸಿ ತಡೆಯಲು ಈ ನಿಯಮವನ್ನು ತಂದಿರುವುದಾಗಿ BIAL ಸಮರ್ಥಿಸಿಕೊಂಡಿದೆ.

ಬೆಂಗಳೂರು, ಡಿಸೆಂಬರ್ 17: ಬೆಂಗಳೂರಿನ (Bengaluru) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಹೊಸ ಪಿಕ್ಅಪ್ ವ್ಯವಸ್ಥೆ ಟ್ಯಾಕ್ಸಿ ಚಾಲಕರಲ್ಲಿ ಅಸಮಾಧಾನ ಮೂಡಿಸಿದೆ. ಮಂಗಳವಾರ ವಿಮಾನ ನಿಲ್ದಾಣದ ಹೊರಗಿನ ರಸ್ತೆಗಳಲ್ಲಿ ಟ್ಯಾಕ್ಸಿಗಳು ತುಂಬಿದ್ದು, ಸಾದಹಳ್ಳಿ ಗೇಟ್ ಟೋಲ್ ಪ್ಲಾಜಾ ಬಳಿ ಸ್ವಲ್ಪ ಸಮಯ ಸಂಚಾರಕ್ಕೆ ಅಡ್ಡಿಯಾಗಿದೆ.
ಹೊಸ ಪಿಕ್ಅಪ್ ವ್ಯವಸ್ಥೆಗೆ ಚಾಲಕರ ಆಕ್ರೋಶ
ಹೊಸ ಪಿಕಪ್ ವ್ಯವಸ್ಥೆಯಿಂದ ಟ್ಯಾಕ್ಸಿ ಚಾಲಕರು ಮತ್ತು ಪ್ರಯಾಣಿಕರಿಬ್ಬರಿಗೂ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ಚಾಲಕರ ಒಕ್ಕೂಟದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಒಕ್ಕೂಟದ ಸಂಸ್ಥಾಪಕ ಮತ್ತು ರಾಜ್ಯ ಅಧ್ಯಕ್ಷ ಜಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.ಕೆಲವು ಪ್ರತಿಭಟನಾಕಾರರು ವಿಮಾನ ನಿಲ್ದಾಣಕ್ಕೆ ಇತರ ಟ್ಯಾಕ್ಸಿಗಳು ಪ್ರವೇಶಿಸುವುದನ್ನು ತಡೆಯಲು ಪ್ರಯತ್ನಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ, ಲಾಠಿ ಪ್ರಹಾರ ಮಾಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತರಲಾದ ಹೊಸ ಪಿಕ್ಅಪ್ ರೂಲ್ಸ್ ಪ್ರಕಾರ, ಖಾಸಗಿ ವಾಹನಗಳು ಟರ್ಮಿನಲ್ 1 ಮತ್ತು 2 ರಲ್ಲಿ ಗೊತ್ತುಪಡಿಸಿದ ಪಿಕ್-ಅಪ್ ವಲಯಗಳಲ್ಲಿ ಎಂಟು ನಿಮಿಷಗಳವರೆಗೆ ಉಚಿತವಾಗಿ ಕಾಯಬಹುದು. ಈ ಸಮಯ ಮೀರಿ ಉಳಿದುಕೊಳ್ಳುವ ವಾಹನಗಳು ದಂಡ ತೆತ್ತಬೇಕು. 8 ರಿಂದ 13 ನಿಮಿಷಗಳವರೆಗೆ 150 ರೂ., 13 ರಿಂದ 18 ನಿಮಿಷಗಳವರೆಗೆ 300 ರೂ.ಮತ್ತು 18 ನಿಮಿಷಗಳನ್ನು ಮೀರಿದವರ ವಾಹನಗಳನ್ನು ಪೊಲೀಸ್ ಠಾಣೆಗೆ ಎಳೆದೊಯ್ಯಲಾಗುವುದು.
ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆಯ ಎಚ್ಚರಿಕೆ
ಈ ರೂಲ್ಸ್ನಿಂದಾಗಿ ತಮ್ಮ ಸಂಪಾದನೆಗೆ ಅಡ್ಡಿಯಾಗುತ್ತಿದೆ ಎಂದು ಟ್ಯಾಕ್ಸಿ ಚಾಲಕರು ಆರೋಪಿಸುತ್ತಿದ್ದಾರೆ. ಇದನ್ನು ಸಮಾಲೋಚನೆ ಇಲ್ಲದೆ ಜಾರಿಗೆ ತರಲಾಗಿದೆ ಮತ್ತು ದೈನಂದಿನ ಆದಾಯಕ್ಕಾಗಿ ವಿಮಾನ ನಿಲ್ದಾಣದಲ್ಲಿನ ಗ್ರಾಹಕರನ್ನೇ ಅವಲಂಬಿಸಿರುವ ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಚಾಲಕರು ಗೋಳಿಟ್ಟಿದ್ದಾರೆ. ಈ ಹೊಸ ನಿಯಮಾವಳಿಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಒಕ್ಕೂಟವು ಒತ್ತಾಯಿಸುವುದರ ಜೊತೆಗೆ, ಪ್ರತಿಭಟನೆಗಳ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.
