ಬೆಂಗಳೂರಿನ MP, MLAಗಳ ಮೌಲ್ಯಮಾಪನ ರಿಪೋರ್ಟ್ ಕಾರ್ಡ್: ಬಿಜೆಪಿ ಶಾಸಕ ನಂ.1 ಶ್ರೀಮಂತ
ಬೆಂಗಳೂರಿನಿಂದ ಆಯ್ಕೆಯಾಗಿರುವ ನಾಲ್ವರು ಸಂಸದರು ಹಾಗೂ 32 ಶಾಸಕರ ಸಾಧನೆ ಕುರಿತಾಗಿ 'ಸಿವಿಕ್' ಎನ್ನುವ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರಕ್ಕೆ ಎರಡು ವರ್ಷ ಹಾಗೂ ಕೇಂದ್ರ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ “ನಮ್ಮ ನೇತಾ- ನಮ್ಮ ರಿವ್ಯೂ’ ಹೆಸರಿನಲ್ಲಿ ಸಿವಿಕ್ ಎಂಬ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಬೆಂಗಳೂರಿನ 32 ಶಾಸಕರು ಹಾಗೂ 4 ಸಂಸದರ ಕಾರ್ಯಕ್ಷಮತೆ ಮೌಲ್ಯಮಾಪನ ವಿವರಗಳನ್ನು ಬಹಿರಂಗಪಡಿಸಿದೆ. ಹಾಗೇ ಶಾಸಕರ ಆದಾಯವನ್ನು ಸಹ ಬಿಚ್ಚಿಟ್ಟಿದ್ದು, ಬಿಜೆಪಿ ಶಾಸಕ ಶ್ರೀಮಂತ ಎಂಎಲ್ ಎನಿಸಿಕೊಂಡಿದ್ದಾರೆ. ಹಾಗಾದ್ರೆ, ವರದಿಯಲ್ಲಿ ಏನೇನಿದೆ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ ನೋಡಿ.

ಬೆಂಗಳೂರು, (ಜೂನ್, 16): ಬೆಂಗಳೂರಿನಿಂದ (Bengaluru) ಆಯ್ಕೆಯಾಗಿರುವ 32 ಶಾಸಕರು ಹಾಗೂ ನಾಲ್ವರು ಸಂಸದರ ಸಾಧನೆ ಕುರಿತು ಬಗ್ಗೆ ‘ಸಿವಿಕ್’ ಸಂಸ್ಥೆಯು ನಾಗರಿಕ ವರದಿಯನ್ನು (Citizens report) ಬಿಡುಗಡೆ ಮಾಡಿದ್ದು, ಕಾರ್ಯ ಕ್ಷಮತೆ ಮೌಲ್ಯಮಾಪನ, ಕ್ರಿಮಿನಲ್ ಪ್ರಕರಣಗಳು ಹಾಗೂ ಶಾಸಕರ ಆದಾಯವನ್ನು ವರದಿಯಲ್ಲಿ ತಿಳಿಸಲಾಗಿದ್ದು, ಬೆಂಗಳೂರಿನ 32 ಶಾಸಕರ ಪೈಕಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರ ಆದಾಯವು ಶೇ.1,399 ರಷ್ಟು ಹೆಚ್ಚಳವಾಗಿದ್ದು, ನಂಬರ್ 1 ಶ್ರೀಮಂತ ಶಾಸಕರೆನಿಸಿಕೊಂಡಿದ್ದಾರೆ.
