ಬೆಂಗಳೂರು ನಗರ ವಿವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಪ್ಯಾಲೇಸ್ ರಸ್ತೆಯಲ್ಲಿ 3.5 ಕೋಟಿ ರೂ. ವೆಚ್ಚದ ಹೈಟೆಕ್ ಸ್ಕೈವಾಕ್ ನಿರ್ಮಾಣಕ್ಕೆ ಅಸ್ತು

ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಬಿಗ್ ನ್ಯೂಸ್. ಪ್ಯಾಲೇಸ್ ರಸ್ತೆ ದಾಟುವ ಸಮಸ್ಯೆಗೆ ಮುಕ್ತಿ ನೀಡಲು ₹3.5 ಕೋಟಿ ವೆಚ್ಚದ ಸುಸಜ್ಜಿತ ಸ್ಕೈವಾಕ್‌ಗೆ ಅನುಮೋದನೆ ಸಿಕ್ಕಿದೆ. ಲಿಫ್ಟ್, ಮೇಲ್ಛಾವಣಿ ಸೌಲಭ್ಯಗಳಿರುವ ಈ ಮೇಲ್ಸೇತುವೆ ವಿದ್ಯಾರ್ಥಿಗಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ಎಲ್ಲರ ಸುರಕ್ಷಿತ ಸಂಚಾರಕ್ಕೆ ನೆರವಾಗಲಿದೆ. ದಶಕಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ.

ಬೆಂಗಳೂರು ನಗರ ವಿವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಪ್ಯಾಲೇಸ್ ರಸ್ತೆಯಲ್ಲಿ 3.5 ಕೋಟಿ ರೂ. ವೆಚ್ಚದ ಹೈಟೆಕ್ ಸ್ಕೈವಾಕ್ ನಿರ್ಮಾಣಕ್ಕೆ ಅಸ್ತು
ಬೆಂಗಳೂರು ಸೆಂಟ್ರಲ್ ಕಾಲೇಜು
Edited By:

Updated on: Oct 23, 2026 | 10:36 AM

ಮುಖ್ಯಾಂಶಗಳು

  • ಸೆಂಟ್ರಲ್ ಕಾಲೇಜು ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಬಿಗ್ ಗುಡ್ ನ್ಯೂಸ್
  • ಪ್ಯಾಲೇಸ್ ರಸ್ತೆಯನ್ನು ದಾಟಲು ಪಡುತ್ತಿದ್ದ ಗೋಳಾಟಕ್ಕೆ ಮುಕ್ತಿ
  • 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸ್ಕೈವಾಕ್

ಬೆಂಗಳೂರು, ಅ.23: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ (ಸೆಂಟ್ರಲ್ ಕಾಲೇಜು ಕ್ಯಾಂಪಸ್) ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಕೊನೆಗೂ ಬಿಗ್ ಗುಡ್ ನ್ಯೂಸ್ ಸಿಕ್ಕಿದೆ. ಕ್ಯಾಂಪಸ್‌ನ ಎರಡು ಬ್ಲಾಕ್‌ಗಳ ನಡುವೆ ಇರುವ ಅತಿ ಹೆಚ್ಚು ವಾಹನ ಸಂಚಾರದ ಪ್ಯಾಲೇಸ್ ರಸ್ತೆಯನ್ನು ದಾಟಲು ಪಡುತ್ತಿದ್ದ ಗೋಳಾಟಕ್ಕೆ ಮುಕ್ತಿ ಸಿಗಲಿದ್ದು, ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸ್ಕೈವಾಕ್ (ಪಾದಾಚಾರಿ ಮೇಲ್ಸೇತುವೆ) ನಿರ್ಮಾಣಕ್ಕೆ ಅಧಿಕೃತ ಅನುಮೋದನೆ ನೀಡಿದೆ.

ದಶಕಗಳ ಇತಿಹಾಸ ಹೊಂದಿರುವ ಬೆಂಗಳೂರು ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರಸ್ತುತ ಸುಮಾರು 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನೂರಾರು ಸಿಬ್ಬಂದಿ ವ್ಯಾಸಂಗ ಮತ್ತು ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತ ಕಚೇರಿ ಬ್ಲಾಕ್ ಕಡೆಯಿಂದ ಪ್ರಸನ್ನ ಕುಮಾರ್ ಬ್ಲಾಕ್, ತರಗತಿಗಳು ಹಾಗೂ ಆಟದ ಮೈದಾನದ ಕಡೆಗೆ ತೆರಳಲು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಿರಂತರವಾಗಿ ಪ್ಯಾಲೇಸ್ ರಸ್ತೆಯನ್ನು ದಾಟುವುದು ಕಡ್ಡಾಯವಾಗಿತ್ತು.

