TV9 Kannada News Highlights: ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು: ಕಾಂಗ್ರೆಸ್ ನಾಯಕರ ಸಭೆ ಆರಂಭ
Karnataka News Today Live Updates: ಆಗಸ್ಟ್ 1ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಾಗೂ ವಿವೇಕ ಸ್ಮಾರಕ ಉದ್ಘಾಟನೆ, ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಮಹತ್ವದ ಸಚಿವ ಸಂಪುಟ ವಿಸ್ತರಣೆ ಸಭೆ, ಮತ್ತು ಬಿಹಾರದಲ್ಲಿ ಪ್ರತಿಭಟನಾಕಾರರ ಮೇಲಿನ ಕೇಸ್ ವಾಪಸ್ ಸೇರಿದಂತೆ ಇಂದಿನ ಪ್ರಮುಖ ರಾಜಕೀಯ ಹಾಗೂ ರಾಜ್ಯದ ಲೈವ್ ನ್ಯೂಸ್ ಅಪ್‌ಡೇಟ್‌ಗಳನ್ನು ಇಲ್ಲೇ ವೀಕ್ಷಿಸಿ.

Breaking News Today Live Updates in Kannada: ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿದ್ದು, ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಮತ್ತೊಂದೆಡೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಾವು ಏರಿದ್ದು, 20 ಖಾಲಿ ಸಚಿವ ಸ್ಥಾನಗಳ ಭರ್ತಿಗೆ ಹೈಕಮಾಂಡ್ ಜತೆ ಅಂತಿಮ ಚರ್ಚೆ ನಡೆಸಲು ಸಿಎಂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಈ ನಡುವೆ, ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸಿಜೆಪಿ ನೀಡಿದ್ದ ಎಚ್ಚರಿಕೆಗೆ ಮಣಿದ ಬಿಹಾರ ಸರ್ಕಾರ, ಬಂಧಿತರ ಬಿಡುಗಡೆ ಹಾಗೂ ಎಫ್‌ಐಆರ್‌ಗಳನ್ನು ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಸಂಪುಟ ವಿಸ್ತರಣೆ ಕಸರತ್ತು ಕ್ಲೈಮ್ಯಾಕ್ಸ್ ಹಂತಕ್ಕೆ
ಡಿಕೆ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇಂದು (ಜುಲೈ 28) ರಾತ್ರಿ ನವದೆಹಲಿಯಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಮೊದಲು ಕೆಸಿ ವೇಣುಗೋಪಾಲ್ ಅವರು ರಾಜ್ಯ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.ಬಳಿಕ ಸಿದ್ದರಾಮಯ್ಯ, ಹರಿಪ್ರಸಾದ್, ಡಿಕೆ ಶಿವಕುಮಾರ್ ಅವರನ್ನು ಒಟ್ಟಿಗೆ ಕೂಡಿಸಿಕೊಂಡು ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಆದ್ರೆ, ಅಂತಿಮ ಮಾತುಕತೆ ನಾಳೆ (ಜುಲೈ29) ರಾಹುಲ್ ಗಾಂಧಿ ಜೊತೆ ನಡೆಯಲಿದೆ. ಹೌದು…ನಾಳೆ ಮಧ್ಯಾಹ್ನ 1.30ಕ್ಕೆ ದೆಹಲಿಯ 10 ಜನಪತ್ನ ರಾಹುಲ್ ನಿವಾಸದಲ್ಲಿ ಸಭೆ ನಡೆಯಲಿದ್ದು, ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ ಜೊತೆ ರಾಹುಲ್ ಮಾತುಕತೆ ನಡೆಸ ಪಟ್ಟಿ ಅಂತಿಮಗೊಳಿಸಲಿದ್ದಾರೆ.
-
ರಾಜ್ಯ ನಾಯಕರ ಜೊತೆ ಕೆ ಸಿ ವೇಣುಗೋಪಾಲ ಗಂಭೀರ ಚರ್ಚೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಸಭೆ ನಡೆದಿದ್ದು, ಮೊದಲು ರಾಜ್ಯ ನಾಯಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಬಳಿಕ ಎಲ್ಲಾ ನಾಯಕರು ಒಟ್ಟಾಗಿ ಸಭೆ ನಡೆಸಿದ್ದಾರೆ. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಬಿ ಕೆ ಹರಿಪ್ರಾದ್ ಹಾಗೂ ಸುರ್ಜೇವಾಲ ಹಾಗೂ ಕೆಸಿ ವೇಣುಗೋಪಾಲ್ ಗಂಭೀರ ಮಾತುಕತೆ ನಡೆಸಿದ್ದಾರೆ.
