
ಬೆಂಗಳೂರು, ಜನವರಿ 30: ಬೆಂಗಳೂರಿನ ವಿವಿಧೆಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 9 ಮಹಿಳೆಯರ ರಕ್ಷಣೆ ಮಾಡಲಾಗಿದೆ. ಬಿಇಎಲ್ ಬಡಾವಣೆಯಲ್ಲಿ ಹೈಫೈ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು, ಹೊರ ರಾಜ್ಯದಿಂದ ಕೆಲಸಕ್ಕೆ ಬರುವ ಯುವತಿಯರನ್ನೇ ಗುರಿಯಾಗಿಸಿಕೊಂಡಿದ್ದರು. ಅವರಿಗೆ ಕೆಲಸದ ಆಸೆ ತೋರಿಸಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದರು ಎಂಬುದು ತಿಳಿದುಬಂದಿದೆ.
ಮನೆ ಮಾಲೀಕರ ಬಳಿ ಮಹಿಳೆಗೆ ಪತಿ ಇಲ್ಲ ಎಂದು ಹೇಳಿ ಬಾಡಿಗೆಗೆ ಪಡೆಯುತ್ತಿದ್ದರು. ನಂತರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಗಿರಾಕಿಗಳನ್ನು ಫೋನ್ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿಗಳು, ಅವರನ್ನು ಮನೆಗೆ ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಮತ್ತು ಹೊರ ರಾಜ್ಯದ ಯುವತಿಯರನ್ನು ಇಟ್ಟುಕೊಂಡು ಆರೋಪಿಗಳು ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಮಹಿಳಾ ಸಂರಕ್ಷಣಾ ಘಟಕದಿಂದ ದಾಳಿ ನಡೆಸಲಾಯಿತು. ಇಬ್ಬರು ಮಹಿಳೆಯರನ್ನೂ ಬಂಧಿಸಲಾಗಿದೆ. ಸದ್ಯ ಬ್ಯಾಡರಹಳ್ಳಿ ಠಾಣೆಯ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಬೆಂಗಳೂರಿನ ಅನೇಕ ಭಾಗಗಳಲ್ಲಿ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಸಂಪಿಗೆಹಳ್ಳಿ, ಕೆಆರ್ ಪುರಂ, ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದ್ದು ಹೋಟೆಲ್, ಅಪಾರ್ಟ್ಮೆಂಟ್, ಮನೆಗಳಲ್ಲಿ ದಂಧೆ ನಡೆಸುತ್ತಿದ್ದವರ ಬಂಧಿಸಲಾಗಿದೆ.
ದ್ವಿಚಕ್ರ ವಾಹನ ಸವಾರನ ಮೇಲೆ ಕಾರು ಚಾಲಕ ಹಾಗೂ ಆತನ ಸಹಚರರು ನಡು ರಸ್ತೆಯಲ್ಲಿ ಅಮಾನುಷವಾಗಿ ಹಲ್ಲೆ ಮಾಡಿದ್ದರ ಜತೆಗೆ, ಕಾರು ಚಲಾಯಿಸಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲೇಶ್ವರದ ಮಿಲ್ಕ್ ಕಾಲೋನಿ ನಿವಾಸಿ ಎನ್ ಭರತ್ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ. ಮಲ್ಲೇಶ್ವರದ 17ನೇ ಅಡ್ಡರಸ್ತೆಯ ಜಿಯೋ ಮೆಸ್ಟ್ರಿ ಗ್ಯಾಸ್ಟೋ ಪಬ್ ಎದುರು ಈ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯ ಘಟನಾ ಸ್ಥಳದ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಭರತ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಈಗಾಗಲೇ ಸಿಸಿಟಿವಿ ಸುಳಿವು ಆಧರಿಸಿ ಕಾರು ಚಾಲಕ ಹಾಗೂ ಆತನ ಸಹರರ ಗುರುತು ಪತ್ತೆಹಚ್ಚಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