ನಿರಂತರವಾಗಿ ದ್ವಿಚಕ್ರ ವಾಹನ, ಬಸ್ ಮತ್ತು ಕಾರುಗಳ ವೇಗದ ಸಂಚಾರದಿಂದಾಗಿ ಅಪಘಾತಗಳ ಭೀತಿಯಲ್ಲೇ ರಸ್ತೆ ದಾಟಬೇಕಿತ್ತು. ಕಳೆದ 3 ವರ್ಷಗಳಿಂದ ವಿದ್ಯಾರ್ಥಿ ಸಂಘಟನೆಗಳು ಹಾಗೂ ಬೋಧಕ ವೃಂದದವರು ಈ ಭಾಗದಲ್ಲಿ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ, ಒಟ್ಟು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸ್ಕೈವಾಕ್ ನಿರ್ಮಿಸಲು ಪೂರ್ಣ ಒಪ್ಪಿಗೆ ನೀಡಲಾಗಿದೆ ಎಂದು ವಿವಿ ಕುಲಪತಿ ಪ್ರೊ. ರಮೇಶ್ ಅವರು ಮಾಹಿತಿ ನೀಡಿದ್ದಾರೆ.

ಈ ಮೇಲ್ಸೇತುವೆಯು ಕೇವಲ ಮೆಟ್ಟಿಲುಗಳಿಗೆ ಸೀಮಿತವಾಗಿರದೆ, ವಯೋವೃದ್ಧರು, ಗರ್ಭಿಣಿಯರು ಹಾಗೂ ಶಾರೀರಿಕವಾಗಿ ಅಸಮರ್ಥರಾದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲಿಫ್ಟ್ ವ್ಯವಸ್ಥೆ ಹಾಗೂ ಮಳೆ-ಬಿಸಿಲಿನಿಂದ ರಕ್ಷಣೆ ನೀಡಲು ಮೇಲ್ಛಾವಣಿ ಸೌಲಭ್ಯ ಹೊಂದಿರಲಿದೆ. ಯೋಜನೆಯ ವಿನ್ಯಾಸ ಮತ್ತು ಕಾಮಗಾರಿಯ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿ ವಹಿಸಿಕೊಂಡಿದ್ದು, ಅತ್ಯಂತ ಶೀಘ್ರದಲ್ಲೇ ಸ್ಥಳದಲ್ಲಿ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಿದೆ.

ಇದನ್ನೂ ಓದಿ: ಸಂಚಾರ ದಟ್ಟಣೆ ನಿವಾರಣೆಗೆ ಬೆಂಗಳೂರಿನ ಜಲ ಮೂಲಗಳಿಗೆ ಹೊಸ ಕಂಟಕ: ರಾಜಕಾಲುವೆ, ಕೆರೆಗಳ ಮೇಲೆ ರಸ್ತೆ ನಿರ್ಮಾಣಕ್ಕೆ GBA, BDA ಮಾಸ್ಟರ್ ಪ್ಲ್ಯಾನ್

“ಆಡಳಿತ ಮಂಡಳಿ ಬ್ಲಾಕ್‌ನಿಂದ ಪ್ರಸನ್ನ ಕುಮಾರ್ ಬ್ಲಾಕ್‌ಗೆ ದಿನವೂ ನೂರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಂಚರಿಸುತ್ತಾರೆ. ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುವುದರಿಂದ ಜೀವಭಯ ಉಂಟಾಗಿತ್ತು. ಎಲ್ಲರ ಹಿತದೃಷ್ಟಿ ಹಾಗೂ ಒತ್ತಾಯಕ್ಕೆ ಸ್ಪಂದಿಸಿ ಸಿಂಡಿಕೇಟ್‌ನಲ್ಲಿ 3.5 ಕೋಟಿ ರೂ. ವೆಚ್ಚದ ಸ್ಕೈವಾಕ್‌ಗೆ ಅನುಮೋದನೆ ನೀಡಿದ್ದೇವೆ.” ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಮೇಶ್ ಹೇಳಿದ್ದಾರೆ. ವಿಶ್ವವಿದ್ಯಾಲಯದ ಈ ನಿರ್ಧಾರವನ್ನು ವಿದ್ಯಾರ್ಥಿ ಸಮುದಾಯ ಮುಕ್ತಕಂಠದಿಂದ ಸ್ವಾಗತಿಸಿದ್ದು, ಕೇವಲ ಘೋಷಣೆಗೆ ಸೀಮಿತವಾಗದೆ ನಿಗದಿಪಡಿಸಿದ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಉದ್ಘಾಟನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us