ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪುತ್ರ ಮಾಡಾಳ್ ಪ್ರಶಾಂತ್ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಪತ್ತೆಯಾದ ಪ್ರಕರಣ ಸಂಬಂಧ ಪ್ರಶಾಂತ್ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಮಾರ್ಚ್ 16ರ ವರೆಗೆ ಲೋಕಾಯುಕ್ತ ಕಸ್ಟಡಿಗೆ (Lokayukta Custody) ಒಪ್ಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದ ಬಳಿಕ ಲೋಕಾಯುಕ್ತ ಪೊಲೀಸರು ಮಾಡಾಳ್ ಪ್ರಶಾಂತ್ನನ್ನು ಕಚೇರಿಗೆ ಕರೆತಂದರು. ಕಸ್ಟಡಿ ಅವಧಿ ಮುಕ್ತಯಾದವರೆಗೆ ತೀವ್ರ ವಿಚಾರಣೆ ನಡೆಯಲಿದ್ದು, ಅಪ್ಪ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಗ ಮಾಡಾಳ್ ಪ್ರಶಾಂತ್ನನ್ನು ಎದುರು ಬದುರು ಕೂರಿಸಿ ಟ್ರ್ಯಾಪ್ ವೇಳೆ ಸಿಕ್ಕ ಹಣ ಹಾಗೂ ಮನೆಯಲ್ಲಿ ಸಿಕ್ಕ ಆರು ಕೋಟಿ ಹಣದ ಸಂಬಂಧ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲೋಕಾಯುಕ್ತ ಪೊಲೀಸರು ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಟೆಂಡರ್ ಕೊಡಿಸುವ ವಿಚಾರದಲ್ಲಿ ಗುತ್ತಿಗೆದಾರನಿಂದ 80 ಲಕ್ಷಕ್ಕೂ ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಮುಂಗಡವಾಗಿ 40 ಲಕ್ಷ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಪ್ರಶಾಂತ್ನನ್ನು ಲಾಕ್ (Lokayukta raid) ಮಾಡಿದ್ದರು.
ಶಾಸಕರ ಪುತ್ರ ಪ್ರಶಾಂತ್ BWSSB ಮುಖ್ಯ ಲೆಕ್ಕಾಧಿಕಾರಿಯಾಗಿದ್ದಾರೆ. KSDL ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದರು ಎನ್ನಲಾಗುತ್ತಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿದ್ದವು. ಅಲ್ಲದೆ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ವಿರುದ್ಧ ಲೋಕಾಯುಕ್ತ ಪೊಲೀಸರು ಎರಡು ಎಫ್ಐಆರ್ ದಾಖಲಿಸಿದ್ದಾರೆ.
ಮಾರ್ಚ್ 2 ರಂದು ನಡೆದ ಟ್ರ್ಯಾಪ್ ಕಾರ್ಯಚರಣೆ ವೇಳೆ 2 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಪೈಕಿ ಶ್ರೇಯಸ್ ಕಶ್ಯಪ್ ಕಂಪೆನಿಯಿಂದ 40 ಲಕ್ಷ ರೂ. ಲಂಚ ಪಡೆಯುವಾಗ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದರು. ಉಳಿದಂತೆ ಕ್ರೆಸೆಂಟ್ ರಸ್ತೆಯ ಖಾಸಗಿ ಕಚೇರಿಯಲ್ಲಿ ಮತ್ತೆ 1.60 ಲಕ್ಷ ರೂ. ಪತ್ತೆಯಾಗಿತ್ತು. ಕರ್ನಾಟಕ ಆರೋಮಾಸ್ ಕಂಪೆನಿಯ ಆಲ್ಬರ್ಟ್ ನಿಕೋಲಸ್ ಬಳಿ 45 ಲಕ್ಷ ರೂ. ಮತ್ತು ಗಂಗಾಧರ್ ಬಳಿ 45 ಲಕ್ಷ ರೂ. ಪತ್ತೆಯಾದ ಹಿನ್ನಲೆ ಪ್ರತ್ಯೇಕ ಕೇಸ್ ದಾಖಲಿಸಲಾಗಿದೆ. ಮತ್ತೊಂದೆಡೆ ಪ್ರಶಾಂತ್ ಮಾಡಾಳು ಸಂಬಂಧಿ ಸುರೇಂದ್ರ ಬಳಿ 60 ಲಕ್ಷ ಪತ್ತೆಯಾಗಿತ್ತು. ಹಾಗಾಗಿ ಪ್ರತ್ಯೇಕ ಮತ್ತೆರಡು ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಲಂಚ ಪ್ರಕರಣ: ಲೋಕಾಯುಕ್ತ ವಿಚಾರಣೆ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಿಷ್ಟು
ಇನ್ನು ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೂಡ ಕೋಟಿ ಕೋಟಿ ಹಣ ಸಿಕ್ಕಿದೆ. ಈ ಸಂಬಂಧಿಸಿದಂತೆ ಆರೋಪಿಯಾಗಿ ಕಳೆದ ಕೆಲ ದಿನಗಳಿಂದ ಮಾಡಾಳ್ ವಿರೂಪಾಕ್ಷಪ್ಪ ತಲೆಮರಿಸಿಕೊಂಡಿದ್ದರು. ಆದರೆ, ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ನ್ಯಾಯಮೂರ್ತಿ ಕೆ. ನಟರಾಜನ್ ಏಕಸದಸ್ಯತ್ವದ ಪೀಠ, 5 ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ನೀಡುವಂತೆ ಆದೇಶಿಸಿತ್ತು. ಅಲ್ಲದೇ ಆದೇಶ ತಲುಪಿದ 48 ಗಂಟೆಯಲ್ಲಿ ತನಿಖೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ಅದರಂತೆ ಸಾರ್ವಜನಿಕರ ಪ್ರದೇಶದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡ ಶಾಸಕರನ್ನು ಬೆಂಬಲಿಗರು ಮೆರವಣಿಗೆ ನಡೆಸಲಾಗಿತ್ತಲ್ಲದೆ, ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿದ್ದರು.
ಲೋಕಾಯುಕ್ತ ದಾಳಿಯ ವೇಳೆ ಸಿಕ್ಕ ಹಣ ಅಕ್ರಮವಲ್ಲ, ತಾನೊಬ್ಬ ಅಡಕೆ ಬೆಳೆಗಾರ ಮತ್ತು ಉದ್ಯಮಿ. ಯಾವುದೇ ಅಡಕೆ ಬೆಳೆಗಾರನ ಮನೆಗೆ ಹೋದರೂ ಮನೆಯಲ್ಲಿ ಕನಿಷ್ಟವೆಂದರೂ 2-3 ಕೋಟಿ ರೂಪಾಯಿ ಸಿಗುತ್ತದೆ ಎಂದು ಜಾಮೀನು ಸಿಕ್ಕ ಶಾಸಕ ವಿರೂಪಾಕ್ಷಪ್ಪ ಹೇಳಿಕೆ ನೀಡಿದ್ದರು. ತಾನು ಎಲ್ಲೂ ಹೋಗಿರಲಿಲ್ಲ, ಆರೋಪ ಮೈಮೇಲೆ ಬಂದಿದ್ದರಿಂದ ಜನರೆದುರು ಬಂದಿರಲಿಲ್ಲ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Mon, 13 March 23