-
-
ಜುಲೈ 30ರಂದು ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ
ಸಚಿವ ಸಂಪುಟ ವಿಸ್ತರಣೆ ಕಸರತ್ತು ದೆಹಲಿಯಲ್ಲಿ ನಡೆದಿದ್ದು, ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ರಾಜ್ಯ ನಾಕರೊಂದಿಗೆ ಹೈಕಮಾಂಡ್ ಸುದೀರ್ಘ ಚರ್ಚೆ ನಡೆಸಿದೆ. ಇನ್ನೊಂದೆಡೆ ಜುಲೈ 30 ರಂದು ಮಧ್ಯಾಹ್ನ 5 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ರಾಜಭವನಕ್ಕೆ ಮೌಖಿಕವಾಗಿ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
-
ಕಾವೇರಿ ನೀರು ಪ್ರಾಧಿಕಾರದ ವಿರುದ್ಧ ಕರವೇ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನದಿ ಬಿಡುಗಡೆ ಮಾಡುವಂತೆ ಆದೇಶದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶಗೊಂಡಿದ್ದು, ನಾಳೆ (ಜುಲೈ 29) ಬೆಳಿಗ್ಗೆ 11 ಗಂಟೆಗೆ ಶಿವರಾಮೇಗೌಡ ಬಣ ಪ್ರತಿಭಟನೆಗೆ ಕರೆ ನೀಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಖಂಡಿಸಿ ಕರವೇ ನಾಳೆ ಬೆಂಗಳೂರಿನ ಮಲ್ಲೇಶ್ವರಂನ ಮಹಾಕವಿ ಕುವೆಂಪು ಪ್ರತಿಮೆ ಬಳಿ ವಿನೂತನ ಪ್ರತಿಭಟನೆ ಮಾಡಲಿದೆ.
-
ಹರಿಪ್ರಸಾದ್ ಜೊತೆ ಸಭೆ ನಡೆಸಿದ ವೇಣುಗೋಪಾಲ್
ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ರಾಜ್ಯ ನಾಯಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಅದರಂತೆ ಕೆಪಿಸಿಸಿ ಹರಿಪ್ರಸಾದ್ ಜೊತೆ ವೇಣುಗೋಪಾಲ, ಸುಮಾರು 30 ನಿಮಿಷಗಳ ಚರ್ಚೆ ಮಾಡಿದ್ದು, ಈ ವೇಳೆ ಹರಿಪ್ರಸಾದ್ ಅವರು ತಾವು ಸಿದ್ಧಪಡಿಸಿದ್ದ ಪಟ್ಟಿಯನ್ನು ನೀಡಿದ್ದಾರೆ.
-
-
ಸಂಪುಟ ವಿಸ್ತರಣೆ: ರಾಜ್ಯ ಕಾಂಗ್ರೆಸ್ ನಾಯಕರ ಹೈಕಮಾಂಡ್ ಸಭೆ
ಸಿಎಂ ಡಿಕೆ ಶಿವಕುಮಾರ್ ಸರ್ಕಾರದ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದ್ದು, ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ಕೆ ಸಿ ವೇಣುಗೋಪಾಲ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆಯಲಾಗಿದ್ದು, ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗಮಿಸಿದ್ದಾರೆ. ಎಲ್ಲಾ ನಾಯಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಲು ಹೈಕಮಾಂಡ್ ನಾಯಕರು ತೀರ್ಮಾನಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಜೊತೆಗೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ.
-
ಮಹಾರಾಷ್ಟ್ರದ ನಾಸಿಕ್ & ಪಾಲ್ಘರ್ ಜಿಲ್ಲೆಯಲ್ಲಿ ಭೂಕಂಪನ
ಮಹಾರಾಷ್ಟ್ರದ ನಾಸಿಕ್ ಹಾಗೂ ಪಾಲ್ಘರ್ ಜಿಲ್ಲೆಯಲ್ಲಿ ಭೂಕಂಪವಾಗಿರುವ ಅನುಭವಾಗಿದೆ. ನಾಸಿಕ್ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಭೂಕಂಪನವಾಗಿದ್ದರೆ, ಪಾಲ್ಘರ್ ಜಿಲ್ಲೆಯಲ್ಲಿಯೂ 2 ಬಾರಿ ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ.
