ಶಿವಶಂಕರ್ ಮೇಲೆ ಗುಂಡಿನ ದಾಳಿ ಪ್ರಕರಣ: ಸ್ಫೋಟಕ ಮಾಹಿತಿ ಬಹಿರಂಗ
ಬೆಂಗಳೂರಿನಲ್ಲಿ ಮದನಪಲ್ಲಿ ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ, ಆರೋಪಿಗಳಿಗೆ ಕೊಲೆ ಸುಪಾರಿ ನೀಡಿರುವುದು ತಿಳಿದುಬಂದಿದೆ.
ಬೆಂಗಳೂರು: ನಗರದಲ್ಲಿ ಆಂಧ್ರ ಪ್ರದೇಶದ (Andra Pradesh) ಮದನಪಲ್ಲಿ ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ (Fire attack case) ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಸ್ಫೋಟಕ ಮಾಹಿತಿಯೊಂದು ತಿಳಿದುಬಂದಿದೆ. ಮೂರು ಕೊಲೆಗಳನ್ನು ಮಾಡಿದ್ದ ಹಾಗೂ ಒಂದು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಶಿವಶಂಕರ್ ರೆಡ್ಡಿ (Shivashankar Reddy)ಯ ಕೊಲೆಗೆ ಸುಪಾರಿ ನೀಡಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಕೊಲೆ ನಡೆಸಲು ಖರ್ಚಿಗೆ ಮಾತ್ರ ಹಣ ಕೊಟ್ಟಿದ್ದು, ಕೆಲಸ ಆದ ಬಳಿಕ ಉಳಿದ ಹಣ ನೀಡುವುದಾಗಿ ಸುಪಾರಿ ನೀಡಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟಿದ್ದಾರೆ. ಆದರೆ ಎಷ್ಟು ಹಣಕ್ಕೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಗಳು ಬಾಯಿಬಿಟ್ಟಿಲ್ಲ.
ಶಿವಶಂಕರ್ ರೆಡ್ಡಿ ಅಪ್ರಾಪ್ತನಾಗಿದ್ದಾಗಲೇ ವೈಶಮ್ಯಗಳನ್ನು ಬೆಳೆಸಿಕೊಂಡಿದ್ದನು. ಅದರಂತೆ 2011ರ ದ್ವೇಷಕ್ಕೆ ಸಂಬಂಧಿಸಿದಂತೆ ಭೈಯ್ಯಾರೆಡ್ಡಿ ಸಂಬಂಧಿಕನೊಬ್ಬನಿಂದ ಕೊಲೆಗೆ ಸುಫಾರಿ ನೀಡಿದ್ದಾನೆ. ಸದ್ಯ ಸದ್ಯ ಸುಫಾರಿ ಕೊಟ್ಟ ವ್ಯಕ್ತಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಗಳ ಬಂಧನಕ್ಕೆ ರಚಿಸಿದ್ದ ಮೂರು ವಿಶೇಷ ತಂಗಳಿಂದಲೇ ಸುಪಾರಿ ಕೊಟ್ಟ ಆರೋಪಿಯ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇದನ್ನೂ ಓದಿ: ಆಂಧ್ರದ ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ಪ್ರಕರಣ: ಮೂವರು ಅರೆಸ್ಟ್
ಆರೋಪಿಗಳಿಗೆ ಪಿಸ್ತೂಲ್ ಎಲ್ಲಿಂದ ಬಂತು?
