AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ದರೋಡೆ: ಚಾಕು ಇರಿದಾಗ ಸತ್ತಂತೆ ನಾಟಕವಾಡಿ ಪ್ರಾಣ ಉಳಿಸಿಕೊಂಡ ಬೆಂಗಳೂರಿನ ವೃದ್ಧೆ!

ಇದು ಸಿನಿಮಾ ಶೈಲಿಯಲ್ಲಿ ನಡೆದಿದ್ದ ಮನೆ ದರೋಡೆ.ಕೆಲಸ ಮಾಡುತ್ತಿದ್ದ ಮನೆಯಲ್ಲೇ ವೃದ್ದೆಗೆ ಚಾಕುವಿನಿಂದ ಇರಿದು ಲಕ್ಷಗಟ್ಟಲೆ ಹಣ ದರೋಡೆ ಮಾಡಲಾಗಿತ್ತು. ಇದೀಗ ಕೊನೆಗೂ ಆರೋಪಿಗಳು ಪೊಲೀಸ್ರಿಗೆ ಸಿಕ್ಕಿಬಿದ್ದಿದ್ದಾರೆ. ಇನ್ನು ಚಾಕುವಿನಿಂದ ಇರಿದಾಗ ಚಾಲಾಕಿ ವೃದ್ಧೆ ಸತ್ತಂತೆ ನಾಟಕವಾಡಿ ಪ್ರಾಣ ಉಳಿಸಿಕೊಂಡಿದ್ದಾಳೆ. ಮನೆಯಲ್ಲಿ ಸಭ್ಯಸ್ಥನಂತೆ ವರ್ತಿಸಿ ನಂಬಿಕಸ್ಥನಂತಿದ್ದ ಡ್ರೈವರ್ ಹಣ ಎಗರಿಸಿದ ರೋಚಕ ಸ್ಟೋರಿ ಇಲ್ಲಿದೆ ನೋಡಿ.

ಮನೆ ದರೋಡೆ: ಚಾಕು ಇರಿದಾಗ ಸತ್ತಂತೆ ನಾಟಕವಾಡಿ ಪ್ರಾಣ ಉಳಿಸಿಕೊಂಡ ಬೆಂಗಳೂರಿನ ವೃದ್ಧೆ!
ಸಿಕ್ಕಿಬಿದ್ದ ಆರೋಪಿಗಳು
ರಮೇಶ್ ಬಿ. ಜವಳಗೇರಾ
|

Updated on: Oct 22, 2025 | 7:51 AM

Share

ಬೆಂಗಳೂರು (ಅಕ್ಟೋಬರ್ 22): ವೃದ್ಧೆಗೆ ಚಾಕುವಿನಿಂದ ಹಿರಿದು ಮನೆ ದರೋಡೆ (house Robbery) ಮಾಡಿದ್ದ ಗ್ಯಾಂಗ್​ ಅನ್ನು ಬನಶಂಕರಿ ಪೊಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ (Bengaluru) ಬನಶಂಕರಿ ಮೂರನೇ ಹಂತದ ಸಿಂಡಿಕೇಟ್ ಬ್ಯಾಂಕ್ ಕಾಲೋನಿಯಲ್ಲಿ ಸೆಪ್ಟೆಂಬರ್ 14 ನಡೆದಿದ್ದ ಈ ದರೋಡೆ ಪ್ರಕರಣ ಈಗ ನಗರದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಚಾಕುವಿನಿಂದ ಇರಿತಕ್ಕೊಳಗಾದರೂ ಧೈರ್ಯ ತೋರಿದ ವೃದ್ಧೆ ಕನಕಪುಷ್ಪಮ್ಮ ಸತ್ತಂತೆ ನಟಿಸಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈ ಘಟನೆಯ ಬಳಿಕ ಬನಶಂಕರಿ ಪೊಲೀಸರು, ಕಾರ್ಯಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬನಸಂಕರಿ ಠಾಣಾ ವ್ಯಾಪ್ತಿಯ ಬ್ಯಾಂಕ್ ಕಾಲೋನಿಯಲ್ಲಿ ವೃದ್ದೆಗೆ ಕತ್ತಿನ ಬಳಿ ಚಾಕು ಇರಿದು ಎಂಟು ಲಕ್ಷ ಹಣ ,ಜಮೀನಿನ ದಾಖಲೆಯನ್ನ ದರೋಡೆ ಮಾಡಲಾಗಿತ್ತು. ಇದೀಗ ಬನಶಂಕರಿ ಪೊಲೀಸ್ರು ಪ್ರಮುಖ ಆರೋಪಿ ಮಡಿವಾಳ ಅಲಿಯಾಸ್ ಮ್ಯಾಡಿ ಸೇರಿ ಆರೋಪಿ ವಿಠಲ್, ಮತ್ತು ಗಣೇಶ್ ಎಂಬಾತನನ್ನ ಬಂಧಿಸಿದ್ದಾರೆ. ಇನ್ನು ಮನೆ ಮಾಲೀಕ ರಾಹುಲ್ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮ್ಯಾಡಿ ಎಂಬಾತನೇ ಪ್ರಮುಖ ಆರೋಪಿಯಾಗಿದ್ದಾನೆ.