-
ಜೈಲಿನಿಂದ ಬಿಡುಗಡೆಯಾದ ತೇಜ್ಪ್ರತಾಪ್ ಯಾದವ್
ನೀಟ್ ವಿರುದ್ಧ ಪ್ರತಿಭಟನೆ ವೇಳೆ ಅರೆಸ್ಟ್ ಆಗಿದ್ದ ಮಾಜಿ ಸಿಎಂ ಲಾಲು ಪ್ರಸಾದ್ರ ಪುತ್ರ ತೇಜ್ಪ್ರತಾಪ್ ಅವರನ್ನು ಬಿಡುಗಡೆ ಮಾಡಲಾಗಿದೆ. ಬಿಹಾರ ರಾಜಧಾನಿ ಪಾಟ್ನಾದಲ್ಲಿ ನೀಟ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ವೇಳೆ ತೇಜ್ಪ್ರತಾಪ್ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ 2 ದಿನಗಳ ನಂತರ ಜೈಲಿನಿಂದ ತೇಜ್ಪ್ರತಾಪ್ ಅವರನ್ನ ಬಿಡುಗಡೆ ಮಾಡಲಾಗಿದೆ.
-
ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ
ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ಫಿಕ್ಸ್ ಆಗಿದೆ. ಇದೇ ಆಗಸ್ಟ್ 13ರಿಂದ ಆಗಸ್ಟ್ 27ರವರೆಗೆ 10 ದಿನಗಳ ಕಾಲ ಮಳೆಗಾಲದ ಅಧಿವೇಶನ ನಡೆಯಲಿದೆ.
-
ಕಾವೇರಿ ನೀರು ಬಿಡಲು ಆದೇಶ, ಭುಗಿಲೆದ್ದ ಆಕ್ರೋಶ
ಕರ್ನಾಟಕದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಇಂದು (ಜುಲೈ 28) ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. 15 ದಿನಗಳ ಕಾಲ ನಿತ್ಯ 3500 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದ್ದು, ಇದು ಕನ್ನಡಗರ ಆಕ್ರೋಕ್ಕೆ ಕಾರಣವಾಗಿದೆ. ಮಂಡ್ಯದಲ್ಲಿ ರೈತರು ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕನ್ನಡಪರ ಸಂಘಟನೆಗಳು ಸಹ ಸಿಡಿದೆದ್ದಿದ್ದು, ಹೋರಾಟದ ಎಚ್ಚರಿಕೆ ನೀಡಿವೆ.
-
ಮೈಸೂರಿನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದ ಸಿದ್ದರಾಮಯ್ಯ
ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ನಿನ್ನೆ (ಜುಲೈ 27) ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಜುಲೈ 28) ಅಲ್ಲಿಂದ ನೇರವಾಗಿ ಮೈಸೂರಿಗೆ ಬಂದಿದ್ದರು. ಹಿರಿಮಗ ರಾಕೇಶ್ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದರು. ಆದ್ರೆ, ಇಂದು (ಜುಲೈ 28) ದೆಹಲಿಯಲ್ಲಿ ಸಚಿವ ಸಂಪುಟ ಸಂಬಂಧ ಹೈಕಮಾಂಡ್ ನಾಯಕರ ಜತೆ ಸಭೆ ಇದೆ. ಹೀಗಾಗಿ ಸಿದ್ದರಾಮಯ್ಯನವರು ವಾಪಸ್ ಮತ್ತೆ ಮೈಸೂರಿನಿಂದ ದೆಹಲಿಗೆ ತೆರಳಿದ್ದಾರೆ.
-
ಸಿದ್ದರಬೆಟ್ಟದಲ್ಲಿ ಮದ್ಯಪಾರ್ಟಿ: 6 ಮಂದಿ PDOಗಳಿಗೆ ಶೋಕಾಸ್ ನೋಟೀಸ್!
