
ಬೆಂಗಳೂರು, ಜುಲೈ 19: ನಗರದಲ್ಲಿ ಕಾಫಿ ಪ್ರಿಯರಿಗೇನು (Coffee Lovers) ಕಡಿಮೆಯಿಲ್ಲ. ಪ್ರತಿ ಗಲ್ಲಿ-ಗಲ್ಲಿಯಲ್ಲಿಯೂ ತರಹೇವಾರಿ ಕಾಫಿ ಶಾಪ್‌ಗಳು ತಲೆ ಎತ್ತುತ್ತಿದ್ದು, ಯುವ ಪೀಳಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಇದು ನೆಚ್ಚಿನ ತಾಣವಾಗಿದೆ. ಆದರೆ ಇದೇ ಕಾಫಿ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ ಎಂಬ ಕಹಿ ಸತ್ಯ ಬಯಲಾಗಿದ್ದು, ಕಾಫಿ ಪ್ರಿಯರಲ್ಲಿ ಭಾರೀ ಆತಂಕ ಮೂಡಿಸಿದೆ. ನಗರದ ಆಸ್ಪತ್ರೆಗಳಲ್ಲಿ ಓಪಿಡಿಗೆ ಬರುವ 15-20 ರೋಗಿಗಳು ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುವವರೇ ಆಗಿದ್ದಾರೆ ಎಂದು ವರದಿ ತಿಳಿಸಿದೆ.
ನಾವೆಲ್ಲರೂ ಸಾಂಪ್ರದಾಯಿಕ ಫಿಲ್ಟರ್ ಕಾಫಿಗೆ ಒಗ್ಗಿಕೊಂಡವರು. ಆದರೆ ಇಂದಿನ ಮಾಡರ್ನ್ ಕೆಫೆಗಳಲ್ಲಿ ಸಿಗುವ ಲ್ಯಾಟೆ (Latte), ಕ್ಯುಪುಚಿನೋ (Cappuccino) ಅಥವಾ ಕೋಲ್ಡ್ ಕಾಫಿಗಳಲ್ಲಿ ಬಳಸುವ ಪದಾರ್ಥಗಳು ದೇಹಕ್ಕೆ ಅತ್ಯಂತ ಹಾನಿಕಾರಕವಾಗಿವೆ. ಕಾಫಿಯ ರುಚಿ ಹೆಚ್ಚಿಸಲು ಬಳಸುವ ಕ್ಯಾರಮೆಲ್, ವೆನಿಲ್ಲಾ ಹಾಗೂ ಚಾಕೊಲೇಟ್ ಸಿರಪ್‌ಗಳಲ್ಲಿ ಕೃತಕ ಸಕ್ಕರೆಯ ಪ್ರಮಾಣ ಅತಿಯಾಗಿರುತ್ತದೆ. ಹೀಗಾಗಿ ಒಂದು ಕಪ್ ಕಾಫಿ ಕುಡಿದರೆ, ಅದು ಒಂದು ಹೊತ್ತಿನ ಊಟಕ್ಕೆ ಸಮನಾದ ಕ್ಯಾಲೋರಿಗಳನ್ನು ದೇಹಕ್ಕೆ ಸೇರಿಸುತ್ತದೆ. ನಿರಂತರವಾಗಿ ಇಂತಹ ಕಾಫಿ ಸೇವನೆಯಿಂದಾಗಿ ಯುವಕರಲ್ಲಿ ತೂಕ ಹೆಚ್ಚಳ (Obesity) ಮತ್ತು ಅತಿ ಸಣ್ಣ ವಯಸ್ಸಿನಲ್ಲೇ ಟೈಪ್-2 ಮಧುಮೇಹ (Diabetes) ಕಾಣಿಸಿಕೊಳ್ಳುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಮ್ಮ ಮೆದುಳಿನಲ್ಲಿ ಆಯಾಸ ಮತ್ತು ಸುಸ್ತನ್ನು ಉಂಟುಮಾಡುವ ‘ಅಡೆನೊಸಿನ್’ (Adenosine) ಎಂಬ ರಾಸಾಯನಿಕ ರಿಸೆಪ್ಟರ್‌ಗಳನ್ನು ಬ್ಲಾಕ್ ಮಾಡುವ ಮೂಲಕ ಕೆಫಿನ್ ಕೆಲಸ ಮಾಡುತ್ತದೆ. ಇದು ನಮಗೆ ಚುರುಕುತನ ನೀಡುವುದರ ಜೊತೆಗೆ ‘ಅಡ್ರಿನಾಲಿನ್’ ನಂತಹ ಒತ್ತಡದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಕೆಲವರನ್ನು ಜಾಗರೂಕರಾಗಿಟ್ಟರೆ, ಇನ್ನು ಕೆಲವರಲ್ಲಿ ಅತಿಯಾದ ಆತಂಕ ಮತ್ತು ಅತಿ-ಉತ್ತೇಜನಕ್ಕೆ ಕಾರಣವಾಗುತ್ತದೆ.
