ಬೆಂಗಳೂರು: ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

ಬೆಂಗಳೂರಿನ ವಿದೇಶಿ ಅಂಚೆ ಕಚೇರಿಗೆ ಅಮೆರಿಕ ಹಾಗೂ ಥಾಯ್ಲೆಂಡ್​​ನಿಂದ ಸ್ನಾಕ್ಸ್ ಬಾಕ್ಸ್ ಮೂಲಕ ಬಂದಿದ್ದ 3 ಕೋಟಿ ರೂ. ಮೌಲ್ಯದ 3 ಕೆಜಿಗೂ ಅಧಿಕ ಹೈಡ್ರೋ ಗಾಂಜಾವನ್ನು ಸಿಸಿಬಿ ಪೊಲೀಸರು ಭರ್ಜರಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ನಿಖರ ಮಾಹಿತಿಯ ಆಧಾರದಲ್ಲಿ ಪೊಲೀಸರು ಶ್ವಾನ ದಳದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ಬೆಂಗಳೂರು: ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!
ಬೆಂಗಳೂರು ಹೈಡ್ರೋ ಗಾಂಜಾ ಜಪ್ತಿ
Image Credit source: tv9
Edited By:

Updated on: May 26, 2026 | 12:29 PM

ಬೆಂಗಳೂರು, ಮೇ 26: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಿದೇಶಿ ಮೂಲದ ಹೈಟೆಕ್ ಮಾದಕ ವಸ್ತುಗಳ ಜಾಲವನ್ನು ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ಮತ್ತೊಮ್ಮೆ ಯಶಸ್ವಿಯಾಗಿ ಭೇದಿಸಿದ್ದಾರೆ. ಅಮೆರಿಕ ಮತ್ತು ಥಾಯ್ಲೆಂಡ್‌ನಿಂದ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್‌ಗೆ (Foreign Post Office) ಪಾರ್ಸೆಲ್ ಮೂಲಕ ಬಂದಿದ್ದ ಭಾರಿ ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾಮಾನ್ಯ ತಿಂಡಿ ತಿನಿಸುಗಳ ‘ಸ್ನಾಕ್ಸ್ ಬಾಕ್ಸ್’ ಒಳಗಡೆ ಅತ್ಯಂತ ಚಾಣಾಕ್ಷತನದಿಂದ ಮುಚ್ಚಿಡಲಾಗಿದ್ದ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು (Hydro Ganja) ಜಪ್ತಿ ಮಾಡಲಾಗಿದೆ.

ಮುಖ್ಯಾಂಶಗಳು

  • ಸ್ನಾಕ್ಸ್ ಬಾಕ್ಸ್‌ನಲ್ಲಿ ಅಡಗಿಸಿಟ್ಟು ಅಮೆರಿಕ ಹಾಗೂ ಥಾಯ್ಲೆಂಡ್​​ನಿಂದ ಕಳುಹಿಸಲಾಗಿದ್ದ ಹೈಟೆಕ್ ಮಾದಕ ವಸ್ತು ಜಪ್ತಿ.
  • ಅಂಚೆ ಕಚೇರಿ ಸಿಬ್ಬಂದಿ ನೀಡಿದ ನಿಖರವಾದ ಅನುಮಾನಾಸ್ಪದ ಮಾಹಿತಿ ಆಧರಿಸಿ ಸಿಸಿಬಿ ನಡೆಸಿದ ಕ್ಷಿಪ್ರ ದಾಳಿ.
  • ಐಷಾರಾಮಿ ಪಾರ್ಟಿ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ವಿದೇಶದಿಂದ ಅಂಚೆ ಮೂಲಕ ಡ್ರಗ್ಸ್ ಸಾಗಾಟ.

ಅಂಚೆ ಇಲಾಖೆಯೇ ಜಾಲದ ಪ್ರಮುಖ ಟಾರ್ಗೆಟ್

ವಿದೇಶಿ ಪೋಸ್ಟ್ ಆಫೀಸ್‌ನಲ್ಲಿದ್ದ ಕೆಲವು ಪಾರ್ಸೆಲ್‌ಗಳ ಮೇಲೆ ಅನುಮಾನ ಗೊಂಡ ಅಂಚೆ ಕಚೇರಿ ಸಿಬ್ಬಂದಿ ತಕ್ಷಣವೇ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಸಿಬಿ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಪಾರ್ಸೆಲ್ ಓಪನ್ ಮಾಡಿದಾಗ ಹೈಡ್ರೋ ಗಾಂಜಾ ಪತ್ತೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಅಂಚೆ ಇಲಾಖೆ ಮತ್ತು ಕಸ್ಟಮ್ಸ್ ಕಣ್ಣು ತಪ್ಪಿಸಿ ಇಂತಹ ಐಷಾರಾಮಿ ಡ್ರಗ್ಸ್ ತರಿಸುವ ಜಾಲ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಈ ಹಿಂದೆ ಕೂಡ ಸಿಸಿಬಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಅಂಚೆ ಕಚೇರಿಗಳ ಮೇಲೆ ಜಂಟಿ ದಾಳಿ ನಡೆಸಿ ನೆದರ್‌ಲ್ಯಾಂಡ್ಸ್, ಯುಎಸ್ ಮತ್ತು ಯುಕೆ ಮೂಲದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ವಿವಿಧ ಐಷಾರಾಮಿ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 34 ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ; 8 ಮಂದಿ ಬಂಧನ

ಅಷ್ಟೇ ಅಲ್ಲದೆ, ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್‌ಗಳನ್ನು ಜಪ್ತಿ ಮಾಡಿ ಪೆಡ್ಲರ್‌ಗಳನ್ನು ಹೆಡೆಮುರಿ ಕಟ್ಟಲಾಗಿತ್ತು. ಸದ್ಯ ಈ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಪಾರ್ಸೆಲ್ ಯಾರ ಹೆಸರಿಗೆ ಬುಕ್ ಆಗಿತ್ತು ಮತ್ತು ಬೆಂಗಳೂರಿನಲ್ಲಿ ಇದರ ಅಂತಿಮ ರಿಸೀವರ್ಸ್ ಯಾರು ಎಂಬ ಜಾಲದ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Tue, 26 May 26

ಪ್ರಜ್ವಲ್​ ಕುಮಾರ್ ಎನ್​ ವೈ
Follow Us