ಕಳೆದ 6 ತಿಂಗಳಿಂದ ನಾಗರಿಕ ಸ್ವಯಂಸೇವಕರು, ವಿದ್ಯಾರ್ಥಿಗಳು ಸಂಗ್ರಹಿಸಿದ ರಿಪೋಟ್ ಕಾರ್ಡ್ ಇದಾಗಿದ್ದು, ಶಾಸಕರು, ಸಂಸದರ ಹಾಜರಾತಿ, ಶಾಸನ ರಚನೆಯಲ್ಲಿನ ಸಕ್ರಿಯ ಭಾಗವಹಿಸುವಿಕೆ, ಕ್ಷೇತ್ರಾಭಿವೃದ್ಧಿ ನಿಧಿ ಬಳಕೆ, ಅನುದಾನಗಳ ಸದ್ವಿನಿಯೋಗ, ವೈಯಕ್ತಿಕ ಆಸ್ತಿ ಬೆಳವಣಿಗೆ, ಅಪರಾಧ ಚಟುವಟಿಕೆ ಅಥವಾ ಪ್ರಕರಣ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಈಗ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದರೆ ಅಧಿಕಾರಕ್ಕೇರಲಿದೆ ಬಿಜೆಪಿ: ಸಮೀಕ್ಷೆ
ಗೋಪಾಲಯ್ಯ ನಂ.1 ಶ್ರೀಮಂತ ಶಾಸಕ
ಈ ಪೈಕಿ ಶಾಸಕ ಗೋಪಾಲಯ್ಯ ಅವರ ಆದಾಯ ಹಿಂದಿನ ಅವಧಿಗೆ ಹೋಲಿಸಿದರೆ ಈ ಬಾರಿ ಶೇ.1399 ರಷ್ಟು ಹೆಚ್ಚಳವಾಗಿದೆ. ನಂತರದ ಸ್ಥಾನದಲ್ಲಿರುವ ಮುನಿರತ್ನ ಅವರ ಆದಾಯ ಪ್ರಮಾಣವು ಶೇ.959 ರಷ್ಟು ಹೆಚ್ಚಳವಾಗಿದ್ದರೆ, ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರ ಆದಾಯವು ಶೇ.318 ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ಆದಾಯವು ಸಹ ಶೇ.104 ರಷ್ಟು ಹೆಚ್ಚಳವಾಗಿದ್ದು, ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಇಲ್ಲಿದೆ ಸಂಸದರ ಕ್ಷಮತೆ
ಜೂನ್ 24ಕ್ಕೆ ಬೆಂಗಳೂರಿನ ನಾಲ್ವರು ಸಂಸದರು 18ನೇ ಲೋಕಸಭೆಯ ಸದಸ್ಯರಾಗಿ 1 ವರ್ಷ ಪೂರ್ಗೊಗೊಳ್ಳಲಿದೆ. ಹೀಗಾಗಿ ಇವರ ಕಾರ್ಯವೈಖರಿ ಬಗ್ಗೆ ‘ಸಿವಿಕ್’ ಸಂಸ್ಥೆಯು ನಾಗರಿಕ ವರದಿಯಲ್ಲಿ ತಿಳಿಸಿದ್ದು, ಸಂಸತ್ ಅಧಿವೇಶನಕ್ಕೆ ಹಾಜರಾಗುವ ವಿಚಾರದಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ (ಶೇ.98.51) ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಮತ್ತೋರ್ವ ಬಿಜೆಪಿ ಶಾಸಕ ತೇಜಸ್ವಿ ಸೂರ್ಯ (ಶೇ.77.6) ಹಾಜರಾತಿ ವಿಚಾರದಲ್ಲಿ ಕೊನೆ ಸ್ಥಾನದಲ್ಲಿದ್ದಾರೆ. ಆದರೆ, ಅತಿ ಹೆಚ್ಚು ಪ್ರಶ್ನೆ ಕೇಳಿದವರ ಪಟ್ಟಿಯಲ್ಲಿ 84 ಪ್ರಶ್ನೆಗಳನ್ನು ಕೇಳಿರುವ ತೇಜಸ್ವಿ ಸೂರ್ಯ ಮೊದಲ ಸ್ಥಾನದಲ್ಲಿದ್ದು, ಒಂದೇ ಒಂದು ಪ್ರಶ್ನೆ ಕೇಳಿರುವ ಪಿ.ಸಿ. ಮೋಹನ್ ಕಡೆಯಲ್ಲಿದ್ದಾರೆ.