ಸರ್ಕಾರಿ ಕೆಲಸದ ಅವಧಿಯಲ್ಲೇ ಸಿದ್ದರಬೆಟ್ಟದಲ್ಲಿ ಮದ್ಯ ಸೇವಿಸಿ ಮೋಜು-ಮಸ್ತಿ ಮಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರು ಮಂದಿ ಪಿಡಿಓಗಳಿಗೆ (PDO) ಜಿಲ್ಲಾ ಪಂಚಾಯತ್ ಸಿಇಒ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
-
ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ ಅವರಿಗೆ ನುಡಿನಮನ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ ಅವರಿಗೆ ಹಾಸನದ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ನಗರದ ಕಲಾಭವನದಲ್ಲಿ ಭಾವಪೂರ್ಣ ನುಡಿನಮನ ಹಾಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜುಲೈ 18 ರಂದು ಅಗಲಿದ ಅವರ ಭಾವಚಿತ್ರಕ್ಕೆ ವಿವಿಧ ಮಠಾಧೀಶರು, ಜೆಡಿಎಸ್ ಶಾಸಕರಾದ ಎ. ಮಂಜು, ಸ್ವರೂಪ್ ಪ್ರಕಾಶ್, ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
-
ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಿ ಮೋದಿಗೆ ನಟ, ರಾಜಕಾರಣಿ ವಿಜಯ್ ಪತ್ರ!
ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದೆಂದು ತಮಿಳುನಾಡಿನ ‘ಟಿವಿ ಕೆ’ ಪಕ್ಷದ ಮುಖ್ಯಸ್ಥ ಜೋಸೆಫ್ ವಿಜಯ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕೆಳಪಾತ್ರದ ರಾಜ್ಯದ ಒಪ್ಪಿಗೆಯಿಲ್ಲದೆ ಯೋಜನೆ ನಡೆಸುವುದು ಸುಪ್ರೀಂ ತೀರ್ಪಿನ ಉಲ್ಲಂಘನೆಯಾಗಿದ್ದು, ಪ್ರಧಾನಿ ತಕ್ಷಣವೇ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಮತ್ತಷ್ಟು ಓದಿ
-
ಬೆಳಗಾವಿ: ಕಾಂಗ್ರೆಸ್ ಕಚೇರಿಯಲ್ಲಿ ಕಾದಾಟ, ಮಹಾನಗರ ಅಧ್ಯಕ್ಷರ ಆಯ್ಕೆಗೆ ಸಭೆಯಲ್ಲಿ ಗದ್ದಲ!
ಬೆಳಗಾವಿ ಮಹಾನಗರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಗದ್ದಲ ಉಂಟಾಗಿದೆ. ಪಾಲಿಕೆ ಸದಸ್ಯ ಅಜಿಮ್ ಪಟವೇಗಾರ್ ಹಾಗೂ ಫಯಿಮ್ ನಾಯಿಕವಾಡಿ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಶಾಸಕ ಆಸೀಫ್ ಸೇಠ್ ಮಧ್ಯಪ್ರವೇಶಿಸಿ ವಾತಾವರಣ ಶಮನಗೊಳಿಸಿದರು.
-
ಕಾವೇರಿ ವಿವಾದ: 14 ವರ್ಷಗಳ ಬಳಿಕ ಮತ್ತೆ ರಾಜ್ಯಗಳ ಮಾತುಕತೆ?
ಕಾವೇರಿ ವಿಚಾರವಾಗಿ 14 ವರ್ಷಗಳ ಬಳಿಕ ಕರ್ನಾಟಕ-ತಮಿಳುನಾಡು ನಡುವೆ ಮತ್ತೆ ಮಾತುಕತೆ ಸಾಧ್ಯತೆಯಿದೆ. 2012ರಲ್ಲಿ ಸುಪ್ರೀಂ ಸೂಚನೆಯಂತೆ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಹಾಗೂ ತಮಿಳುನಾಡಿನ ಜಯಲಲಿತಾ ಭೇಟಿಯಾಗಿದ್ದರು. ಆದರೆ, 30 ಟಿಎಂಸಿ ನೀರು ಹರಿಸುವ ಜಯಲಲಿತಾ ಬೇಡಿಕೆಯನ್ನು ಶೆಟ್ಟರ್ ತಿರಸ್ಕರಿಸಿದ್ದರಿಂದ ಅಂದು ಸಭೆ ವಿಫಲವಾಗಿತ್ತು.