ಇದನ್ನೂ  ಓದಿ: ದೀಪಾವಳಿ ಪಟಾಕಿಯಿಂದ ಅವಾಂತರ: ಬೆಂಗಳೂರಿನಲ್ಲಿ 90ಕ್ಕೂ ಜನರ ಕಣ್ಣಿಗೆ ಹಾನಿ, ಗಾಳಿ ಗುಣಮಟ್ಟ ಕುಸಿತ

ಬನಶಂಕರಿಯ ನಿವಾಸಿ ಕನಕಪುಷ್ಪಮ್ಮ (ವಯಸ್ಸು 65) ತಮ್ಮ ಮಗ ರಾಹುಲ್ ಜೊತೆ ವಾಸಿಸುತ್ತಿದ್ದರು. ರಾಹುಲ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಮನೆ ಕೆಲಸ ಮತ್ತು ವಾಹನ ಚಲಾಯಿಸುವುದಕ್ಕೆ ಮ್ಯಾಡಿ ನನ್ನು ಚಾಲಕನನ್ನಾಗಿ ನೇಮಿಸಿಕೊಂಡಿದ್ದರು. ಸುಮಾರು ನಾಲ್ಕು ತಿಂಗಳು ಕೆಲಸ ಮಾಡಿದ ಬಳಿಕ, ಮ್ಯಾಡಿ ಕೆಲಸ ಬಿಟ್ಟ. ಆದರೆ ಮನೆಯನ್ನು ದೋಚುವುದು ಆತನ ಪ್ಲಾನ್ ಆಗಿತ್ತು. ಹೀಗಾಗಿ ಅನ್ನ ಹಾಕಿದ ಕನ್ನ ಹಾಕಲು ಮುಂದಾದ ಮನೆಗೆ ನುಗ್ಗಿ ಹಣ ದೋಚುವ ಪ್ಲಾನ್ ರೂಪಿಸಿದ್ದ.

ಉಂಡ ಮನೆಗೆ ಕನ್ನ ಹಾಕಿದ ಖದೀಮ

ಸ್ಟೈಲಿಶ್ ಲೈಫ್ ಲೀಡ್ ಮಾಡಲು ಮ್ಯಾಡಿ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದ. ಆದ್ರೆ ಮನೆ ಮಾಲೀಕರ ಬಳಿ ಅತ್ಯಂತ ಸಭ್ಯಸ್ಥನಂತೆ ವರ್ತಿಸಿ ನಂಬಿಕೆ ಬರುವಂತೆ ಇದ್ದ. ಕೇವಲ ಮೂರ್ನಾಲ್ಕು ತಿಂಗಳು ಕೆಲಸ ಮಾಡಿದ್ದು, ಆ ಬಳಿಕ ಆರೋಪಿಯ ವರ್ತನೆ ನೋಡಿ ಮಾಲೀಕ ಕೆಲಸದಿಂದ ತೆಗೆದು ಹಾಕಿದ್ದ. ನಂತರ ಸೆಪ್ಟೆಂಬರ್ 14 ರಾತ್ರಿ 9.30 ರ ಸಮಯದಲ್ಲಿ ಮನೆಯಲ್ಲಿ ಮಾಲೀಕ ಇಲ್ಲದನ್ನ ನೋಡಿ, ಜೊಮೋಟೋ ಬಾಯ್ ಅಂತ ಹೇಳಿದ್ದಾನೆ. ಆಗ ರಾಹುಲ್ ತಾಯಿ ಕನಕಪುಷ್ಪಮ್ಮ, ಯಾರಿಲ್ಲ ಅಂದಿದ್ದಾರೆ. ಅದಕ್ಕೆ ರಾಹುಲ್ ಅವರು ಬುಕ್ ಮಾಡಿದ್ದಾರೆ ಎಂದಿದ್ದಾನೆ. ಈ ವೇಳೆ ಡೋರ್ ತೆಗೆಯುತ್ತಿದ್ದಂತೆ ನೇರವಾಗಿ ಒಳಗೆ ಬಂದ ಗ್ಯಾಂಗ್, ಅಜ್ಜಿ ಬಾಯಿಗೆ ಬಟ್ಟೆ ತುರುಕಿ ಲಾಕರ್ ಕೀ ಕೇಳಿದ್ದಾರೆ. ಇಲ್ಲ ಅಂತಿದ್ದಂತೆ ಚಾಕು ಇರಿದ ಆರೋಪಿ ಗಣೇಶ್ ಕೊಲೆ ಬೆದರಿಕೆ ಹಾಕಿದ್ದಾನೆ.

