ಬೆಂಗಳೂರಿನ ಅಧಿಕೃತ ಭಾಷೆ ಯಾವುದು? ಇಲ್ಲಿ ಕೊಟ್ಟ ಉತ್ತರ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ಬೆಂಗಳೂರಿನ ಭಾಷೆ ಯಾವುದು? ಹೀಗೆಂದು ಪ್ರಶ್ನೆ ಕೇಳಿದರೆ ಥಟ್ಟನೆ ನೀವೇನು ಹೇಳುತ್ತೀರಿ? ‘‘ಕನ್ನಡ’’ ಎಂದಲ್ಲವೇ... ಆದರೆ, ಇಲ್ಲಿರುವ ವಿಡಿಯೋದಲ್ಲಿರುವವರು ಏನು ಹೇಳುತ್ತಿದ್ದಾರೆ ನೋಡಿ! ಹೌದು, ಅವರ ಮಾತುಗಳನ್ನು ಕೇಳಿದರೆ ಖಂಡಿತವಾಗಿಯೂ ನೀವು ಶಾಕ್ ಆಗುತ್ತೀರಿ. ಯಾಕೆ ಗೊತ್ತೇ? ತಿಳಿಯಲು ವಿಡಿಯೋ ನೋಡಿ ಹಾಗೂ ಮುಂದೆ ಓದಿ.

ಬೆಂಗಳೂರು, ಮಾರ್ಚ್ 3: ಬೆಂಗಳೂರಿನ ಅಧಿಕೃತ ಭಾಷೆ ಯಾವುದು ಎಂಬುದನ್ನು ಹೇಳಲು ಜನರು ಹೆಣಗಾಡುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದಕ್ಕೆ ಕನ್ನಡಿಗರಿಂದ ವ್ಯಾಪಕ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗಿರುವುದು ವಾಕ್ಸ್ ಪಾಪ್‌ನ ಭಾಗವಾಗಿ ಮುಂಬೈನಲ್ಲಿ ಚಿತ್ರೀಕರಿಸಿದ ವೀಡಿಯೊ ಎನ್ನಲಾಗಿದ್ದು, ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡಿಗರು ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಬೆಂಗಳೂರಿನ ಅಧಿಕೃತ ಭಾಷೆ ಯಾವುದು ಎಂದು ವ್ಯಕ್ತಿಯೊಬ್ಬ ಜನರನ್ನು ಕೇಳುತ್ತಿರುವುದು ವೈರಲ್ ವಿಡಿಯೋದಲ್ಲಿ ಕಂಡುಬರುತ್ತದೆ. ಕೆಲವರು ಹಿಂದಿ, ಇನ್ನು ಕೆಲವರು ಇಂಗ್ಲಿಷ್, ಮಲಯಾಳಂ, ಸಂಸ್ಕೃತ ಅಥವಾ ತಮಿಳು ಎಂದು ಹೇಳುವುದು ಕಾಣಿಸುತ್ತದೆ. ಆದರೆ ಯಾರೊಬ್ಬರೂ ಕನ್ನಡ ಎಂದು ಹೇಳಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ತಪ್ಪು ಅವರದಲ್ಲ… pic.twitter.com/xOFXgHPILo
— Ice Candy ಗೋಪಾಲ (@IceCandyGopalaa) March 2, 2025
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ರಾಜಧಾನಿಯಲ್ಲಿಯೇ ತಮ್ಮ ಮಾತೃಭಾಷೆಗೆ ಮನ್ನಣೆ ದೊರೆಯದೇ ಇರುವುದಕ್ಕೆ ಕನ್ನಡಿಗರು ಹತಾಶೆ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರು ಇತರರನ್ನು ಗೌರವಿಸಲು ಮತ್ತು ಅವರ ಜತೆ ಹೊಂದಿಕೊಳ್ಳಲು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳನ್ನು ಕಲಿತಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ, ಕನ್ನಡಿಗರನ್ನು ಅವರ ಸ್ವಂತ ನೆಲದಲ್ಲಿ ಕಡೆಗಣಿಸಲಾಗುತ್ತಿದೆ. ಅಲ್ಪಸಂಖ್ಯಾತ ಹೊರಗಿನವರು ತಮ್ಮ ಭಾಷೆಗಳನ್ನು ಹೆಚ್ಚು ಪ್ರಾಬಲ್ಯಗೊಳಿಸಿದ್ದಾರೆ, ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಎಂಬ ದೀರ್ಘಕಾಲದ ತಪ್ಪು ಕಲ್ಪನೆಯೇ ಈ ಅಜ್ಞಾನಕ್ಕೆ ಕಾರಣ ಎಂದು ಹೇಳಿದ್ದಾರೆ. ಹಿಂದಿ ರಾಷ್ಟ್ರೀಯ ಭಾಷೆ ಎಂಬ ಕಲ್ಪನೆಯೊಂದಿಗೆ ಜನರು ಬೆಳೆದಿದ್ದಾರೆ. ದಕ್ಷಿಣ ಭಾರತೀಯರನ್ನು ಸಾಮಾನ್ಯವಾಗಿ ‘ಮದ್ರಾಸಿಗಳು’ (ತಮಿಳರು) ಅಥವಾ ‘ಕಮ್ಯೂನಿಸ್ಟರು’ (ಮಲಯಾಳಿಗಳು) ಎಂದು ಕರೆಯುತ್ತಾರೆ. ಇತ್ತೀಚೆಗೆ ಜನಪ್ರಿಯ ಚಲನಚಿತ್ರಗಳಿಂದಾಗಿ ತೆಲುಗು ಭಾಷೆಗೆ ಮನ್ನಣೆ ದೊರೆಯುತ್ತಿದೆ. ಕನ್ನಡದ ಬಗ್ಗೆ ಇನ್ನೂ ಕೇಳಿಬರುತ್ತಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಕನ್ನಡ ಮತ್ತು ಕರ್ನಾಟಕವು ಭಾರತದ ಕನಿಷ್ಠ ಗುರುತಿಸಲ್ಪಟ್ಟ ವಿಷಯಗಳಲ್ಲಿ ಒಂದಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಭಾರತದ ಇತರ ರಾಜ್ಯಗಳ ಬಗ್ಗೆ ಇರುವ ಮಾಹಿತಿಗೆ ಹೋಲಿಸಿದರೆ ಉತ್ತರ ಭಾರತದ ಜನರಿಗೆ ಕರ್ನಾಟಕದ ಬಗ್ಗೆ ಇರುವ ತಿಳಿಳಿಕೆ ಕಡಿಮೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ಮುಂದೆ ತಯಾರಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕನ್ನಡ ಲೇಬಲ್ ಕಡ್ಡಾಯ
ಆದಾಗ್ಯೂ, ಕೆಲವರು ತಟಸ್ಥ ನಿಲುವನ್ನು ಪ್ರಕಟಿಸಿದ್ದಾರೆ. ದೇಶಾದ್ಯಂತ ಭಾಷಾ ಅಜ್ಞಾನವು ಸಾಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂಬೈನ ಅಧಿಕೃತ ಭಾಷೆ ಯಾವುದು ಎಂದು ನೀವು ಬೆಂಗಳೂರಿನ ಜನರನ್ನು ಕೇಳಿದರೆ, ಹೆಚ್ಚಿನವರು ಹಿಂದಿ ಹೇಳುತ್ತಾರೆ. ಮರಾಠಿ ಎಂಬುದು ಎಲ್ಲರಿಗೂ ತಿಳಿದಿಲ್ಲ. ಆದ್ದರಿಂದ, ಈ ವಿಡಿಯೋದಲ್ಲೇನೂ ವಿಶೇಷವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.








