ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ: ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಕನಸು ನುಚ್ಚುನೂರು

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಬಿಎಂಟಿಸಿ ಬಸ್ ಹರಿದು 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ದ್ವಿಚಕ್ರ ವಾಹನದಿಂದ ಬಿದ್ದ ಯುವತಿ ಮೇಲೆ ಬಸ್ ಹರಿದಿದೆ. ಕೆಂಗೇರಿ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಬಿಎಂಟಿಸಿ ಬಸ್​ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ: ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಕನಸು ನುಚ್ಚುನೂರು
ಬಿಎಂಟಿಸಿ ಬಸ್ ಅಪಘಾತ
Image Credit source: tv9 kannada

Updated on: Apr 25, 2026 | 7:54 PM

ಬೆಂಗಳೂರು, ಏಪ್ರಿಲ್​ 25: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್‌ಗೆ (BMTC Bus) ಮತ್ತೊಂದು ಬಲಿಯಾಗಿದೆ (death). ನಗರದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಶಿರೀಷಾ(21) ಮೃತ ಇಂಜಿನಿಯರಿಂಗ್‌ ವಿದ್ಯಾರ್ಥಿನಿ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಶಿರೀಷಾ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಅಂತರ ಕಡಿಮೆಯಾದ ಕಾರಣ, ಬೈಕ್‌ನ ಹ್ಯಾಂಡಲ್ ಬಸ್‌ಗೆ ತಗುಲಿದೆ. ಪರಿಣಾಮ ಶಿರೀಷಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ವೇಗವಾಗಿ ಬಂದ ಬಸ್ ಯುವತಿಯ ಮೇಲೆ ಹರಿದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಿಎಂಟಿಸಿ ಬಸ್ ಚಾಲಕ ವಶಕ್ಕೆ

ಅಪಘಾತದ ಬಳಿಕ ಸ್ಥಳಕ್ಕೆ ಧಾವಿಸಿದ ಕೆಂಗೇರಿ ಸಂಚಾರಿ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಬಸ್ ಚಾಲಕ ಚಂದ್ರು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ್ದಾರೆ.

ಪ್ರತ್ಯಕ್ಷದರ್ಶಿ ಶಂಕರ್ ಪಾಟಿಲ್​ ಹೇಳಿದ್ದಿಷ್ಟು 

ಇನ್ನು ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಶಂಕರ್ ಪಾಟಿಲ್​ ಎಂಬುವವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮಧ್ಯಾಹ್ನ 2:15ಕ್ಕೆ ಘಟನೆ ನಡೆದಿದೆ. ಆಕೆ ಆರ್​​ಎನ್​​ಎಸ್​ ಕಾಲೇಜು ವಿದ್ಯಾರ್ಥಿನಿ. ತಲೆ ಮೇಲೆ ಬಸ್​ನ‌ ಹಿಂದಿನ ಚಕ್ರ ಹತ್ತಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದರು.

ಇದನ್ನೂ ಓದಿ: ನೆಲಮಂಗಲ ಬಳಿ ಭೀಕರ ಅಪಘಾತ: ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​

ಈ ರಸ್ತೆಯಲ್ಲಿ ಒಂದು ಕಡೆಯು ಹಂಪ್ಸ್ ಇಲ್ಲ. ಅತೀ ವೇಗವಾಗಿ ಬಸ್​ಗಳು ಸಂಚರಿಸುತ್ತವೆ. ಪೊಲೀಸರಿಗೆ ಹಲವು ಬಾರಿ ಹೇಳಿದರೂ ಹಂಪ್ಸ್ ಹಾಕಿಸಿಲ್ಲ. ಹೀಗಾಗಿ ತಿಂಗಳಿಗೆ ಮೂರ್ನಾಲ್ಕು ಅಪಘಾತ ಇಲ್ಲಿ ಆಗುತ್ತಲ್ಲೇ ಇರುತ್ತವೆ ಎಂದಿದ್ದಾರೆ.

ವರದಿ: ವಿಕಾಸ್, ಟಿವಿ9 ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us