-
ಚಿಕ್ಕಬಳ್ಳಾಪುರ: ಹೆಣ್ಣು ಭ್ರೂಣ ಪತ್ತೆ ಜಾಲದ ಮೇಲೆ ದಾಳಿ
ಚಿಕ್ಕಬಳ್ಳಾಪುರದ ಚಿಂತಾಮಣಿಯ ಸುಮಾ ನರ್ಸಿಂಗ್ ಹೋಮ್ ಮೇಲೆ ಬೆಂಗಳೂರಿನ PCPNDT ತಂಡ ದಾಳಿ ನಡೆಸಿ, ಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಹಿಡಿದಿದೆ. ಸ್ಥಳೀಯ ಅಧಿಕಾರಿಗಳ ಶಾಮೀಲಾತಿ ಶಂಕೆಯಿಂದ ಡಾ. ಶೋಭಾ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ.
-
ನೀಟ್ ಅಕ್ರಮ ಚರ್ಚೆಗೆ ಪಟ್ಟು: ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ
ನೀಟ್ ಪರೀಕ್ಷೆ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಭಾರಿ ಕೋಲಾಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ, ರಾಜ್ಯಸಭೆಯ ಕಲಾಪವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿ ಸಭಾಪತಿಗಳು ಆದೇಶಿಸಿದ್ದಾರೆ.
-
ಹೈಕೋರ್ಟ್ ನಿರ್ಧಾರ: ಮತದಾರರ ಪಟ್ಟಿ ಕುರಿತ ಅರ್ಜಿಇತ್ಯರ್ಥ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಅವಧಿ ವಿಸ್ತರಿಸಲು ಕೋರಿ ದೇವನೂರು ಮಹದೇವ, ರಾಮಚಂದ್ರ ಗುಹಾ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಅಗತ್ಯ ಬಿದ್ದರೆ ಅವಧಿ ವಿಸ್ತರಿಸುವುದಾಗಿ ಆಯೋಗ ತಿಳಿಸಿದೆ. ಸುಪ್ರೀಂಕೋರ್ಟ್‌ನಲ್ಲೂ ಈ ವಿಷಯ ಪರಿಗಣನೆಯಲ್ಲಿರುವುದರಿಂದ ಹೈಕೋರ್ಟ್ ಮಧ್ಯಪ್ರವೇಶ ಅನಗತ್ಯವೆಂದು ಸ್ಪಷ್ಟಪಡಿಸಿದೆ.
-
ಕಾಮನ್ವೆಲ್ತ್ ಗೇಮ್ಸ್: ಕಂಚಿನ ಪದಕ ಗೆದ್ದ ಕನ್ನಡತಿ ಶಿಲ್ಪಾ
ಕಾಮನ್ವೆಲ್ತ್ ಗೇಮ್ಸ್‌ನ ಪ್ಯಾರಾ ಶಾಟ್‌ಪುಟ್‌ನಲ್ಲಿ ಮೈಸೂರಿನ ಕೆ.ಆರ್.ನಗರದ ನಿವಾಸಿ ಕೆ.ಎಸ್.ಶಿಲ್ಪಾ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. “ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಕುಟುಂಬದ ಬೆಂಬಲ, ಕೋಚ್‌ಗಳ ಮಾರ್ಗದರ್ಶನ ಹಾಗೂ ಕಠಿಣ ಪರಿಶ್ರಮದಿಂದ ಈ ಸಫಲತೆ ಸಾಧ್ಯವಾಗಿದೆ” ಎಂದು ಟಿವಿ9ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ವೀಡಿಯೋ ನೋಡಿ
-
ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು
ದಾವಣಗೆರೆಯ ಬಂಬೂಬಜಾರ್ ರಸ್ತೆಯಲ್ಲಿ ಸಿಮೆಂಟ್ ಟ್ರಾಕ್ಟರ್ ಪಕ್ಕ ಹೋಗುತ್ತಿದ್ದ ಬೈಕ್ ಸವಾರ ಮಂಜುನಾಥ್ ಕಡಕೋಳ್ (55) ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ದುರಂತ ಸಾವು ಸಂಭವಿಸಿದೆ. ಮೃತರು ಸರಸ್ವತಿ ನಗರದ ನಿವಾಸಿಯಾಗಿದ್ದು, ಎಪಿಎಂಸಿಯಲ್ಲಿ ಹಮಾಲಿಯಾಗಿದ್ದರು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರ್‌ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಮದುವೆ ಮನೆಗಳಲ್ಲಿ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳ ಆಸಿಫ್ ಬಂಧನ