ಬಂಧಿತ ಮೂವರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಬಳಿ ಪಿಸ್ತೂಲ್ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪಿಸ್ತೂಲ್ ಲಭ್ಯವಾದ ಮೂಲದ ಬಗ್ಗೆ ಆರೋಪಿಗಳು ಬಾಯಿ ಬಿಡುತ್ತಿಲ್ಲ. ಅಲ್ಲದೆ, ಬಂಧಿತ ಮೂವರ ಹಿನ್ನಲೆಯನ್ನು ಪ್ರಕಾಶಂ ಜಿಲ್ಲಾ ಪೊಲೀಸರಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಫೈರಿಂಗ್ ವೇಳೆ ಗಾಬರಿಗೊಂಡ ಆರೋಪಿಗಳು
ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿಗೆ ಸಜ್ಜಾಗಿದ್ದ ಆರೋಪಿಗಳು ದಾಳಿ ನಡೆಸುವಾಗ ಗಾಬರಿಗೊಂಡಿದ್ದಾರೆ. ಹೀಗಾಗಿ ಗುಂಡು ಸರಿಯಾಗಿ ಹೊಡೆಯಲಾಗದೆ ಗುರಿ ತಪ್ಪಿದೆ. ಸುಪಾರಿ ಕೊಟ್ಟವರು ಡೀಲ್ ಯಾವುದೇ ಕಾರಣಕ್ಕೂ ತಪ್ಪಬಾರದು ಎಂದು ಸೂಚಿಸಿದ್ದು, ಮೊದಲ ಬುಲೆಟ್ ಎದೆಗೆ ಬೀಳಬೇಕು ಅಂತ ಹೇಳಿದ್ದರು. ಗುಂಡುಗಳು ಗುರಿ ತಪ್ಪಿದ ಮಾಹಿತಿ ತಿಳಿದ ಕೂಡಲೇ ಸುಪಾರಿ ಕೊಟ್ಟವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.
ಹಲವು ಬಾರಿ ಕರೆ ಮಾಡಿದರೂ ಸುಪಾರಿ ಕೊಟ್ಟವರ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಮುಂದೇನು ಮಾಡುವುದು ಅಂತ ಆರೋಪಿಗಳು ಯೋಚಿಸುತ್ತಿದ್ದರು. ಇನ್ನೊಂದೆಡೆ ಸುಪಾರಿ ನೀಡಿದ ವ್ಯಕ್ತಿ ಖರ್ಚಿಗೆಂದು ಕೊಟ್ಟ ಹಣ ಕೂಡ ಖಾಲಿಯಾಗಿತ್ತು. ಹೀಗಾಗಿ ತಲೆಮರೆಸಿಕೊಳ್ಳಲು ಹಣ ಇಲ್ಲದೆ ತಮ್ಮ ಊರುಗಳಿಗೆ ವಾಪಸ್ ತೆರಳಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸುಲ್ತಾನ್ ಜ್ಯುವೆಲರಿ ಶಾಪ್ನಲ್ಲಿ ನೈತಿಕ ಪೊಲೀಸ್ಗಿರಿ ನಡೆಸಿದ ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ
ಏನಿದು ಪ್ರಕರಣ?
ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಶಿವಶಂಕರ್ ರೆಡ್ಡಿ, ಜೈಲಿನಿಂದ ಹೊರಬಂದ ನಂತರ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ. ತನನ್ನು ವಿರೋಧಿ ಗ್ಯಾಂಗ್ ಕೊಲೆ ಮಾಡುವ ಭಯದಿಂದ ಮದನಪಲ್ಲಿಗೆ ಹೆಚ್ಚು ತೆರಳದೆ ಬೆಂಗಳೂರಿನ ಕೆ.ಆರ್.ಪುರದಲ್ಲಿ ನೆಲೆಸಿದ್ದ. ಈತನನ್ನು ಮುಗಿಸಲೆಂದೇ ಆಂಧ್ರದಿಂದ ಬೆಂಗಳೂರಿಗೆ ಬಂದ ಆರೋಪಿಗಳು, ಕೆ.ಆರ್ ಪುರದಲ್ಲಿದ್ದ ಶಿವಶಂಕರ್ ರೆಡ್ಡಿ ಮತ್ತು ಆತನ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿತ್ತು. ಸದ್ಯ ಶಿವಶಂಕರ್ ರೆಡ್ಡಿ ಆತನ ಕಾರು ಚಾಲಕ ಪಾಣಪ್ರಾಯದಿಂದ ಪಾರಾಗಿದ್ದಾರೆ. ಮೂವರನ್ನು ಬಂಧಿಸಿದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