ನಮ್ಮಲ್ಲಿ ಬಹುತೇಕರು ಕುಡಿಯುವ ದಕ್ಷಿಣ ಭಾರತದ ಸಾಂಪ್ರದಾಯಿಕ ಫಿಲ್ಟರ್ ಕಾಫಿಯು, ಎಸ್ಪ್ರೆಸೊ ಆಧಾರಿತ ಅಮೆರಿಕಾನೊಗಿಂತ ಹೆಚ್ಚು ಕೆಫಿನ್ ಹೊಂದಿರುತ್ತದೆ. ಇದಕ್ಕೆ ಬಳಸುವ ಚಿಕೋರಿ ಪುಡಿಯು ತೀವ್ರತೆಯನ್ನು ಸ್ವಲ್ಪ ಕಡಿಮೆ ಮಾಡಿದರೂ, ದೀರ್ಘಕಾಲದ ಬ್ರೂಯಿಂಗ್ ಪ್ರಕ್ರಿಯೆಯಿಂದಾಗಿ ಇದು ಪ್ರಬಲವಾದ ಕೆಫಿನ್ ಸಾಂದ್ರತೆಯನ್ನು ಹೊಂದಿರುತ್ತದೆ. ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 400mg ಗಿಂತ ಕಡಿಮೆ ಕೆಫಿನ್ ಸೇವಿಸಬೇಕು.
ಅಲ್ಲದೆ ಫಿಲ್ಟರ್ ಕಾಫಿಯು ಹಾಲಿನ ಅಂಶದಿಂದಾಗಿ ದೀರ್ಘಕಾಲದ ಆಸಿಡ್ ರಿಫ್ಲಕ್ಸ್ (ಆಮ್ಲೀಯತೆ) ಉಂಟುಮಾಡಬಹುದು. ಆದರೆ ತೀವ್ರವಾದ ಎಸ್ಪ್ರೆಸೊ ಶಾಟ್‌ಗಳು ನಮ್ಮ ನರಮಂಡಲ ಮತ್ತು ರಕ್ತಪರಿಚಲನಾ ವ್ಯವಸ್ಥೆಯಲ್ಲಿ ತಕ್ಷಣದ ತಲ್ಲಣವನ್ನು ಸೃಷ್ಟಿಸುತ್ತವೆ ಎಂದು ಡಾ. ರಾವ್ ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯ ನಂತರ ಕಾಫಿ ಕುಡಿಯದಿರುವುದು
ದಿನದ ಒಟ್ಟು ಕೆಫಿನ್ ಸೇವನೆ 400mg ಗಿಂತ ಕಡಿಮೆ ಇರಲಿ
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬೇಡಿ
ಹೆಚ್ಚು ನೀರು ಕುಡಿಯಿರಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