ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ; ತನಿಖೆ ವೇಳೆ ಬೊಮ್ಮನಹಳ್ಳಿ ಪೊಲೀಸರ ಕೈಗೆ ಸಿಕ್ತು ಆಡಿಯೋ ಸಾಕ್ಷಿ
ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಗಿರೀಶ್ ಹಾಗೂ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಸುಪಾರಿ ಪಡೆದು ಕೊಲೆ ಮಾಡೋದ್ರ ಬಗ್ಗೆ ಮಾತನಾಡಿರೋ ಆಡಿಯೋ ಪೊಲೀಸರ ಕೈಗೆ ಸಿಕ್ಕಿದೆ.
ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆ(Karnataka Assembly Elections 2023) ಹತ್ತಿರ ಆಗ್ತಿದ್ದಂತೆ ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಎಲೆಕ್ಷನ್ ಕಾವು ಜೋರಾಗ್ತಿದೆ. ಇಂಥಾ ಹೊತ್ತಲ್ಲೇ ಸಿಲಿಕಾನ್ ಸಿಟಿಯೇ ನಡುಗುವಂಥಾ ವಿಚಾರವೊಂದು ಬಯಲಾಗಿದೆ. ಶಾಸಕರ ಹತ್ಯೆಗೆ ಬರೋಬ್ಬರಿ ಎರಡು ಕೋಟಿಗೆ ಸುಪಾರಿ ಕೊಡಲಾಗಿತ್ತು ಅನ್ನೋ ಮಾಹಿತಿ ಹೊರಬಂದಿದೆ. ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ(MLA Satish Reddy) ಕೊಲೆಗೆ ಬರೋಬ್ಬರಿ ಎರಡು ಕೋಟಿ ಹಣ ಕೊಟ್ಟು ಸುಪಾರಿ ನೀಡಲಾಗಿತ್ತು ಅನ್ನೋ ಆರೋಪ ಕೇಳಿ ಬಂದಿದೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಅಪ್ರಾಪ್ತ ಬಾಲಕ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹೆಸರು ಕೇಳಿಬಂದಿದೆ.
ಸುಪಾರಿ ಕೊಟ್ಟವರು ಯಾರು?
ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಗಿರೀಶ್ ಹಾಗೂ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಎಷ್ಟು ಹಣಕ್ಕೆ ಸುಫಾರಿ ಪಡೆದಿದ್ದಾರೆ ಎಂದು ವಿಚಾರಣೆ ನಡೆಸಲಾಗುತ್ತಿದೆ. ಆದ್ರೆ ಆರೋಪಿಗಳು ಇದುವರೆಗೂ ಸುಪಾರಿ ಬಗ್ಗೆ ಏನು ಬಾಯಿ ಬಿಟ್ಟಿಲ್ಲ. ಸದ್ಯ ಆರೋಪಿ ಸುಪಾರಿ ಪಡೆದು ಕೊಲೆ ಮಾಡೋದ್ರ ಬಗ್ಗೆ ಮಾತನಾಡಿರೋ ಆಡಿಯೋ ಪೊಲೀಸರ ಕೈಗೆ ಸಿಕ್ಕಿದೆ. ಸದ್ಯ ಆ ಆಡಿಯೋ ಇಟ್ಟುಕೊಂಡು ವಿಚಾರಣೆ ಮುಂದುವರೆಸಲಾಗಿದೆ. ಪೊಲೀಸರು ಆರೋಪಿಗಳ ಆರು ತಿಂಗಳ ಮೊಬೈಲ್ ಕಾಲ್ ಲಿಸ್ಟ್ ಪಡೆದು ತನಿಖೆ ನಡೆಸುತ್ತಿದ್ದಾರೆ. ಆರು ತಿಂಗಳಿಂದ ಆರೋಪಿಗಳು ಯಾರೆಲ್ಲರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ರು ಅಂತ ಪರಿಶೀಲನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರು ಪೊಲೀಸ್ ವಶಕ್ಕೆ, ರಹಸ್ಯ ಸ್ಥಳದಲ್ಲಿ ವಿಚಾರಣೆ
ತನಿಖೆ ವೇಳೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹೆಸರು ಕೇಳಿಬಂದಿದೆ. ಇನ್ನು ಆರೋಪಿ ಗಿರೀಶ್ ವಿಲ್ಸನ್ ಗಾರ್ಡನ್ ನಾಗನ ಸಹಚರ. ಹೀಗಾಗಿ ವಿಲ್ಸನ್ ಗಾರ್ಡನ್ ನಾಗ ಪಾತ್ರ ಇದೆಯಾ ಅಂತಾನೂ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಟೆಕ್ನಿಕಲ್ ಎವಿಡೆನ್ಸ್ ಮೂಲಕ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಘಟನೆ ಹಿನ್ನೆಲೆ
ಬೊಮ್ಮನಹಳ್ಳಿ ನಿವಾಸಿ ಚಂದ್ರು ಅನ್ನೋರು, ಶಾಸಕ ಸತೀಶ್ ರೆಡ್ಡಿ ಪಿಎ ಹರೀಶ್ ಬಾಬುಗೆ ಕರೆ ಮಾಡಿ, ನನ್ನ ಸ್ನೇಹಿತ ಭೈರೇಶ್ ಕಾಲ್ ಮಾಡಿದ್ದ. ಎಂಎಲ್‌ಎ ಹತ್ಯೆ ಮಾಡಲು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಇಬ್ಬರು ಮಾತನಾಡ್ತಿದ್ದಾರೆ ಅಂತಾ ಹೇಳಿದ. ವಿಷ್ಯವನ್ನ ಗಂಭೀರವಾಗಿ ಪರಿಗಣಿಸಿದಾಗ ಇದ್ರಲ್ಲಿ ರೌಡಿ ಶೀಟರ್ ವಿಲ್ಸನ್‌ಗಾರ್ಡನ್ ನಾಗ ಇರೋದು ಗೊತ್ತಾಗಿತ್ತು. ಆಡಿಯೋವನ್ನೇ ಇಟ್ಟುಕೊಂಡು ಫೆಬ್ರವರಿ 3 ರಂದು ಶಾಸಕರ ಪಿಎ ಕೇಸ್ ದಾಖಲಿಸಿದ್ರು. ತನಿಖೆಗೆ ಇಳಿದ ಪೊಲೀಸರು, ಹೊಳಲ್ಕೆರೆಯ ಉಗಣಕಟ್ಟೆ ಗ್ರಾಮದ ಗಿರೀಶ್ ಹಾಗು ಅಪ್ರಾಪ್ತನನ್ನ ವಶಕ್ಕೆ ಪಡೆದ್ರು. ಇದ್ರಲ್ಲಿ ವಿಲ್ಸನ್ ಗಾರ್ಡನ್ ನಾಗನ ರೋಲ್ ಏನು ಅಂತಾ ಪತ್ತೆ ಮಾಡಲಾಗ್ತಿದೆ. ಶಾಸಕರೇ ಈ ವಿಚಾರ ಹೊರಹಾಕಿದ್ದು, ನಿನ್ನೆಯಷ್ಚೇ ವಿಷ್ಯ ಗೊತ್ತಾಯ್ತು. ಚುನಾವಣೆ ಹತ್ತಿರ ಆಗ್ತಿದ್ದಂತೆ ರಾಜಕೀಯ ಎದುರಾಳಿಗಳು ಹೀಗೆ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:16 am, Thu, 16 February 23