ಮದುವೆ ಮನೆಗಳನ್ನು ಟಾರ್ಗೆಟ್ ಮಾಡಿ ಮಾಸ್ಟರ್ ಕೀ ಬಳಸಿ ಚಿನ್ನಾಭರಣ ದೋಚುತ್ತಿದ್ದ ಆಸಿಫ್ ಎಂಬಾತನನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ೩೪೦ ಗ್ರಾಂ ಚಿನ್ನ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದ್ದು, ಈತನ ಬಂಧನದಿಂದ ಈ ಹಿಂದೆ ನಡೆದಿದ್ದ ೪ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
-
ಮನೆಗಳ್ಳ ‘ಕರಾಟೆ ಶ್ರೀನಿವಾಸ್’ ಸೇರಿ ಮೂವರ ಬಂಧನ
ಬೆಂಗಳೂರಿನ ಆವಲಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಒಂಟಿ ಮನೆಗಳನ್ನು ರೆಕ್ಕಿ ಮಾಡಿ ಕಳ್ಳತನ ಮಾಡುತ್ತಿದ್ದ ‘ಕರಾಟೆ ಶ್ರೀನಿವಾಸ್’ ಹಾಗೂ ಕದ್ದ ಚಿನ್ನ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಯಶವಂತಪುರ ನಿವಾಸಿಗಳಾದ ಬಂಧಿತರಿಂದ 50 ಲಕ್ಷಕ್ಕೂ ಹೆಚ್ಚು ಮೌಲ್ಯದ 475 ಗ್ರಾಂ ಚಿನ್ನ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
-
ವಿಜಯೇಂದ್ರ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ
ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಧರಣಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಗವಹಿಸಿ ಯುವಕರ ಬೇಡಿಕೆಗೆ ಬೆಂಬಲ ಸೂಚಿಸಿದರು.
-
ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಬಲೆಗೆ; 4.8 ಕೆಜಿ ಗಾಂಜಾ ವಶ!
ತುಮಕೂರಿನ ಚಿಕ್ಕಪೇಟೆ ನಿವಾಸಿ ಸುಹಾಸ್ ಮಲ್ಲ (23) ಎಂಬಾತನನ್ನು ಎನ್‌ಇಪಿಎಸ್ ಪೊಲೀಸರು ಬಂಧಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ನಂತರ ಗಾಂಜಾ ಚಟಕ್ಕೆ ಬಿದ್ದು ಹೊರರಾಜ್ಯದಿಂದ ತಂದು ಮಾರಾಟ ಮಾಡುತ್ತಿದ್ದ ಈತನಿಂದ 4.8 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 2022 ರಲ್ಲೂ ಬಂಧನಕ್ಕೊಳಗಾಗಿದ್ದ ಈತ ಜೈಲಿನಿಂದ ಬಂದ ಮೇಲೆಯೂ ಕೃತ್ಯ ಮುಂದುವರಿಸಿದ್ದ.
-
ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ: ಒಂದೇ ವಾರದಲ್ಲಿ 4 ಮಿಲಿಯನ್ ಫಾಲೋವರ್ಸ್ ಹೆಚ್ಚಳ!
ಪ್ರಧಾನಿ ನರೇಂದ್ರ ಮೋದಿ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 105 ಮಿಲಿಯನ್ ಗಡಿ ದಾಟಿದೆ. ನೀಟ್ ಅಕ್ರಮ ವಿರುದ್ಧದ ಸಿಜೆಪಿ ಧರಣಿ ಹಾಗೂ ‘ಝೆನ್‌ಜಿ’ ಯುವಕರನ್ನು ಉದ್ದೇಶಿಸಿ ಮೋದಿ ಬಿಡುಗಡೆ ಮಾಡಿದ್ದ ವಿಡಿಯೋ ಹೇಳಿಕೆ ಭಾರಿ ವೈರಲ್ ಆಗಿದ್ದು, ಒಂದೇ ವಾರದಲ್ಲಿ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ. ಮತ್ತಷ್ಟು ಓದಿ
-
ಜಮ್ಮು-ಕಾಶ್ಮೀರ: ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಬಸ್; 39 ಅಮರನಾಥ ಯಾತ್ರಿಕರಿಗೆ ಗಾಯ!
