SIR ಕರ್ತವ್ಯದ ವೇಳೆ ಮತ್ತೊಂದು ದುರಂತ: ಬಿಎಲ್‌ಒ ಶಿಕ್ಷಕಿ ಹೃದಯಾಘಾತದಿಂದ ಸಾವು!

ಬೆಂಗಳೂರಿನ ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಶಮಂತಾಕುಮಾರಿ ಎಸ್‌ಐಆರ್ (SIR) ಬಿಎಲ್‌ಒ ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇಲಾಧಿಕಾರಿಗಳು ಶೀಘ್ರ ಕೆಲಸ ಮುಗಿಸುವಂತೆ ನೀಡುತ್ತಿದ್ದ ತೀವ್ರ ಒತ್ತಡವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿಬ್ಬಂದಿಗಳ ಮೇಲಿನ ಕೆಲಸದ ಒತ್ತಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

SIR ಕರ್ತವ್ಯದ ವೇಳೆ ಮತ್ತೊಂದು ದುರಂತ: ಬಿಎಲ್‌ಒ ಶಿಕ್ಷಕಿ ಹೃದಯಾಘಾತದಿಂದ ಸಾವು!
ಶಮಂತಾಕುಮಾರಿ

Updated on: Jul 24, 2026 | 10:47 AM

ಮುಖ್ಯಾಂಶಗಳು

  • SIR ಕರ್ತವ್ಯದಲ್ಲಿದ್ದ ಬಿಎಲ್‌ಒ ಶಿಕ್ಷಕಿ ಶಮಂತಾಕುಮಾರಿ ಹೃದಯಾಘಾತದಿಂದ ನಿಧನರಾದರು.
  • ಮೇಲಾಧಿಕಾರಿಗಳ ತೀವ್ರ ಕೆಲಸದ ಒತ್ತಡವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
  • ಈ ಮುಂಚೆಯೂ SIR ಡ್ಯೂಟಿಯಲ್ಲಿದ್ದ ವಿಎಒ ಭುವನಾ ಅಪಘಾತದಲ್ಲಿ ಮೃತಪಟ್ಟಿದ್ದರು.

ಬೆಂಗಳೂರು, ಜುಲೈ 24: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಬಿಎಲ್‌ಒ (BLO) ಕರ್ತವ್ಯದಲ್ಲಿದ್ದ ಮತ್ತೊಬ್ಬರು ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಶಮಂತಾಕುಮಾರಿ (44) ಮೃತಪಟ್ಟವರಾಗಿದ್ದಾರೆ. ಇತ್ತೀಚೆಗಷ್ಟೇ ಇವರನ್ನು SIR ಪ್ರಕ್ರಿಯೆಯ ಬಿಎಲ್‌ಒ ಡ್ಯೂಟಿಗೆ ನಿಯೋಜಿಸಲಾಗಿತ್ತು. ಈ ಹಿಂದೆ ತುಮಕೂರು ಮೂಲದ ಶಿಕ್ಷಕಿ ಭುವನಾ ಪರಿಷ್ಕರಣೆಗೆ ತೆರಳುತ್ತಿದ್ದ ವೇಳೆ ಅಪಘಾತದಿಂದ ಮೃತಪಟ್ಟಿದ್ದರು.

ಮೇಲಾಧಿಕಾರಿಗಳ ಒತ್ತಡವೇ ಕಾರಣವೆಂದು ಕುಟುಂಬಸ್ಥರ ಆರೋಪ

SIR ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸುವಂತೆ ಮೇಲಾಧಿಕಾರಿಗಳು ತೀವ್ರ ಒತ್ತಡ ಹೇರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನನಗೆ ಈ ಕೆಲಸದಿಂದ ತೀವ್ರ ಒತ್ತಡವಾಗುತ್ತಿದೆ, ಈ ಕೆಲಸದಿಂದ ನನ್ನನ್ನು ಬಿಡುಗಡೆ ಮಾಡಲು ಸಾಧ್ಯವೇ? ಎಂದು ಮೃತ ಶಿಕ್ಷಕಿ ಶಮಂತಾಕುಮಾರಿ ಅವರು ತಮ್ಮ ಕುಟುಂಬದವರ ಬಳಿ ಅಳಲು ತೋಡಿಕೊಂಡಿದ್ದರೆನ್ನಲಾಗಿದೆ. ಕೆಲಸದ ಒತ್ತಡದಿಂದಾಗಿ ಅವರಲ್ಲಿ ರಕ್ತದೊತ್ತಡ (BP) ಮತ್ತು ಸಕ್ಕರೆ ಕಾಯಿಲೆ (Sugar) ಪ್ರಮಾಣ ಹೆಚ್ಚಾಗಿ, ತೀವ್ರ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಹಿಂದೆಯೂ ಸಂಭವಿಸಿತ್ತು ಇಂತಹುದೇ ದುರಂತ

ಇದೇ ರೀತಿಯ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಕರ್ತವ್ಯದ ವೇಳೆಯಲ್ಲಿಯೇ ಮುಂಚೆ ಮತ್ತೊಂದು ದುರಂತ ಸಂಭವಿಸಿತ್ತು. SIR ಕರ್ತವ್ಯಕ್ಕೆ ತೆರಳುವಾಗ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ವಿಎಒ ಭುವನಾ ಚಿಕಿತ್ಸೆ ಫಲಿಸದೇ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದರು. ಅಂದು ಬೆಳಿಗ್ಗೆ ತುಮಕೂರು ತಾಲೂಕಿನ ಗೂಳೂರು ಬಳಿ ಬೈಕ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆಯ ವಿಎಒ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತ್ತು.

ಅಂದು ನಡೆದಿದ್ದೇನು?

ತುಮಕೂರಿನ ಹುಲ್ಲೇನಹಳ್ಳಿಯ ಗ್ರಾಮಲೆಕ್ಕಾಧಿಕಾರಿ ಹಾಗೂ ಟಿ. ಬೇಗೂರು ನಿವಾಸಿಯಾಗಿದ್ದ ಭುವನಾ, ಅಂದು ಬೆಳಿಗ್ಗೆ ಎಸ್ಐಆರ್ ಕರ್ತವ್ಯದ ಸೂಚನೆ ಹಿನ್ನೆಲೆಯಲ್ಲಿ ನಿಯುಕ್ತಿಗೊಂಡ ಸ್ಥಳಕ್ಕೆ ತೆರಳುತ್ತಿದ್ದರು. ಹೀಗಾಗಿ ತುಮಕೂರು ಬಸ್ ನಿಲ್ದಾಣದ ಬಳಿ ನಿಲ್ಲಿಸಿದ ತಮ್ಮ ಬೈಕ್‌ನಲ್ಲಿ ಗೂಳೂರಿನ ನಾಡಕಚೇರಿಗೆ ತೆರಳಿದ್ದರು. ಈ ವೇಳೆ ಕುಣಿಗಲ್ ರಸ್ತೆಯ ಗೂಳೂರು ಬಳಿ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿತ್ತು.

ಇದನ್ನೂ ಓದಿ  ಎಸ್‌ಐಆರ್ ಫಾರ್ಮ್‌ಗಳಲ್ಲಿ 2002ರ ಮಾಹಿತಿ ಕಡ್ಡಾಯವಲ್ಲ; ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ

ಹೆಲ್ಮೆಟ್ ಧರಿಸಿದ್ದರೂ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೇ ಭುವನಾ ಕೊನೆಯುಸಿರೆಳೆದಿದ್ದರು. ಬಳಿಕ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us