ಬೆಂಗಳೂರು, ಮಾರ್ಚ್ 4: ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ರಸ್ತೆಯಲ್ಲಿ ಕೋಪದಿಂದ ಕಿರುಚಾಡುತ್ತಾ ಕಾರಿನ ಗಾಜಿನ ಮೇಲೆ ಯದ್ವಾತದ್ವಾ ಗುದ್ದಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋ ಗಮನಿಸಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ರೋಡ್ರೇಜ್ ಪ್ರಕರಣಗಳಿಗೆ ನಗರದಲ್ಲಿ ಆಸ್ಪದ ನೀಡುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ಜತೆಗೆ, ಆಟೊ ಚಾಲಕನ ದುಂಡಾವರ್ತನೆಯ ಹಾಗೂ ಆತನನ್ನು ಬಂಧಿಸಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಆಟಫ ಚಾಲಕನ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಟೋ ಚಾಲಕನ ಕೋಪಕ್ಕೆ ನಿಖರವಾದ ಕಾರಣ ಏನೆಂಬುದು ಗೊತ್ತಾಗಿಲ್ಲವಾದರೂ, ಈ ದೃಶ್ಯಾವಳಿಗಳು ಬೆಂಗಳೂರು ಪೊಲೀಸರು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮಾಡಿದ್ದಂತೂ ನಿಜ.
ವೈರಲ್ ಆದ ಈ ವಿಡಿಯೋ ಕ್ಲಿಪ್‌ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಟ್ವಿಟರ್ ಹ್ಯಾಂಡಲ್ನಿಂದ ಪ್ರತಿಕ್ರಿಯಿಸಲಾಗಿದ್ದು, ‘ರೋಡ್ ರೇಜ್ ಅನ್ನು ಸಹಿಸುವುದಿಲ್ಲ. ನಮ್ಮ ತಂಡ ತಕ್ಷಣ ಕ್ರಮ ಕೈಗೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಸ್ತೆಯಲ್ಲಿ ಅಜಾಗರೂಕ ವರ್ತನೆ ಜೀವಗಳಿಗೆ ಅಪಾಯವನ್ನುಂಟು ಮಾಡುತ್ತದೆ – ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ’ ಎಂದು ಉಲ್ಲೇಖಿಸಿದೆ.
“Zero tolerance for road rage. our teem took action immediately and also
PAR 02/2025 has been registered against the accused. Reckless behavior on the road puts lives at risk-drive responsibly. #RoadSafety #NoToRoadRage“@DCPEASTBCP @CPBlr @acppnagar pic.twitter.com/OBRh8m4PrV— COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ (@commercialstps) March 3, 2025
ಈ ವಿಡಿಯೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವತಯಕ್ತವಾಗಿವೆ. ಅನೇಕ ಬಳಕೆದಾರರು ನಗರದಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ಪೊಲೀಸರ ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಿದರೆ, ಇನ್ನು ಕೆಲವರು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
‘ಬೆಂಗಳೂರು ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ನಗರದ ಇಡೀ ಆಟೋ ಚಾಲಕ ಸಮುದಾಯವೇ ಇತರ ವಾಹನ ಚಾಲಕರಿಗೆ ಒಂದು ಬೆದರಿಕೆಯಾಗಿ ಪರಿಣಮಿಸಿದೆ. ಅವರು ಸ್ಥಳೀಯರು ಮತ್ತು ವಲಸಿಗರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಟೀಕಿಸಿದ್ದಾರೆ.
ಬೆಂಗಳೂರಿನಂಥ ನಗರದಲ್ಲಿ, ಪೊಲೀಸರಿಂದ ಇಂತಹ ತ್ವರಿತ ಕ್ರಮವು ನಮ್ಮನ್ನು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ದಯವಿಟ್ಟು ಸಾಮಾನ್ಯ ಜನರ ಹಿತದೃಷ್ಟಿಯಿಂದ ದೃಢವಾಗಿ ಮತ್ತು ದೃಢನಿಶ್ಚಯದಿಂದ ಇರಿ. ಪೊಲೀಸರಿಗೆ ಬಿಗ್ ಸೆಲ್ಯೂಟ್ ಎಂದು ಮತ್ತೊಬ್ಬ ಬಳಕೆದಾರರು ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಅಧಿಕೃತ ಭಾಷೆ ಯಾವುದು? ಇಲ್ಲಿ ಕೊಟ್ಟ ಉತ್ತರ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ಆದಾಗ್ಯೂ, ಕೆಲವರು ಕೇವಲ ಬಂಧನವಷ್ಟೇ ಸಾಲದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರರು ‘ಆರೋಪಿಯ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಿ. ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಹಲ್ಲೆಯ ಮೊಬೈಲ್ ರೆಕಾರ್ಡಿಂಗ್ ಇಲ್ಲದಿದ್ದರೆ ಮತ್ತು ವಾಹನ ಮಾಲೀಕರು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಇಂಥ ಕ್ರಮ ಕೈಗೊಳ್ಳುತ್ತಿದ್ದರೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
Published On - 2:50 pm, Tue, 4 March 25