ಜಮ್ಮು-ಕಾಶ್ಮೀರದ ಗಂಡೇರ್‌ಬಾಲ್‌ನ ಹರಿಗನ್ವಾನ್‌ನಲ್ಲಿ ಅಮರನಾಥ ಗುಹಾ ದೇಗುಲದಿಂದ ಹಿಂತಿರುಗುತ್ತಿದ್ದ ಯಾತ್ರಿಕರಿದ್ದ ಬಸ್ ತಿರುವು ದಾಟುವಾಗ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದಿದೆ. ಘಟನೆಯಲ್ಲಿ 39 ಯಾತ್ರಿಕರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಅಪಘಾತದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ.
-
ವಿಪಕ್ಷಗಳ ನಡವಳಿಕೆ ವಿರೋಧಿಸಿ ಸಂಸತ್ ಭವನದ ಮಕರದ್ವಾರದ ಬಳಿ NDA ಸಂಸದರ ಪ್ರತಿಭಟನೆ!
ಸಂಸತ್ ಭವನದ ಮಕರದ್ವಾರದ ಬಳಿ ಎನ್‌ಡಿಎ ಸಂಸದರು ಧರಣಿ ಪ್ರತಿಭಟನೆ ನಡೆಸಿದರು. ಪರೀಕ್ಷಾ ಅಕ್ರಮ ತಡೆ ವಿಧೇಯಕದ ಕುರಿತು ಮಹತ್ವದ ಚರ್ಚೆಗೆ ವಿರೋಧ ಪಕ್ಷಗಳು ಅವಕಾಶ ನೀಡದೆ ಅಡ್ಡಿಪಡಿಸುತ್ತಿರುವ ವರ್ತನೆಯನ್ನು ವಿರೋಧಿಸಿ ಆಡಳಿತ ಪಕ್ಷದ ಸಂಸದರು ಆಕ್ರೋಶ ವ್ಯಕ್ತಪಡಿಸಿದರು.
-
ಹುಳಿಮಾವು ಗ್ರಾಮದಲ್ಲಿ ಚಿರತೆ ದಾಳಿ, ಹಸು ಬಲಿ; ಬೋನು ಇರಿಸಿದ ಅರಣ್ಯ ಇಲಾಖೆ!
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮಾದಪ್ಪ ಎಂಬುವರ ಹಸುವಿನ ಮೇಲೆ ದಾಳಿ ನಡೆಸಿದೆ. ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಎದುರಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನು ಅಳವಡಿಸಿದ್ದಾರೆ.
-
ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ; ಆಸ್ಪತ್ರೆ ಎದುರು ಸಂಬಂಧಿಕರ ಆಕ್ರೋಶ!
ಹಾಸನದ ಮಂಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂಕೇನಹಳ್ಳಿಯ ನಾರಾಯಣ್ ಎಂಬುವರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಡಿಸ್ಚಾರ್ಜ್ ಮಾಡುವುದಾಗಿ ಹೇಳಿ, ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿ, ಡಾ. ರವಿ ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ಆರೋಪಿಸಿ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
-
ದೆಹಲಿಯಲ್ಲಿ ಇಂದು CWRC ಸಭೆ: ತಮಿಳುನಾಡಿಗೆ ತಕ್ಕ ತಿರುಗೇಟು ನೀಡಲು ಕರ್ನಾಟಕ ಸಿದ್ಧ!
ಕಾವೇರಿ ನೀರಿಗಾಗಿ ದೆಹಲಿಯಲ್ಲಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹತ್ವದ ಸಭೆ ನಡೆಯಲಿದೆ. ಜೂನ್-ಜುಲೈ ಪಾಲಿನ ನೀರಿಗೆ ತಮಿಳುನಾಡು ಪಟ್ಟು ಹಿಡಿದಿದ್ದರೆ, ಮಳೆ ಅಭಾವ ಮತ್ತು ಕೆಆರ್‌ಎಸ್‌ನಲ್ಲಿ ಕುಡಿಯುವ ನೀರಿಗಷ್ಟೇ ಸಂಗ್ರಹವಿರುವುದನ್ನು ವಿವರಿಸಿ, ನೀರು ಹರಿಸಲು ಸಾಧ್ಯವಿಲ್ಲವೆಂದು ಕರ್ನಾಟಕ ಸರ್ಕಾರ ತನ್ನ ಖಡಕ್ ವಾದ ಮಂಡಿಸಲಿದೆ.
Published On - Jul 28,2026 9:13 AM




