ಬೆಂಗಳೂರಿನಲ್ಲಿ ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಯುಬಿ ಸಿಟಿಯಲ್ಲಿ ಕಾರ್ಯಚರಣೆ

Food department raids: ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ನಿರಂತರ ದಾಳಿ ನಡೆಸುತ್ತಿದ್ದಾರೆ. ಇಂದು ಕೂಡ ದಾಳಿ ಮುಂದುವರೆದಿದ್ದು, ಆಯುಕ್ತ ಶ್ರೀನಿವಾಸ್ ನೇತೃತ್ವದಲ್ಲಿ ನಗರದ ಹಲವೆಡೆ ಏಕಕಾಲಕ್ಕೆ ದಾಳಿ ಮಾಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲಿಸಿದರು.

ಬೆಂಗಳೂರಿನಲ್ಲಿ ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಯುಬಿ ಸಿಟಿಯಲ್ಲಿ ಕಾರ್ಯಚರಣೆ
ಆಹಾರ ಇಲಾಖೆ ಅಧಿಕಾರಿಗಳ ದಾಳಿ
Image Credit source: tv9 kannada
Edited By:

Updated on: Aug 09, 2026 | 10:01 PM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ದಾಳಿ
  • ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಅಧಿಕಾರಿಗಳಿಂದ ತಪಾಸಣೆ
  • ವೀಕೆಂಡ್​ನಲ್ಲೂ ಮೆಗಾ ಆಪರೇಷನ್!

ಬೆಂಗಳೂರು, ಆಗಸ್ಟ್​​ 09: ರಾಜಧಾನಿ ಬೆಂಗಳೂರಿನಲ್ಲಿ (Bangaluru) ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಮೆಗಾ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ವೀಕೆಂಡ್ ಹಿನ್ನೆಲೆ ಐಷಾರಾಮಿ ಹೋಟೆಲ್‌ಗಳು, ಸ್ಟಾರ್ ಹೋಟೆಲ್‌ಗಳು ಹಾಗೂ ಪ್ರಸಿದ್ಧ ಮಾಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಜನರಿಗೆ ಉತ್ತಮ ಆಹಾರ ನೀಡುತ್ತಿದ್ದಾರೆ ಎಂದು ಪರಿಶೀಲನೆ ಮಾಡಿದರು.

ಬೆಂಗಳೂರಿನಲ್ಲಿ 5 ಸ್ಟಾರ್ ಹೋಟೆಲ್​​ಗಳ ಮೇಲೆ ದಾಳಿ

ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ನಗರದ ಐಷಾರಾಮಿ ಹೋಟೆಲ್‌ಗಳ ವಿರುದ್ಧ ಸಮರ ಸಾರಿದ್ದಾರೆ. 3 ಸ್ಟಾರ್‌, 5 ಸ್ಟಾರ್‌, 7 ಸ್ಟಾರ್ ಅಂತಾ ಹೋಟೆಲ್‌ಗಳ ಕಿಚನ್​ ಜಾಲಾಡುತ್ತಿದ್ದಾರೆ. ಇಂದು ಕೂಡ ದಾಳಿ ಮುಂದುವರೆದಿದೆ. ಸ್ಕೈ ಯುಬಿ ಸಿಟಿ, ರಾಯಲ್ ಚೈನ್ ಹೋಟೆಲ್, ಮದ್ರಾಸ್ ಕಿಚನ್, ಟೆಸ್ಕಾನ್ ಹೋಟೆಲ್ ಹಾಗೂ ಸೆನ್ಚೆಜ್ ಹೋಟೆಲ್​ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ವೀಕೆಂಡ್​ನಲ್ಲೂ ಮೆಗಾ ಆಪರೇಷನ್

ವೀಕೆಂಡ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹೋಟೆಲ್‌ಗಳಿಗೆ ಭೇಟಿ ನೀಡುವ ಕಾರಣ, ಅವರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆಹಾರ ಪೂರೈಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್​​​ ನೇತೃತ್ವದಲ್ಲಿ ರಾತ್ರಿ ಹೊತ್ತಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವೇಳೆ ಯುಬಿ ಸಿಟಿ, ಬ್ರಿಗೇಡ್ ರೋಡ್ ಹಾಗೂ ಎಂ.ಜಿ. ರೋಡ್‌ನಲ್ಲಿರುವ ಪ್ರಮುಖ ಹೋಟೆಲ್‌ಗಳ ಮೇಲೆ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದರು.

