ಬೆಂಗಳೂರು: ಮಾಲ್ಗಳಾಗಲಿವೆ ಬಿಡಿಎ ಕಾಂಪ್ಲೆಕ್ಸ್ಗಳು! ಹರಿದು ಬರಲಿದೆ ಭರ್ಜರಿ ಆದಾಯ
BDA Complex; ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಮಾಲ್ಗಳನ್ನಾಗಿ ಪರಿವರ್ತಿಸುವ ಬಗ್ಗೆ 2017ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ನಂತರ ಬಿಜೆಪಿ ಆಡಳಿತದ ಅವಧಿಯಲ್ಲಿ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಹಳೆಯ ಪ್ರಸ್ತಾವನೆಯನ್ನು ಮುಂದುವರಿಸಲು ಮುಮದಾಗಿದ್ದು, ಬಾಡಿಗೆದಾರರಿಂದ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು, ಮೇ 8: ಬಿಡಿಎ ಕಾಂಪ್ಲೆಕ್ಸ್ಗಳು (BDA Complex) ಇನ್ನು ಮುಂದೆ ಮಾಲ್ಗಳಾಗಿ (Malls) ಪರಿವರ್ತನೆಯಾಗಲಿವೆ. ಬೆಂಗಳೂರಿನ 7 ಕಾಂಪ್ಲೆಕ್ಸ್‌ಗಳನ್ನು ಮಾಲ್ಗಳನ್ನಾಗಿ ಪರಿವರ್ತನೆ ಮಾಡಲು ಬಿಡಿಎ ಮುಂದಾಗಿದೆ. ಹೀಗಾಗಿ ಕಾಂಪ್ಲೆಕ್ಸ್ಗಳಲ್ಲಿರುವ ಬಾಡಿಗೆದಾರರನ್ನು ಈಗಾಗಲೇ ಬಿಡಿಎ ಅಧಿಕಾರಿಗಳು (BDA Officials) ಖಾಲಿ ಮಾಡಿಸುತ್ತಿದ್ದಾರೆ. 2023 ಸೆಪ್ಟೆಂಬರ್‌ನಲ್ಲಿ ಈ ಯೋಜನೆಯ ಒಪ್ಪಂದಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರೆತಿತ್ತು. ಇದೀಗ ಯೋಜನೆಯ ಅನುಷ್ಠಾನಕ್ಕೆ ಬಿಡಿಎ ಕಾರ್ಯಪ್ರವೃತ್ತವಾಗಿದೆ.
ಯಾವೆಲ್ಲ ಕಾಂಪ್ಲೆಕ್ಸ್ಗಳು?
ಅರ್ಟಿ ನಗರ, ಇಂದಿರಾ ನಗರ, ಸದಾಶಿವನಗರ, ಎಚ್ಎಸ್ಆರ್ ಲೇಔಟ್, ವಿಜಯನಗರ, ಕೋರಮಂಗಲ ಹಾಗೂ ಆಸ್ಕಿನ್ ಟೌನ್ ಕಾಂಪ್ಲೆಕ್ಸ್ಗಳನ್ನ ಮಾಲ್ ಮಾಡಲು ಗುತ್ತಿಗೆ ನೀಡಲು ಬಿಡಿಎ ಮುಂದಾಗಿದೆ. ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) 60 ವರ್ಷಗಳಿಗೆ ಗುತ್ತಿಗೆ ನೀಡಲಾಗುತ್ತದೆ.
ವಾರ್ಷಿಕ 40 ಕೋಟಿ ರೂ. ಆದಾಯ
ಕಾಂಪ್ಲೆಕ್ಸ್‌ಗಳನ್ನು ಮಾಲ್ಗಳನ್ನಾಗಿ ಪರಿವರ್ತನೆ ಮಾಡುವ ಯೋಜನೆಯಿಂದ ಬಿಡಿಎಗೆ ವಾರ್ಷಿಕ 40 ಕೋಟಿ ರೂ. ಆದಾಯ ದೊರೆಯಬಹುದೆಂಬ ನಿರೀಕ್ಷೆ ಇದೆ. ಕೋರಮಂಗಲ, ಎಚ್‌ಎಸ್ಆರ್ ಲೇಔಟ್, ಆರ್‌ಟಿ ನಗರ, ಸದಾಶಿವನಗರಗಳಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಎಂಎಫ್‌ಎಆರ್ ಡೆವಲಪರ್ಸ್ಗೆ ಗುತ್ತಿಗೆ ನೀಡಲಾಗುತ್ತದೆ. ಇಂದಿರಾನಗರದಲ್ಲಿರುವ ಕಾಂಪ್ಲೆಕ್ಸ್ ಅನ್ನು ಎಂಬೆಸ್ಸಿ ಗ್ರೂಪ್ನ ಮೇವರಿಕ್ಗೆ ಗುತ್ತಿಗೆ ನೀಡಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
2017ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಈ ಪ್ರಸ್ತಾವನೆ ಬಂದಿತ್ತು. ಆದರೆ ನಂತರ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ತಡೆ ಹಿಡಿದಿದ್ದರು. ಇದೀಗ ಹಳೆ ಟೆಂಡರನ್ನು ಫೈನಲ್ ಮಾಡಿ ಆದೇಶ ಹೊರಡಿಸಲಾಗಿದೆ.
ಬಾಡಿಗೆದಾರರಿಂದ ವಿರೋಧ
ಬಿಡಿಎ ನಿರ್ಧಾರಕ್ಕೆ ಈಗಾಗಲೇ ಕಾಂಪ್ಲೆಕ್ಸ್ಗಳಲ್ಲಿ ಇರುವ ಬಾಡಿಗೆದಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಖಾಸಗೀಕರಣ ಮಾಡುವುದು ಬೇಡ. ಅದರ ಬದಲು ಬಿಡಿಎಯೇ ನಿರ್ಮಾಣ ಮಾಡುವುದು ಸೂಕ್ತ ಎಂದು ಬಾಡಿಗೆದಾರರು ಹೇಳಿದ್ದಾರೆ.
ಇದನ್ನೂ ಓದಿ: ಬಿಸಿಲಿನ ಜೊತೆಗೆ ತರಕಾರಿ ಬೆಲೆಯೂ ಏರಿಕೆ: ಗ್ರಾಹಕರಿಗೆ ಹುಳಿಯಾದ ನಿಂಬೆಹಣ್ಣು ದರ
ಈ ಮಧ್ಯೆ, ಬಿಡಿಎ ಅಭಿಯಂತರ ಸದಸ್ಯ ಶಾಂತ ರಾಜಣ್ಣ ಪ್ರತಿಕ್ರಿಯಿಸಿದ್ದು, ಈ ಯೋಜನೆಯಿಂದ ಬಿಡಿಎಗೆ ಲಾಭವಿದೆ. ಹೀಗಾಗಿ ಆದಷ್ಟು ಬೇಗ ಮಾಲ್ಗಳನ್ನಾಗಿ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