
ಬೆಂಗಳೂರು, ಜೂನ್ 30: ಸರ್ಕಾರ ಇತ್ತೀಚೆಗೆ ಕರ್ನಾಟಕದಲ್ಲಿ ರ‍್ಯಾಪಿಡೋ (rapido), ಉಬರ್ ಬೈಕ್ ಟ್ಯಾಕ್ಸಿಯನ್ನ ಬ್ಯಾನ್ ಮಾಡಿತ್ತು. ಇದರ ಬೆನ್ನಲ್ಲೇ ಆಟೋ ಚಾಲಕರು (auto drivers) ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಹೀಗಾಗಿ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಆಟೋ ಚಾಲಕರಿಗೆ ಆರ್ಟಿಓ ಅಧಿಕಾರಿಗಳು ಶಾಕ್ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ 100ಕ್ಕೂ ಅಧಿಕ ಆಟೋಗಳನ್ನು ಸೀಜ್ ಮಾಡಿದ್ದಾರೆ.
ಆಟೋ ಚಾಲಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆ ನಗರದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ ಮಾಡಲಾಗಿದೆ. ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆ್ಯಪ್ ಆಧಾರಿತ ಮತ್ತು ಇನ್ನಿತರ ಆಟೋ ಚಾಲಕರ ವಿರುದ್ಧ, ಕಾನೂನು ಉಲ್ಲಂಘಿಸುವವರ ವಿರುದ್ಧ ಮತ್ತು ಪ್ರಯಾಣಿಕರಿಂದ ಹಗಲು ದರೋಡೆ ಮಾಡಿದರೆ ಅಂತವರ ಪರ್ಮೀಟ್ ರದ್ದು ಪಡಿಸುವಂತೆ ಸಾರಿಗೆ ಇಲಾಖೆ ಕಮಿಷನರ್ಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಈ ಕುರಿತಾಗಿ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ ಅವರು ಪ್ರತಿಕ್ರಿಯಿಸಿದ್ದು, ಸಾರ್ವಜನಿಕರಿಂದ ಆಟೋ ದರ ಹೆಚ್ಚಳ ವಸೂಲಿ ದೂರು ಬಂದಿತ್ತು. ಹೀಗಾಗಿ ಇಂದು ಆಟೋ ದರ ಪರಿಶೀಲನೆ ಮಾಡಲು ಮುಂದಾಗಿದ್ದೇವೆ. ಬೆಳಗ್ಗೆಯಿಂದ ಈವರೆಗೆ ನಗರದಲ್ಲಿ 100ಕ್ಕೂ ಅಧಿಕ ಆಟೋ ಸೀಜ್ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಜಲಮಂಡಳಿ ಕಾಮಗಾರಿ: ಜುಲೈ 2ರ ವರೆಗೆ ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ದುಪ್ಪಟ್ಟು ದರ ಪರಿಶೀಲನೆ ವೇಳೆ ಇತರೆ ದಾಖಲೆಗಳೂ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ. 250ಕ್ಕೂ ಅಧಿಕ ದೂರನ್ನು ಆಟೋ ಚಾಲಕರ ಮೇಲೆ ದಾಖಲೆ ಮಾಡಿಕೊಂಡಿದ್ದು, ಅಗ್ರಿಗೇಟರ್ ಕಂಪೆನಿಗಳ ಮೇಲೂ ನಾವು ನಿಗಾ ಇಡುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಭಯಾನಕ ಕೊಲೆ: ಶವವನ್ನ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಪರಾರಿ
ಸರ್ಕಾರ ನೀಡಿರುವ ಆಟೋ ದರಕ್ಕೆ 5% ಸರ್ವೀಸ್ ಚಾರ್ಜ್ ಹಾಕಬಹುದು. ಅದು ಬಿಟ್ಟರೆ ದುಪ್ಪಟ್ಟು ದರ ವಿಧಿಸುವ ಅಧಿಕಾರ ಅಗ್ರಿಗೇಟರ್ ಕಂಪೆನಿಗಳಿಗಿಲ್ಲ. ಎಲ್ಲಾ ಕಡೆ ದಾಳಿ ನಡೆಯುತ್ತಿದೆ. ಇದನ್ನು ಹತೋಟಿಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ರೂಪಾ ಎಂಬ ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದು, ರ‍್ಯಾಪಿಡೋ ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದೆ. ಬಿಇಎಸ್ಯಿಂದ ಬಜಾಜ್ ಪಾಪ್ಯುಲರ್ ವರೆಗೆ ಆಟೋ ಬುಕ್ ಮಾಡಿದ್ದೆ. 1 ಕಿಮೀ ಒಳಗಡೆ ದೂರ ಇದೆ. ಅದಕ್ಕೆ 50 ರೂ ತೋರಿಸಿತು ಬುಕ್ ಮಾಡಿದ್ದೇನೆ. ಆ್ಯಪ್ ಮೂಲಕ ಬುಕ್ ಮಾಡಿಲ್ಲ ಅಂದರೆ ಆಟೋದವರು 100 ರೂ ಕೇಳುತ್ತಾರೆ. ಬೆಳಿಗ್ಗೆ 60 ರೂ ಕೊಟ್ಟು ಹೋಗಿದ್ದೆ. ಈಗ 50 ರೂ. ತೋರಿಸಿತು ಬುಕ್ ಮಾಡಿ ಬಂದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:00 pm, Mon, 30 June 25