
ಬೆಂಗಳೂರು, ನ. 24: ಸಿಲಿಕಾನ್ ಸಿಟಿ ಬೆಂಗಳೂರಿನ ಮೆಟ್ರೋ ಜಾಲಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಸಿಕ್ಕಿದೆ. ಟೆಕ್ ಕಾರಿಡಾರ್‌ನ ಭೀಕರ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಿರುವ ಬ್ಲೂ ಲೈನ್ ಮೆಟ್ರೋ ಮಾರ್ಗದಲ್ಲಿ ಇದೀಗ ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿವರೆಗೆ ಮೆಟ್ರೋ ರೈಲು ಯಶಸ್ವಿಯಾಗಿ ಸಂಚರಿಸಿದ್ದು, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಹಾಗೂ ಟ್ರಯಲ್ ರನ್ ಪ್ರಗತಿಯನ್ನು ಪರಿಶೀಲಿಸಿದ್ದಾರೆ.
ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿವರೆಗೆ ಆರಂಭವಾದ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರದ ವೇಳೆ, ಇಂದು ಬೆಳಗ್ಗೆ ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣಕ್ಕೆ ರೈಲು ಆಗಮಿಸಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಕಾಮಗಾರಿ ಪ್ರಗತಿ ಹಾಗೂ ಮಾರ್ಗದ ನಕ್ಷೆಗಳ ಕುರಿತು ವಿವರವಾದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ಸುಮಾರು 11ರಿಂದ 12 ಲಕ್ಷ ಜನ ಉದ್ಯೋಗಕ್ಕಾಗಿ ಈ ಟೆಕ್ ಕಾರಿಡಾರ್ ಭಾಗಕ್ಕೆ ಬರುತ್ತಾರೆ. ಬ್ಲೂ ಲೈನ್ ಮೆಟ್ರೋ ಸಂಚಾರ ಆರಂಭವಾದರೆ ಈ ಭಾಗದ ಲಕ್ಷಾಂತರ ಉದ್ಯೋಗಿಗಳು ಹಾಗೂ ವಾಹನ ಸವಾರರಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಗಲಿದೆ.
ಮುಂದಿನ ಒಂದು ತಿಂಗಳಲ್ಲಿ ಇನ್ನೂ ನಾಲ್ಕು ನಿಲ್ದಾಣಗಳಲ್ಲಿ ಟ್ರಯಲ್ ರನ್ ನಡೆಸಲು ಯೋಜನೆ ರೂಪಿಸಲಾಗಿದೆ. ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಮುಂದಿನ ಒಂದೂವರೆ ವರ್ಷದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮೆಟ್ರೋ ಟಿಕೆಟ್ ದರ ಏರಿಕೆ ಕುರಿತ ಚರ್ಚೆಗಳ ನಡುವೆ ಸ್ಪಷ್ಟನೆ ನೀಡಿರುವ ಸಚಿವರು, ಸದ್ಯಕ್ಕೆ ಟಿಕೆಟ್ ದರ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಬಿಎಂಆರ್‌ಸಿಎಲ್‌ಗೆ ವಾರ್ಷಿಕ ಸುಮಾರು 600 ಕೋಟಿ ರೂಪಾಯಿ ಆರ್ಥಿಕ ಹೊರೆ ಇದೆ. ಮೆಟ್ರೋ ಆರಂಭವಾಗಿ 15 ವರ್ಷ ಕಳೆದಿರುವುದರಿಂದ ಹಳೆಯ ಉಪಕರಣಗಳ ಬದಲಾವಣೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. ಕೇವಲ ಟಿಕೆಟ್ ಆದಾಯದಿಂದಲೇ ಮೆಟ್ರೋ ನಿರ್ವಹಣೆ ಸಾಧ್ಯವಿಲ್ಲ. ದೆಹಲಿ ಮೆಟ್ರೋ ಮಾದರಿಯಲ್ಲಿ ಬೆಂಗಳೂರಿನ ಮೆಟ್ರೋಗೂ ಕೇಂದ್ರ ಸರ್ಕಾರ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಪ್ರತಿಪಾದಿಸಿದ್ದಾರೆ. ಅಲ್ಲದೆ, ಮೆಟ್ರೋ ಸಾಲದ ಹೊರೆಯನ್ನು ಸದ್ಯ ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದೂ ತಿಳಿಸಿದ್ದಾರೆ.
ಬೆಂಗಳೂರಿನ ಸರ್ಜಾಪುರ ರಸ್ತೆಯ ಭವಿಷ್ಯದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಜಾಪುರದಿಂದ ಇಬ್ಬಲೂರು ಜಂಕ್ಷನ್‌ವರೆಗೆ ಡಬಲ್ ಡೆಕ್ಕರ್ ರಸ್ತೆ ಹಾಗೂ ಮೆಟ್ರೋ ನಿರ್ಮಾಣದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಕಳೆದ 22 ತಿಂಗಳಿಂದ ಕೇಂದ್ರದ ಬಳಿ ಬಾಕಿ ಉಳಿದಿದ್ದ ಈ ಪ್ರಸ್ತಾವನೆ ಕುರಿತು ಇದೀಗ ಕೇಂದ್ರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ. ಈ ಭಾಗದಲ್ಲಿ ಐಟಿ ಕಂಪನಿಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ವಿಲ್ಲಾಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುವ ಆತಂಕವಿದೆ ಎಂದು ರಾಜ್ಯ ಸರ್ಕಾರ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ ಎಂದು ಸಚಿವರು ವಿವರಿಸಿದ್ದಾರೆ. ಒಟ್ಟಿನಲ್ಲಿ ಬ್ಲೂ ಲೈನ್ ಮೆಟ್ರೋ ಟ್ರಯಲ್ ರನ್ ಆರಂಭ ಹಾಗೂ ಸರ್ಜಾಪುರ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ಸ್ಪಂದನೆ ಸಿಕ್ಕಿರುವುದು ಬೆಂಗಳೂರಿನ ಜನರಲ್ಲಿ ಭರವಸೆ ಮೂಡಿಸಿದ್ದು, ಈ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಜನರ ಬಳಕೆಗೆ ಮುಕ್ತವಾಗುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