
ಬೆಂಗಳೂರು, ಮೇ 8: ಬೆಂಗಳೂರಿನಲ್ಲಿ (Bengaluru) ಹಣದ ಆಸೆಗಾಗಿ ಒಂಟಿ ಮಹಿಳೆಯೊಬ್ಬರನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡು ಮಾಡಿ ಕೊಲೆ ಮಾಡಿರುವ ಸಿನಿಮೀಯ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್ 21ರಂದು ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ನಡೆದ ಈ ಘಟನೆಯನ್ನು ಆರಂಭದಲ್ಲಿ ಕೇವಲ ‘ಅಪಘಾತ’ ಎಂದು ಬಿಂಬಿಸಲಾಗಿತ್ತು. ಆದರೆ ಮಹಾಲಕ್ಷ್ಮಿ ಲೇಔಟ್ ಪೊಲೀಸರ ಚುರುಕಿನ ತನಿಖೆಯಿಂದಾಗಿ ಇದು ಸುಲಿಗೆಗಾಗಿ ನಡೆದ ವ್ಯವಸ್ಥಿತ ಕೊಲೆ ಎಂಬುದು ಸಾಬೀತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್ ಮತ್ತು ಯೋಹಾನ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ಚೇತನ್ ಎಂಬಾತ ವಿಜಯಲಕ್ಷ್ಮಿ ಎಂಬುವರ ಪರಿಚಯ ಹೊಂದಿದ್ದ ಹಾಗೂ ಅವರ ಬಳಿ ಸಾಲ ಪಡೆದಿದ್ದ. ಆಕೆಯ ಬಳಿ ಹೆಚ್ಚಿನ ಹಣ ಮತ್ತು ಚಿನ್ನಾಭರಣ ಇದೆ ಎಂದು ತಿಳಿದಿದ್ದ ಚೇತನ್, ಸ್ನೇಹಿತರೊಂದಿಗೆ ಸೇರಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಪ್ಲಾನ್‌ನಂತೆ ಏಪ್ರಿಲ್ 21ರಂದು ವಿಜಯಲಕ್ಷ್ಮಿ ಅವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ರಾಕೇಶ್ ಎಂಬಾತ ಬೈಕ್‌ನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಅಲ್ಲಿಗೆ ಆಟೋದಲ್ಲಿ ಬಂದ ಇತರ ಆರೋಪಿಗಳು ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಸೇರಿಸುವ ನಾಟಕವಾಡಿದ್ದಾರೆ.
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಸೋಗಿನಲ್ಲಿ ಮಂಜುನಾಥ್ ಎಂಬ ಆರೋಪಿ ಆಕೆಯ ಪರ್ಸ್‌ನಲ್ಲಿದ್ದ ಮನೆ ಕೀಲಿಯನ್ನು ಕಳವು ಮಾಡಿದ್ದ. ನೇರವಾಗಿ ವಿಜಯಲಕ್ಷ್ಮಿ ಅವರ ಮನೆಗೆ ತೆರಳಿ ಕಳ್ಳತನಕ್ಕೆ ಯತ್ನಿಸಿದ್ದಾಗ, ಅಕ್ಕಪಕ್ಕದ ಮನೆಯವರು ಪ್ರಶ್ನಿಸಿದ್ದಾರೆ. ಈ ವೇಳೆ ಆಧಾರ್ ಕಾರ್ಡ್ ಬೇಕೆಂದು ಸುಳ್ಳು ಹೇಳಿ ಅಲ್ಲಿಂದ ಪರಾರಿಯಾಗಿದ್ದ. ಇತ್ತ ರಾಕೇಶ್ ಎಂಬ ಆರೋಪಿ ಸಂಚಾರ ಪೊಲೀಸ್ ಠಾಣೆಗೆ ತೆರಳಿ, ‘ಪರಿಚಯಸ್ಥ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ನಾನೇ ಅವರನ್ನು ಕಾಪಾಡಿ ಆಸ್ಪತ್ರೆಗೆ ಸೇರಿಸಿದ್ದೇನೆ’ ಎಂದು ಸುಳ್ಳು ದೂರು ನೀಡಿದ್ದ.
ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆಯ ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಬಗ್ಗೆ ಮನೆ ಮಾಲೀಕರು ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಕೃತ್ಯ ಬಯಲಾಗಿದೆ. ದುರದೃಷ್ಟವಶಾತ್, ಚಿಕಿತ್ಸೆ ಫಲಿಸದೆ ವಿಜಯಲಕ್ಷ್ಮಿ ಅವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ಬೆಂಗಳೂರು ಇಡಿ ಅಧಿಕಾರಿಗಳಿಂದ ದಾಳಿ, ಕೋಟ್ಯಾಂತರ ಮೌಲ್ಯದ ಆಸ್ತಿ ವಶಕ್ಕೆ
ಪ್ರಕರಣದ ಮತ್ತೊಂದು ಟ್ವಿಸ್ಟ್ ಎಂದರೆ, ಬಂಧಿತ ಆರೋಪಿಗಳ ಪೈಕಿ ಮಂಜುನಾಥ್ ಎಂಬಾತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಸದ್ಯ ಪೊಲೀಸರು ಕೊಲೆ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