ಆಕ್ರೋಶಗೊಂಡ ಚಾಲಕರೊಂದಿಗೆ ಚರ್ಚೆ ನಡೆಸಿದ ಉಪ ಪೊಲೀಸ್ ಆಯುಕ್ತ ಸಜೀತ್ ವಿಜೆ , ಅವರ ದೂರುಗಳನ್ನು ಸಂಬಂಧಿತ ಅಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದೇವೆ. ಹೀಗಾಗಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು ಎಂದಿದ್ದಾರೆ.
ಪಿಕ್-ಅಪ್ ಪಾಯಿಂಟ್‌ಗೆ ನಡಿಯುವುದು ದೊಡ್ಡ ಸವಾಲೇನಲ್ಲ ಎಂದ BIAL
ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಹೊಸ ನಿಯಮಾವಳಿಗಳನ್ನು ಸಮರ್ಥಿಸಿಕೊಂಡಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾನದಂಡಗಳಿಗೆ ಅನುಗುಣವಾಗಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಹೇಳಿದೆ. ಸುಮಾರು 95 ಪ್ರತಿಶತ ಪ್ರಯಾಣಿಕರು ಹೊಸ ವ್ಯವಸ್ಥೆಗೆ ಆರಾಮವಾಗಿ ಹೊಂದಿಕೊಂಡಿದ್ದಾರೆ ಎಂದು ಹೇಳಿರುವ BIAL, ವರದಿಯ ಪ್ರಕಾರ ನಿಯಮಾವಳಿಗಳಿಂದ ಕೆಲ ಸಮಸ್ಯೆಗಳು ಉಂಟಾಗಿರುವುದು ನಿಜ ಎಂದು ಒಪ್ಪಿಕೊಂಡಿದೆ.
ವಿಮಾನ ನಿಲ್ದಾಣ ನಿರ್ವಾಹಕರ ಪ್ರಕಾರ, ಪರಿಷ್ಕೃತ ವ್ಯವಸ್ಥೆಯು ಅನಧಿಕೃತ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಪ್ರಯಾಣಿಕರಿಗೆ ಕಿರುಕುಳ ನೀಡುವ, ಮಿತಿಮೀರಿ ಶುಲ್ಕ ವಿಧಿಸುವ ಮತ್ತು ಪ್ರಯಾಣಿಕರನ್ನು ಪ್ರಯಾಣದ ಮಧ್ಯದಲ್ಲಿ ಕೈಬಿಡುವ ಹಲವು ದೂರುಗಳು ಬೆಳಕಿಗೆ ಬಂದದ್ದು, ವಿಶೇಷವಾಗಿ ಏಕಾಂಗಿ ಮಹಿಳಾ ಪ್ರಯಾಣಿಕರ ಮೇಲೆ ಈ ಸಮಸ್ಯೆಗಳು ಕಾಡುತ್ತಿವೆ. ಇಷ್ಟೆಲ್ಲಾ ಗಂಭೀರ ಸಮಸ್ಯೆಗಳಿದ್ದಾಗ, ಪಿಕ್-ಅಪ್ ಪಾಯಿಂಟ್‌ಗೆ 300-500 ಮೀಟರ್ ನಡಿಯುವುದು ದೊಡ್ಡ ಸವಾಲೇನಲ್ಲ ಎಂದು BIAL ಒತ್ತಿ ಹೇಳಿದೆ.
ಕಡಿಮೆ ಚಲನಶೀಲತೆ ಹೊಂದಿರುವ ಪ್ರಯಾಣಿಕರು, ಹಿರಿಯ ನಾಗರಿಕರು, ಶಿಶುಗಳೊಂದಿಗೆ ಪ್ರಯಾಣಿಸುವವರು ಮತ್ತು ವೀಲ್‌ಚೇರ್ ಬಳಸುವವರಿಗೆ ಬಗ್ಗಿಗಳ (ವಿದ್ಯುತ್ ಚಾಲಿತ ವಾಹನಗಳು) ಸೇವೆಗಳೊಂದಿಗೆ ಸಹಾಯ ಮಾಡಲಾಗುವುದು ಎಂದು ವಿಮಾನ ನಿಲ್ದಾಣ ತಿಳಿಸಿದೆ. ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಮುಂದಿನ 30 ದಿನಗಳಲ್ಲಿ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