45 ಕೆಜಿ ಕೊಳೆತ ಮಾಂಸ ಪತ್ತೆ: ಆಹಾರ ಸುರಕ್ಷಿತ ಇಲಾಖೆ ಆಯುಕ್ತ ಶ್ರೀನಿವಾಸ್ ಹೇಳಿದ್ದಿಷ್ಟು

ಇನ್ನು ದಾಳಿ ವೇಳೆ ಯುಬಿ ಸಿಟಿಯಲ್ಲಿ 45 ಕೆಜಿ ಕೊಳೆತ ಮಾಂಸ, ಬಳಕೆಗೆ ಯೋಗ್ಯವಲ್ಲದ 15 ಲೀಟರ್ ಅಡುಗೆ ಎಣ್ಣೆ ಪತ್ತೆ ಆಗಿದೆ. ಈ ಕುರಿತಾಗಿ ಬೆಂಗಳೂರಿನಲ್ಲಿ ಆಹಾರ ಸುರಕ್ಷಿತ ಇಲಾಖೆ ಆಯುಕ್ತ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು, ‘ಮೂರು ಕಡೆ ಚಿಕನ್‌, ಮಟನ್‌, ಮೀನು ಸರಿಯಾಗಿ ಫ್ರೀಜ್‌ ಮಾಡಿರಲಿಲ್ಲ. ರಾಯಲ್ ಚೈನ್‌ ಹೋಟೆಲ್‌ನಲ್ಲಿದ್ದ 50 ಕೆಜಿ ನಾನ್‌ವೆಜ್ ಹಾಗೂ ಟಸ್ಕಾನ್‌ನಲ್ಲಿ ತರಕಾರಿ, ಕೆಲವು ಕಡೆ ಡ್ರೈಫ್ರೂಟ್ ಡೇಟ್ ಎಕ್ಸ‌ಪೈರಿಯಾಗಿದೆ. ಡೀಪ್ ಫ್ರೀಜರ್‌ನಲ್ಲಿ ಚಿಕನ್, ಮಟನ್ 1 ವರ್ಷದವರೆಗೂ ಇಡಬಹುದು. ಫಿಶ್ 1 ತಿಂಗಳು ಮಾತ್ರ ಇಡಬಹುದು, ಆದರೆ ಹೆಚ್ಚಿನ ಸಮಯ ಇಟ್ಟಿದ್ದಾರೆ. ಕೆಲವು ಕಡೆ ಡೇಟ್ ಚೇಂಜ್ ಮಾಡಿ ಸ್ಟಿಕರ್ ಪ್ಯಾಕೆಟ್‌ ಮೇಲೆ ಅಂಟಿಸಿದ್ದಾರೆ. ಅವರಿಗೆಲ್ಲಾ ನೋಟಿಸ್ ಕೊಟ್ಟಿದ್ದೇವೆ, 10-15 ಸ್ಯಾಂಪಲ್ಸ್ ಸಂಗ್ರಹಿಸಿದ್ದೇವೆ. ಹೋಟೆಲ್ ನಡೆಸುವವರಿಗೆ ರೂಲ್ಸ್‌ಗಳ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲ. ಕೂಡಲೇ ಅಡ್ವೈಸರಿ ಬಿಡುಗಡೆ ಮಾಡುತ್ತೇವೆ’ ಎಂದರು.

ಇದನ್ನೂ ಓದಿ: ಪಂಚತಾರಾ ಹೋಟೆಲ್ ಸ್ಥಿತಿ ಬಯಲು ಮಾಡಿದ್ದೇವೆ: ತಿನ್ನೋದು ಬಿಡೋದು ಜನರಿಗೆ ಬಿಟ್ಟಿದ್ದು ಎಂದ ಸಚಿವ

‘ನಾವು ಹೋಟೆಲ್‌ಗಳಿಗೆ 5 ಲಕ್ಷದವರೆಗೂ ದಂಡ ಹಾಕಬಹುದು. ನಿನ್ನೆಯವರೆಗೂ 59 ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ. 30 ಜನರಿಗೆ ನೋಟಿಸ್ ನೀಡಲಾಗಿದೆ, 65 ಸ್ಯಾಂಪಲ್ಸ್‌ FSLಗೆ ಕಳಿಸಲಾಗಿದೆ. ಯುಬಿ ಸಿಟಿ ಆಹಾರದ ಬಗ್ಗೆ ನಿನ್ನೆ ನಮಗೆ ಮಾಹಿತಿ ಬಂದಿತ್ತು. ಇಂದು ನೈಟ್ ಪಾರ್ಟಿ ಜೊತೆ ಹೆಚ್ಚಿನ ಜನರ ನಿರೀಕ್ಷೆ ಇತ್ತು, ಹೀಗಾಗಿ 10 ಪಬ್ ಮತ್ತು ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ್ದೀವಿ. 4 ಪಬ್, ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಲ್ಯಾಬ್‌ಗಳಲ್ಲಿ ಟೆಸ್ಟಿಂಗ್ ಕೊಡಲಾಗುತ್ತೆ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಮ್ ವಶ ಪಡಿಸಿಕೊಡಿದ್ದೇವೆ. ಟಸ್ಕಾನ್‌ನಲ್ಲಿ 3 ಬಾಟಲ್‌ ರಮ್ ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ ಎಂದ ಸಚಿವ ಯು.ಟಿ.ಖಾದರ್

ಇನ್ನು ಬೆಂಗಳೂರಿನ ಹೋಟೆಲ್​ಗಳ ಮೇಲೆ ಆರೋಗ್ಯ ಇಲಾಖೆ ದಾಳಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ‘ತಪಾಸಣೆ ನಮ್ಮ ಜವಾಬ್ದಾರಿ, ಅದು ಮುಂದುವರಿಯುತ್ತದೆ. ಬಹಳಷ್ಟು ಕಡೆ ದಾಳಿ ಮಾಡಿ ಸ್ಯಾಂಪಲ್ಸ್ ಪಡೆಯಲಾಗಿದೆ. ಯಾವುದೇ ಪ್ರದೇಶಕ್ಕೆ ಈ ದಾಳಿಯನ್ನು ಸೀಮಿತ ಮಾಡಲ್ಲ’ ಎಂದರು.

‘ಕಿಡ್ನಿ ಸಮಸ್ಯೆ, ಕ್ಯಾನ್ಸರ್​ನಂತಹ ಪ್ರಕರಣಗಳೆಲ್ಲವೂ ಬರ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಷ್ಟೇ ಉದ್ದೇಶವಲ್ಲ. ಪಂಚತಾರಾ ಹೋಟೆಲ್​ಗಳು ಸರಿಪಡಿಸಿಕೊಂಡು ಹೋಗಬೇಕು. ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:09 pm, Sun, 9 August 26

Loading...
Unable to load recommendations.
Follow Us