ಬೆಂಗಳೂರಿನ ಆಚಾರ್ಯ ಸಂಸ್ಥೆಯಲ್ಲಿ ಓಪನ್ ಆಯ್ತು ಮೊದಲ ‘ಜೆನ್ ಝೀ’ ಅಂಚೆ ಕಚೇರಿ!
ಇಮೇಲ್ ಯುಗದಲ್ಲಿ ಯುವಜನತೆಯನ್ನು ಆಕರ್ಷಿಸಲು ಇಂಡಿಯಾ ಪೋಸ್ಟ್ ಬೆಂಗಳೂರಿನ ಕಾಲೇಜುಗಳಲ್ಲಿ 'ಜೆನ್ ಝೀ' ಅಂಚೆ ಕಚೇರಿಗಳನ್ನು ಪ್ರಾರಂಭಿಸುತ್ತಿದೆ. ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಮೊದಲ ಕಚೇರಿ ಉದ್ಘಾಟನೆಯಾಗಿದ್ದು, ವಿದ್ಯಾರ್ಥಿಗಳಿಂದ ಅಲಂಕರಿಸಲ್ಪಟ್ಟಿದೆ. ಆಧುನಿಕ ಸೌಲಭ್ಯಗಳಾದ ವೈಫೈ, ಎಸಿ ಮತ್ತು ಕಾಫಿ ಯಂತ್ರಗಳ ಸೌಲಭ್ಯ ನೀಡುವುದಲ್ಲದೇ ವಿದ್ಯಾರ್ಥಿಗಳಿಗೆ ಅಂಚೆ ಸೇವೆಗಳನ್ನು ಕಲಿಯಲು ಮತ್ತು ಅರೆಕಾಲಿಕ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿದೆ.

ಬೆಂಗಳೂರು, ಡಿಸೆಂಬರ್ 17: ಇಮೇಲ್, ವಾಟ್ಸಾಪ್ ಹಾಗೂ ಎಸ್‌ಎಂಎಸ್‌ಗಳ ಯುಗದಲ್ಲಿ ಯುವಜನತೆಯನ್ನು ಆಕರ್ಷಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ ಬೆಂಗಳೂರಿನಲ್ಲಿ ‘ಜೆನ್ ಝೀ’ (Gen Z) ಅಂಚೆ ಕಚೇರಿಗಳನ್ನು ಆರಂಭಿಸಲು ಮುಂದಾಗಿದೆ. ಮೊದಲ ಹಂತದಲ್ಲಿ (Bengaluru) ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೀತಂ ವಿಶ್ವವಿದ್ಯಾಲಯ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಆವರಣಗಳಲ್ಲಿ ಈ ವಿಶೇಷ ಅಂಚೆ ಕಚೇರಿಗಳನ್ನು ಸ್ಥಾಪಿಸಲಾಗುತ್ತದೆ.
ವಿದ್ಯಾರ್ಥಿಗಳ ಬರಹಗಳ ಮೂಲಕ ಅಲಂಕರಿಸಲಾದ ಕಚೇರಿ
ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಮೊದಲ ‘ಜೆನ್ ಝೀ’ ಅಂಚೆ ಕಚೇರಿಯನ್ನು ಇಂದು (ಡಿ.17) ಉದ್ಘಾಟಿಸಲಾಗುತ್ತಿದೆ. ಇದನ್ನು ಅಧಿಕೃತವಾಗಿ ‘ಜೆನ್ ಝೀ ಅಂಚೆ ಕಚೇರಿ, ಅಚಿತ್ ನಗರ, ಬೆಂಗಳೂರು – 560107’ ಎಂದು ಕರೆಯಲಾಗಿದೆ. ಈ ಅಂಚೆ ಕಚೇರಿಯನ್ನು ಸೃಜನಾತ್ಮಕವಾಗಿ ವಿನ್ಯಾಸಗೊಳಿಸಲಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳೇ ಬರಹಗಳ ಮೂಲಕ ಅಲಂಕರಿಸಿದ್ದಾರೆ. ಇಂದಿನ ಕಾಲದಲ್ಲಿ ಕಣ್ಮರೆಯಾಗುತ್ತಿರುವ ಅಂಚೆ ಸೇವೆಗಳನ್ನು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಕ್ಯಾಂಪಸ್ ಸಮುದಾಯಕ್ಕೆ ಇನ್ನಷ್ಟು ಸಮೀಪಕ್ಕೆ ತರುವುದೇ ಈ ಯೋಜನೆಯ ಉದ್ದೇಶ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಸಹಾಯಕ ಅಧೀಕ್ಷಕ ಹರ್ಷ ಎಂ.ಆರ್ ತಿಳಿಸಿದ್ದಾರೆ.
ಬೆಂಗಳೂರಿನ ಇತರ ವಿಭಾಗಗಳಲ್ಲೂ ಜೆನ್ ಝೀ ಪೋಸ್ಟ್ ಆಫೀಸ್
ಜೆನ್ ಝೀ ಅಂಚೆ ಕಚೇರಿಯಲ್ಲಿ ಎರಡು ವಿಭಾಗಗಳಿದ್ದು, ಒಂದರಲ್ಲಿ ವಿದ್ಯಾರ್ಥಿಗಳು ಅಂಚೆ ಇಲಾಖೆಯ ಸಿಬ್ಬಂದಿಯೊಂದಿಗೆ ಕೆಲಸ ಮಾಡಿ ಸೇವೆಗಳು ಮತ್ತು ಯೋಜನೆಗಳ ಬಗ್ಗೆ ತಿಳಿದುಕೊಳ್ಳಬಹುದು. ಮತ್ತೊಂದರಲ್ಲಿ ಪಾರ್ಟ್ಟೈಮ್ ಕೆಲಸ ಮಾಡುವ ಅವಕಾಶವಿದ್ದು, ಪ್ರೋತ್ಸಾಹ ಧನ ನೀಡುವ ಪ್ರಸ್ತಾವನೆ ಇದೆ. ಇವುಗಳಲ್ಲಿ ವೈಫೈ,ಎಸಿ ಕೊಠಡಿಗಳು ಹಾಗೂ ಕಾಫಿ ವೆಂಡಿಂಗ್ ಯಂತ್ರಗಳಂತಹ ಸೌಲಭ್ಯಗಳೂ ಇರಲಿವೆ. ಇದೇ ಮಾದರಿಯ ಅಂಚೆ ಕಚೇರಿಗಳನ್ನು ಬೆಂಗಳೂರು ಉತ್ತರ, ದಕ್ಷಿಣ ಮತ್ತು ಪೂರ್ವ ವಿಭಾಗಗಳಲ್ಲೂ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




