
ಬೆಂಗಳೂರು, ಮಾರ್ಚ್ 13: ಸುಮಾರು 350 ಮಕ್ಕಳು ವ್ಯಾಸಂಗ ಮಾಡುತ್ತಿರುವ ಈಸ್ಟ್ ವೆಸ್ಟ್ ಅಕಾಡೆಮಿ ಶಾಲೆಯನ್ನ (East West Academy school) ಮುಚ್ಚುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ತೀವ್ರ ಆರ್ಥಿಕ ಸಂಕಷ್ಟವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಹೀಗಾಗಿ ಮಕ್ಕಳ ಭವಿಷ್ಯವೇ ಅತಂತ್ರವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೋಷಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ರಾಜಾಜಿನಗರ ಮಾರುತಿ ಎಕ್ಸ್ಟೆನ್ಷನ್ನಲ್ಲಿರುವ 58 ವರ್ಷಗಳ ಇತಿಹಾಸವಿರುವ ಈಸ್ಟ್ ವೆಸ್ಟ್ ಅಕಾಡೆಮಿ ಶಾಲೆಗೆ ಇಂದು ಪೋಷಕರು ದೌಡಾಯಿಸಿದ್ದರು. ಏಕೆಂದರೆ ಶಾಲೆಯನ್ನೇ ಬಂದ್ ಮಾಡುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿರುವುದೇ ಇದಕ್ಕೆ ಕಾರಣ. ಹೀಗಾಗಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ 350ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿರುವ ಹಿನ್ನೆಲೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Karnataka Budget 2026: ಉರ್ದು ಶಾಲೆಗಳ ಅಭಿವೃದ್ಧಿಗೆ 400 ರೂ. ಕೋಟಿ ಅನುದಾನ ಘೋಷಣೆ ಮಾಡಿದ ಸಿಎಂ ಸಿದ್ಧರಾಮಯ್ಯ
ಇನ್ನು ಶಾಲೆಯು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ನಿರ್ವಹಣೆ ಕಷ್ಟವಾಗಿದೆ ಎಂದು ಹೇಳುತ್ತಿರುವ ಆಡಳಿತ ಮಂಡಳಿ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಈ ಶೈಕ್ಷಣಿಕ ವರ್ಷಗಳ ಪರೀಕ್ಷೆಗಳು ಮುಗಿದ ಬಳಿಕ ಮಕ್ಕಳನ್ನ ಬೇರೆ ಶಾಲೆಗೆ ದಾಖಲು ಮಾಡಿ ಅಂತಾ ಪೋಷಕರಿಗೆ ಸೂಚನೆ ನೀಡಿದ್ದಾರೆ. ಆದರೆ ಪೋಷಕರು ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಫೀಸ್ ಸ್ವಲ್ಪ ಹೆಚ್ಚಿಗೆ ಮಾಡಿ, ಇನ್ನೊಂದು ವರ್ಷ ಶಾಲೆ ನಡೆಸಿ ಅಂತಾ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: Karnataka Budget 2026: ಸರ್ಕಾರಿ ಕಾಲೇಜುಗಳಲ್ಲಿ 2,000 ಬೋಧಕ ಸಿಬ್ಬಂದಿ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದ ಸಿಎಂ
ಇನ್ನು ಈ ಬಗ್ಗೆ ಸ್ಥಳೀಯ ಶಿಕ್ಷಣಾಧಿಕಾರಿ ಕೂಡ ಗಮನ ವಹಿಸದೇ ನಿರ್ಲಕ್ಷ್ಯ ತೋರಿದ್ದಾರಂತೆ. ಮ್ಯಾನೇಜ್ಮೆಂಟ್ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪೋಷಕರು ಕಿಡಿಕಾರಿದ್ದು, ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.