
ಬೆಂಗಳೂರು, ಅ.12: ರಾಜ್ಯದಲ್ಲಿ ಪದೇ ಪದೇ ಸ್ಕ್ಯಾಮ್ ಕೃತ್ಯಗಳ ಬಗ್ಗೆ ವರದಿಯಾಗುತ್ತಿದ್ದರು, ಪೊಲೀಸರು ಇಂತಹ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ರೂ, ಈ ಜನರಿಗೆ ಅರ್ಥವೇ ಆಗುತ್ತಿಲ್ಲ. ಮತ್ತೆ ಮತ್ತೆ ಸ್ಕ್ಯಾಮ್ಗಳಿಗೆ ಬಲಿಯಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಇಂತಹ ಘಟನೆಗಳು ನಡೆಯುತ್ತಿದೆ. ಇನ್ನು ಬೆಂಗಳೂರಿನಲ್ಲಿ ಡಿಜಿಟಲ್ ವಂಚಕರು ಹೆಚ್ಚಾಗಿದ್ದಾರೆ. ಅದರಲ್ಲೂ ಇಂದಿನ ಯುವಕರು ಡೇಟಿಂಗ್ ಆ್ಯಪ್ ಜಾಲಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಈ ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಳ್ಳುವವರನ್ನು ಗುರಿಯಾಗಿಸಿಕೊಂಡು ಹೊಸ ರೀತಿಯ ಬ್ಲ್ಯಾಕ್‌ಮೇಲ್ ದಂಧೆಗಳು ನಡೆಯುತ್ತಿದೆ. ಬೆಂಗಳೂರಿನ ಬೆಳ್ಳಂದೂರು ವಲಯದಲ್ಲಿ ಯುವಕನೊಬ್ಬನಿಗೆ ನಕಲಿ ವೀಡಿಯೋ ತೋರಿಸಿ ಬೆದರಿಸಿ 1.85 ಲಕ್ಷ ರೂ. ಸುಲಿಗೆ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಬೆಳ್ಳಂದೂರಿನ 23 ವರ್ಷದ ಯುವಕನೊಬ್ಬ ಸೆಪ್ಟೆಂಬರ್ 27 ರಂದು ಜನಪ್ರಿಯ ಡೇಟಿಂಗ್ ಆ್ಯಪ್ ಮೂಲಕ ಆರಾಧ್ಯ ಹೆಸರಿನ ಯುವತಿಯೊಬ್ಬಳ ಸಂಪರ್ಕಕ್ಕೆ ಬಂದಿದ್ದನು. ನಂತರ ಇಬ್ಬರೂ ತಮ್ಮ ಮೊಬೈಲ್ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡಿದ್ದರು. ನಂಬರ್ ವಿನಿಮಯವಾದ ಕೆಲವೇ ಕ್ಷಣಗಳಲ್ಲಿ ಆಕೆಯ ನಂಬರ್‌ನಿಂದ ವಾಟ್ಸಾಪ್ ವೀಡಿಯೋ ಕಾಲ್ ಬಂದಿದ್ದು, ಅದು ಕೇವಲ 5 ರಿಂದ 6 ಸೆಕೆಂಡುಗಳಷ್ಟೇ ಇತ್ತು ಎಂದು ಯುವಕ ಪೊಲೀಸರಿಗೆ ತಿಳಿಸಿದ್ದಾನೆ. ಕಾಲ್ ಕಟ್ ಆದ ಕೆಲವೇ ಕ್ಷಣಗಳಲ್ಲಿ ವಂಚಕರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಮಾರ್ಫ್ ಮಾಡಲಾದ ಯುವಕನ ಅಶ್ಲೀಲ ವೀಡಿಯೋವನ್ನು ಆತನಿಗೆ ಕಳುಹಿಸಿದ್ದಾರೆ.
ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ವಂಚಕರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಭಯಗೊಂಡ ಯುವಕ ಸ್ನೇಹಿತರಿಂದ ಸಾಲ ಮಾಡಿ ಸೆಪ್ಟೆಂಬರ್ 27 ರಿಂದ 29 ರ ನಡುವೆ ವಿವಿಧ ಯುಪಿಐ (UPI) ಐಡಿಗಳಿಗೆ ಹಂತ ಹಂತವಾಗಿ ಒಟ್ಟು 1.85 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾನೆ. ನಂತರ ಮೋಸಹೋಗಿರುವುದನ್ನು ಅರಿತ ಯುವಕ ಸೈಬರ್ ಕ್ರೈಮ್‌ಗೆ ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದು, ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಸೆಕ್ಷನ್ 66C, 66D ಹಾಗೂ ಬಿಎನ್‌ಎಸ್ (BNS) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಉತ್ತರ ನಿಗಮದಿಂದ ಮಹತ್ವದ ಹೆಜ್ಜೆ: ಇನ್ಮುಂದೆ ಪ್ರತಿ ಮಂಗಳವಾರ ಕಸದ ಸಮಸ್ಯೆಗೆ ಫೋನ್-ಇನ್ ಕಾರ್ಯಕ್ರಮ!
ಸೈಬರ್ ವಂಚಕರ ಈ ಕೃತ್ಯವು ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿದ್ದು, ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇಂತಹ ಅಪರಾಧಗಳು ಏರಿಕೆಯಾಗುತ್ತಿವೆ. ಇಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರಲ್ಲಿ 20 ಪ್ರಕರಣಗಳು ದಾಖಲಾಗಿದ್ದವು. 2025ರಲ್ಲಿ ಪ್ರಕರಣಗಳ ಸಂಖ್ಯೆ 104 ಕ್ಕೆ ಏರಿಕೆಯಾಗಿತ್ತು. 2026 (ಆಗಸ್ಟ್ ವರೆಗೆ) ಈಗಾಗಲೇ 57 ಪ್ರಕರಣಗಳು ವರದಿಯಾಗಿವೆ. ಆನ್‌ಲೈನ್ ಡೇಟಿಂಗ್ ಅನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ವಾಟ್ಸಾಪ್ ಅಥವಾ ಇತರೆ ಆಪ್‌ಗಳಲ್ಲಿ ಬರುವ ಅರಿವಿಲ್ಲದ ವೀಡಿಯೋ ಕಾಲ್‌ಗಳನ್ನು ಸ್ವೀಕರಿಸುವಾಗ ನಾಗರಿಕರು ಅತ್ಯಂತ ಎಚ್ಚರಿಕೆ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ AI ಮೂಲಕ ದೃಶ್ಯಗಳನ್ನು ಮಾರ್ಫ್ ಮಾಡುವುದು ಅತ್ಯಂತ ಸುಲಭವಾಗಿದ್ದು, ಅನೇಕ ಪ್ರಕರಣಗಳು ಹೊರಬರಲು ಹೆಪರಿರುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