
ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ (Bengaluru) ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ (Cantonment Railway Station) ಆವರಣದಲ್ಲಿರುವ 368 ಮರಗಳನ್ನು ಕಡಿಯಲು ರೈಲ್ವೆ ಇಲಾಖೆ ಪ್ಲಾನ್ ಮಾಡಿದ್ದು, ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತಾಗಿ ಬಿಬಿಎಂಪಿ ಅರಣ್ಯ ವಿಭಾಗ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ನೀಡಿದೆ.
ಬೆಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಕಂಟೋನ್ಮೆಂಟ್ನಲ್ಲಿ ಬಹುಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ 368 ಮರಗಳನ್ನು ಕಡಿಯಬೇಕು ಅಂತ ರೈಲ್ವೆ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿರುವ ಪಾಲಿಕೆ ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಕಟಣೆ ಹೊರಡಿಸಿದೆ.
ಹೆಚ್ಚಾಗಿ ವಿರೋಧ ಕೇಳಿಬಂದಲ್ಲಿ ಹಾಗೂ ಅದಕ್ಕೆ ರೈಲ್ವೆ ಅಧಿಕಾರಿಗಳು ಸೂಕ್ತ ಉತ್ತರ ನೀಡದಿದ್ದಲ್ಲಿ ಮರ ಕಡಿಯಲು ಅನುಮತಿ ನೀಡಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಪರಿಸರ ಪ್ರೇಮಿಗಳು ಮತ್ತು ಪರಿಸರ ವಾದಿಗಳು ಯಾವುದೇ ಕಾರಣಕ್ಕೂ ಪಾಲಿಕೆ ಅನುಮತಿ ನೀಡಬಾರದು ಅಂತ ಆಗ್ರಹಿಸಿದ್ದಾರೆ.
ನಗರದ ಎಲ್ಲ ಕಡೆಗಳಲ್ಲೂ ಬಹು ಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಇದಕ್ಕೆ ಮರ ಗಿಡಗಳ ನಾಶ ನಿರಂತರವಾಗಿ ಆಗುತ್ತಿದೆ. ಪರಿಸರ ಸ್ನೇಹಿಯಾಗಿ ನಗರ ಅಭಿವೃದ್ಧಿ ಆಗುವುದು ಮರೀಚಿಕೆ ಆಗುತ್ತಿದೆ. ಇನ್ನಾದರೂ ಕೂಡ ಪ್ರಕೃತಿ ಬಗ್ಗೆ ಕಳಕಳಿ ಇಟ್ಟುಕೊಳ್ಳುವ ಮೂಲಕ ಬೆಂಗಳೂರಿನಲ್ಲಿ ಮರಗಳು ಕಣ್ಮರೆ ಆಗುವುದು ಕಡಿಮೆಯಾಗಲಿ ಎಂದು ಪರಿಸರ ವಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೇಸಿಗೆ ರಜೆ: ಈ ಜಿಲ್ಲೆಗಳಿಗೆ ವಿಶೇಷ ರೈಲುಗಳು, ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಸಂಪೂರ್ಣ ವಿವರ
ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು 480 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಈ ರೈಲು ನಿಲ್ದಾಣದಲ್ಲಿ 1000 ಬೈಕ್ ಹಾಗೂ 1000 ಕಾರು ಒಟ್ಟು 2000 ವಾಹನಗಳ ನಿಲುಗಡೆಗೆ ಬಹು ಮಹಡಿ ವಾಹನ ನಿಲುಗಡೆ ಸಂಕೀರ್ಣ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಕೆಲಸಗಳು ಸಹ ಭರದಿಂದ ಸಾಗಿವೆ.
ಲಾರ್ಜ್ ವೇಟಿಂಗ್ ರೂಮ್, ಹೆಚ್ಚುವರಿ ಟಿಕೆಟ್ ಕೌಂಟರ್‌ಗಳು, ಸೋಲಾರ್ ಪವರ್ ಮೇಲ್ಚಾವಣಿ, ನಾಲ್ಕು ಫೂಟ್ ಓವರ್ ಬ್ರಿಡ್ಜ್ ಹಾಗೂ ಬೈಕ್ ಮತ್ತು ಕಾರುಗಳ ನಿಲುಗಡೆಗೆ 2000 ವಾಹನಗಳನ್ನು ಪಾರ್ಕಿಂಗ್ ಮಾಡಲು ಸಾಧ್ಯವಾಗುವಂತಹ ಬಹು ಮಹಡಿ ವಾಹನ ನಿಲುಗಡೆ ಸಂಕೀರ್ಣ ವ್ಯವಸ್ಥೆಯನ್ನು ಈ ಯೋಜನೆಯಡಿ ಕಲ್ಪಿಸಲಾಗುತ್ತಿದೆ. ಹಿಂಭಾಗದಲ್ಲಿ ತಲಾ 500 ಬೈಕ್, ಕಾರು ಹಾಗೂ ಮುಂಭಾಗದಲ್ಲಿ ತಲಾ 500 ಬೈಕ್ ಮತ್ತು ಕಾರುಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ವರದಿ: ಲಕ್ಷ್ಮೀ ನರಸಿಂಹ್