
ಬೆಂಗಳೂರು, ಜೂನ್ 16: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಟಿ.ಎಫ್.ಹಾದಿಮನಿ ವಿರುದ್ಧ ನಗರದ ಯಶವಂತಪುರದ ಸೈಬರ್ ಕ್ರೈಂ ಠಾಣೆಗೆ ಬಿಜೆಪಿ (bjp) ದೂರು ನೀಡಿದೆ. ಪರಿಷತ್ ವಿಪಕ್ಷ ಮುಖ್ಯ ಸಚೇತಕ ರವಿಕುಮಾರ್ ನೇತೃತ್ವದಲ್ಲಿ ಸೋಮವಾರ ದೂರು ನೀಡಲಾಗಿದೆ. ಈ ವೇಳೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ್ ಉಪಸ್ಥಿತರಿದ್ದರು.
ಜೂನ್ 16ರ ಬೆಳಗ್ಗೆ 9 ಗಂಟೆಗೆ ನಾನು (ದೂರುದಾರ) ನನ್ನ ಪಕ್ಷದ ಕಛೇರಿಯಲ್ಲಿ, ಪಕ್ಷದ ಕೆಲಸದ ನಿಮಿತ್ತ ಫೇಸ್‌ಬುಕ್ ಅನ್ನು ನೋಡುತ್ತಿದ್ದಾಗ ಟಿ.ಎಫ್.ಹಾದಿಮನಿ ಎಂಬ ವ್ಯಕ್ತಿಯ ಫೇಸ್ ಬುಕ್ ಪುಟದಲ್ಲಿ ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಕುರಿತು ತೇಜೋವಧೆ ಮತ್ತು ಈ ದೇಶದ ಜನತೆಯ ಭಾವನೆಗಳಿಗೆ ಧಕ್ಕೆ ತರುವ ರೀತಿ ಹಾಗೂ ಸಮಾಜದ ಸಮುದಾಯದ ನಡುವೆ ಬಿರುಕು ಮೂಡಿಸುವ ರೀತಿಯಲ್ಲಿ ಅವಮಾನ ಮಾಡಿ ಈ ಕೆಳಕಂಡಂತೆ ಪೋಸ್ಟನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ಹಾಸನದಲ್ಲಿ ಮಳೆ ಆರ್ಭಟ: ಶಿರಾಡಿ ಘಾಟ್ನಲ್ಲಿ ಸಂಚಾರಕ್ಕೆ ಸಂಕಷ್ಟ, ಕೊಂಚ ಎಡವಟ್ಟಾದ್ರೆ ಪ್ರಾಣಕ್ಕೆ ಕುತ್ತು ಭೀತಿ
ಇದಷ್ಟೇ ಅಲ್ಲದೆ ಅವರ ಇಡೀ ಫೇಸ್‌ಬುಕ್ ಪುಟದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳನ್ನು ಹಾಗೂ ರಾಜ್ಯದ ಪ್ರಮುಖರನ್ನು ಅವಹೇಳನಕಾರಿಯಾಗಿ ನಿಂದಿಸುವ, ತೇಜೋವಧೆ ಮತ್ತು ಸಮಾಜದಲ್ಲಿ ಸಮುದಾಯಗಳ ಮಧ್ಯದಲ್ಲಿ ಶಾಂತಿ ಕೆದಡುವಂತಹ ಅನೇಕ ಪೋಸ್ಟರ್‌ಗಳನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ ಟಿ.ಎಫ್.ಹಾದಿಮನಿ ಮೇಲೆ 124, 146, 144(2), 268, 352, 353, 353(2)(3), 499, 502. 177. 203, 153, 153ಎ. ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ, ಅಪರಾಧಿಯನ್ನು ಬಂಧಿಸುವಂತೆ ಕೋರಲಾಗಿದ್ದು, ಜೊತೆಗೆ ಅವರ ಫೇಸ್ ಬುಕ್ ಖಾತೆಯಲ್ಲಿಯರುವ ಎಲ್ಲಾ ಮಾಹಿತಿಗಳನ್ನು ಕ್ರೂಢಿಕರಿಸಿ, ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತಾಗಿ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಪ್ರತಿಕ್ರಿಯಿಸಿದ್ದು, ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಮೋದಿಯವರ ಮೇಲೆ ಅಭಿಮಾನ ಇಟ್ಟುಕೊಂಡಿರುವವರ ಮನಸ್ಸಿಗೆ ಇದರಿಂದ ಘಾಸಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ: ಹೈ ಅಲರ್ಟ್
ಹಾದಿಮನಿ ಎನ್ನುವವರು ಮಹಿಳೆ ಜೊತೆ ಮೋದಿ ಇರುವಂತೆ ಎಡಿಟ್ ಮಾಡಿದ ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ಚಾರಿತ್ರ್ಯವಧೆ ಆಗಿದೆ. ಅವರ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಕೂಡಲೇ ಹಾದಿಮನಿಯನ್ನು ಪೊಲೀಸರು ಬಂಧಿಸಬೇಕು. ಅವರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:49 pm, Mon, 16 June 25