ಸತ್ತಂತೆ ನಾಟಕವಾಡಿ ಬದುಕುಳಿದ ವೃದ್ದೆ

ಲಾಕರ್ ಕೀ ಕೊಡದಿದ್ರೆ ಸುಮ್ನೆ ಬಿಡಲ್ಲ ಅಂದು ಗಣೇಶ್, ಕನಕಪುಷ್ಪ ಮೇಲೆ ದಾಳಿ ಮಾಡಿ ಎರಡು ಬಾರಿ ಕುತ್ತಿಗೆಗೆ ಚಾಕುವಿನಿಂದ ಕೊಯ್ದಿದ್ದ. ಬಳಿಕ ಮಡಿವಾಳ ಗಣೇಶ್ ಗೆ ಮತ್ತೊಮ್ಮೆ ಚಾಕು ಇರಿಯಲು ಹೇಳಿದ್ದಾನೆ. ಆಗ ಕೊಲೆ ಮಾಡುತ್ತಾರೆ ಎಂಬ ಭಯದಿಂದ ರಕ್ತಸ್ರಾವದಲ್ಲಿದ್ದ ಅಜ್ಜಿ, ಸತ್ತಂತ ನಟಿಸಿದ್ದಾಳೆ . ಆ ಬಳಿಕ ಅಜ್ಜಿ ಬಿಟ್ಟು ರೂಮ್ ಒಳಗೆ ಹೋದ ಗ್ಯಾಂಗ್, ರಾಡ್ ನಿಂದ ಲಾಕರ್ ಹೊಡೆದು ಎಂಟು ಲಕ್ಷ ನಗದು ಹಾಗೂ ಆಸ್ತಿ ದಾಖಲೆಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ.

ಆಗ ನಿಧಾನವಾಗಿ ಎದ್ದ ಅಜ್ಜಿ ಕಳ್ಳ ಕಳ್ಳ ಎಂದು ಹೊರಗಡೆ ಬಂದು ಕಿರುಚಾಡಿದ್ದಾಳೆ. ಅಷ್ಟರಲ್ಲೇ ಆರೋಪಿಗಳು ಓಡಿದ್ದಾರೆ. ಆದ್ರೆ ಆರೋಪಿ ಗಣೇಶ್ ಮಾತ್ರ ಸ್ಥಳೀಯರ ಕೈಗೆ ಸಿಕ್ಕಿಬಿದ್ದಾನೆ. ಬಳಿಕ ಸ್ಥಳೀಯರು ಬನಶಂಕರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಮ್ಯಾಡಿ ಮತ್ತು ವಿಠಲ್ ನನ್ನ ಬಂಧಿಸಿದ್ದು,ಗುರು ಎಂಬಾತನನ್ನು ಹುಡುಕಾಟ ನಡೆಸಲಾಗ್ತಿದೆ,

ಸದ್ಯ ಗಾಯಗೊಂಡಿರುವ ವೃದ್ಧೆ ಕನಕಪುಷ್ಪಮ್ಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ವಾಪಸ್ ಆಗಿದ್ದಾರೆ. ಆರೋಪಿಗಳನ್ನ‌ ಕಸ್ಟಡಿಗೆ ಪಡೆದ ಪೊಲೀಸ್ರು, ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಪರ್ಟಿ ಮಾರಿದ ಹಣ ಮನೆಯಲ್ಲಿದೆ ಎಂದು ಪ್ಲಾನ್ ಮಾಡಿ ಹಣ ಎಗರಿಸಲು ಸ್ಕೆಚ್ ಹಾಕಿದ್ದಾಗಿ ವಿಚಾರಣೆಯಲ್ಲಿ ಗೊತ್ತಾಗಿದೆ.