ನಿಧಿ ಬಳಕೆಯಲ್ಲಿ ಡಾ. ಮಂಜುನಾಥ್ ಅಗ್ರಸ್ಥಾನ
ಇನ್ನು ಸಂಸದರ ನಿಧಿ ಬಳಕೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ.ಮಂಜುನಾಥ್ (ಶೇ.126.44) ಅಗ್ರಸ್ಥಾನದಲ್ಲಿದ್ದರೆ, ಪಿ.ಸಿ. ಮೋಹನ್ (ಶೇ.9.48) ಕೊನೆಯಲ್ಲಿದ್ದಾರೆ ಎಂದು ವರದಿಯಲ್ಲಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾ ಮಂಜುನಾಥ್ ಅವರು ನಿವೃತ್ತಿ ಬಳಿಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಮಾಂತರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನ ಡಿಕೆ ಸುರೇಶ್ ಅವರನ್ನ ಸೋಲಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಮಂಜುನಾಥ್ ಅವರು ಸಂಸತ್ ಪ್ರವೇಶ ಮಾಡಿದ್ದು, ಮೊದಲ ಅವಧಿಯಲ್ಲೇ ಅವರು ತಮ್ಮ ಸಂಸದರ ನಿಧಿ ಬಳಕೆಯಲ್ಲಿ ಇನ್ನುಳಿದ ಬೆಂಗಳೂರಿನ ಎಂಪಿಗಳಿಗಿಂತ ಮುಂಚೂಣಿಯಲ್ಲಿದ್ದಾರೆ.
ನಿಧಿ ಬಳಕೆಯಲ್ಲಿ ಶಾಸಕರಿಗಿಲ್ಲ ಆಸಕ್ತಿ
ಶಾಸಕರ ನಿಧಿ ಬಳಕೆಯಲ್ಲಿ ಪರಮ ನಿರ್ಲಕ್ಷ್ಯ ಅನುಸರಣೆ ಆಗುತ್ತಿದ್ದು, ನಾಲ್ವರು ಶಾಸಕರು ಸಂಪೂರ್ಣ ನಿಧಿ ಬಳಸಿಕೊಂಡಿದ್ದರೆ, 6 ಶಾಸಕರು ಶೇ.90ಕ್ಕಿಂತ ಅಧಿಕ ಪ್ರಮಾಣದ ನಿಧಿ ಬಳಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 40.79 ಕೋಟಿ ರೂ. ಖರ್ಚಾಗದೆ ಉಳಿದಿದೆ. ಇನ್ನು ಹಾಜರಾತಿ ವಿಚಾರದಲ್ಲಿ ನೆಲಮಂಗಲದ ಶಾಸಕ ಶ್ರೀನಿವಾಸ್ ಶೇ.100 ರಷ್ಟು ಸಕ್ರಿಯರಾಗಿದ್ದು, ಮೂವರು ಶಾಸಕರ ಹಾಜರಾತಿ ಶೇ.70ಕ್ಕಿಂತ ಕಡಿಮೆ ಇದೆ. ಶೇ.53.62 ರಷ್ಟು ಹಾಜರಾತಿ ಕೊರತೆ ಇರುವ ಪ್ರಿಯಕೃಷ್ಣ ಕೊನೆಯ ಸ್ಥಾನದಲ್ಲಿ ಇದ್ದಾರೆ.
ಮುನಿರತ್ನ ವಿರುದ್ಧ ಅತಿ ಹೆಚ್ಚು ಕೇಸ್
ಇನ್ನು ಶಾಸಕರ ಅಪರಾಧ ಚಟುವಟಿಕೆ ಅಥವಾ ಅವರ ವಿರುದ್ಧ ಪ್ರಕರಣಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಾಗಿದ್ದು, ಮುನಿರತ್ನ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಸೇರಿದಂತೆ 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಡಿಸೆಂಬರ್ 2024 ರಲ್ಲಿ ಅವರ ಮೇಲೆ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಆರೋಪಗಳೂ ಕೇಳಿ ಬಂದಿವೆ. ಇದರೊಂದಿಗೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಶಾಸಕರೆನಿಸಿಕೊಂಡಿದ್ದಾರೆ.




