ಬೆಂಗಳೂರಿನಲ್ಲಿ ಅಪಘಾತದ ನೆಪದಲ್ಲಿ ವ್ಯಕ್ತಿ ಹತ್ಯೆಗೆ ಸಂಚು: ಐವರ ವಿರುದ್ಧ ದಾಖಲಾಯ್ತು ಕೇಸು
ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಅಪಘಾತದ ನೆಪದಲ್ಲಿ ವ್ಯಕ್ತಿಯನ್ನು ಮುಗಿಸಲು ಸಂಚು ರೂಪಿಸಿದ ಘಟನೆಯೊಂದು ನಡೆದಿದೆ. ವೈಯಕ್ತಿಕ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸದ್ಯ ಹೊಲ್ಲೆಗೊಳಗಾದ ವ್ಯಕ್ತಿ ತಂದೆಯಿಂದ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಬೆಂಗಳೂರು, ಜನವರಿ 16: ಬೈಕ್ ಅಪಘಾತದ ನೆಪದಲ್ಲಿ ವ್ಯಕ್ತಿಯನ್ನು ಮುಗಿಸಲು ಸಂಚು ರೂಪಿಸಿದ್ದ (Murder Attempt) ಘಟನೆ ಬೆಂಗಳೂರಿನ (bangaluru) ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇಕಂತಲೇ ಬೈಕ್ಗೆ ಟೆಂಪೊ ಟ್ರಾವೆಲರ್ ಗುದ್ದಿಸಿ ನಂತರ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜನವರಿ 7ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೈಯದ್ ಯಾಸೀನ್ ಹಲ್ಲೆಗೊಳಗಾದ ವ್ಯಕ್ತಿ. ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಗೆ ಸೈಯದ್ ಯಾಸೀನ್ ತಂದೆ ದೂರು ನೀಡಿದ್ದಾರೆ.
ನಡೆದದ್ದೇನು?
ಜನವರಿ 7ರಂದು ಸೈಯದ್ ಯಾಸೀನ್ ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಉದ್ದೇಶಪೂರ್ವಕವಾಗಿ ಬೈಕ್ಗೆ ಟಿಟಿ ಗುದ್ದಿಸಿ ಕೊಲೆಗೆ ಯತ್ನಿಸಲಾಗಿದೆ. ಅಷ್ಟೇ ಅಲ್ಲದೆ ಕೆಳಗೆಬಿದ್ದವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪ ಕೂಡ ಕೇಳಿಬಂದಿದೆ. ಮದುವೆ ನಂತರ ವೈಯಕ್ತಿಕ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಮೊದಲು ದೂರು ದಾಖಲಾಗಿತ್ತು.
ಇದನ್ನೂ ಓದಿ: ಬಾಲಕಿ ಕಣ್ಣೆದುರೇ ತಂದೆಯ ಕೊಲೆ ಪ್ರಕರಣ: ನಿಗೂಢ ಕೊಲೆಯ ಸುಳಿವು ನೀಡಿದ್ದ ಕಾರು! ಕೊನೆಗೂ ಬಲೆಗೆ ಬಿದ್ದ ಹಂತಕರು
ಇನ್ನು ಸೈಯದ್ ಯಾಸೀನ್ಗೆ ಕಾಲಿನ ಮೂಳೆ ಮುರಿದಿದ್ದು, ಹೊಟ್ಟೆ, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ವೈದ್ಯಕೀಯ ವರದಿಯಲ್ಲೂ ಕೊಲೆ ಯತ್ನವಾಗಿದೆ ಎಂಬುದು ದೃಢವಾಗಿದೆ. ಹೀಗಾಗಿ ಆರೋಪಿಗಳು ಒಟ್ಟಾಗಿ ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಐವರ ವಿರುದ್ಧ ದೂರು
ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಗೆ ಸೈಯದ್ ಯಾಸೀನ್ ತಂದೆ ಸೈಯದ್ ಯೂಸುಫ್ರಿಂದ ದೂರು ನೀಡಲಾಗಿದೆ. ಕೆಜಕಶನ್ ಖಾಲಿದ್, ಫರ್ಹಾನ್ ಖಾಲಿದ್, ಉಸ್ಮಾನ್, ಹಾಶಿಮ್, ಸೈಯದ್ ರಾಹಬೆರ್ ವಿರುದ್ಧ ಕೊಲೆ ಯತ್ನ ಆರೋಪದಡಿ ದೂರು ದಾಖಲಾಗಿದೆ.
ಆಟೋಗೆ ಅಪರಿಚಿತ ವಾಹನ ಡಿಕ್ಕಿ: ಪ್ರಯಾಣಿಕ ಸಾವು
ಆಟೋಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನೆಲಮಂಗಲ ತಾಲೂಕಿನ ತಾಳೆಕೆರೆ ಗೇಟ್ ಬಳಿ ನಡೆದಿದೆ. ಗೋವೇನಹಳ್ಳಿ ನಿವಾಸಿ ಹನುಮಂತಪ್ಪ ಮೃತ ಪ್ರಯಾಣಿಕ. ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ವರದಿ: ವಿಕಾಸ್ ಕ್ರೈಂ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
