ಕಿಟಕಿಯಿಂದ ಜಿಗಿದು ಭಾರತಕ್ಕೆ ಬಂದ ಯುವತಿ; ಮನೆ ಕೆಲಸಕ್ಕೆಂದು ದುಬೈಗೆ ತೆರಳಿ ಮೋಸ ಹೋಗಿದ್ದ ಬಡ ಹುಡುಗಿಗೆ ಮರುಜೀವ
ನಕಲಿ ಏಜೆನ್ಸಿ ಮುಖಾಂತರ ಮನೆ ಕೆಲಸಕ್ಕೆ ದುಬೈಗೆ ಹೋಗಿದ್ದ ಯುವತಿಯ ಪಾಸ್ಪೋರ್ಟ್ ಏಜೆನ್ಸಿಯಿಂದ ನೇಮಕಗೊಂಡಿದ್ದ ಶ್ರೀಲಂಕಾ ಪ್ರಜೆ ಬಳಿ ಸಿಲುಕಿಕೊಂಡಿತ್ತು. ಯುವತಿ ಪಾಸ್ಪೋರ್ಟ್ ನೀಡುವಂತೆ ಮನವಿ ಮಾಡಿದಾಗ ಆತ 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆದರೆ, ಕೈಯಲ್ಲಿ ಹಣವಿಲ್ಲದ ಕಾರಣ ಯುವತಿಗೆ 2 ಲಕ್ಷ ನೀಡುವುದು ಸಾಧ್ಯವಾಗಿಲ್ಲ.
ಬೆಂಗಳೂರು: ನಕಲಿ ಏಜೆನ್ಸಿ ಮೂಲಕ ಕೆಲಸಕ್ಕೆಂದು ದುಬೈಗೆ ಹೋಗಿ ಮೋಸ ಹೋಗಿದ್ದ ಬಾಗಲೂರಿನ ಯುವತಿ ದುಬೈನಲ್ಲಿರುವ ಮಾಲೀಕನ ಮನೆ ಕಿಟಕಿಯಿಂದ ಆಚೆ ಜಿಗಿದು ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಬಾಗಲೂರಿನ ಬಡ ಕುಟುಂಬದ 23 ವರ್ಷದ ಯುವತಿ ಮಾರ್ಚ್ 2021ರಲ್ಲಿ ಭಾರತದಿಂದ ದುಬೈಗೆ ಹೋಗಿದ್ದರು. ಆಕೆಯನ್ನು ನಂಬಿಸಿದ್ದ ಫೇಕ್ ಏಜೆನ್ಸಿಯವರು ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಹೇಳಿ ದುಬೈಗೆ ಕಳುಹಿಸಿದ್ದರು. ಆದರೆ, ದುಬೈನಲ್ಲಿ ಸಂಬಳವೂ ನೀಡದೆ ಕಿರುಕುಳ ನೀಡುತ್ತಿದ್ದ ಮನೆ ಮಾಲೀಕರು, ಬೆಳಗ್ಗೆ 4 ಗಂಟೆಯಿಂದ ರಾತ್ರಿ 2 ಗಂಟೆವರೆಗೂ ಮನೆ ಕೆಲಸ ಮಾಡಿಸಿಕೊಂಡು ದೌರ್ಜನ್ಯವೆಸಗಿದ್ದಾರೆ. ಕೊನೆಗೆ ಅವರ ಕಿರುಕುಳ ತಡೆಯಲಾರದೇ ಯುವತಿ ರಾತ್ರೋರಾತ್ರಿ ಕಿಟಕಿಯಿಂದ ಜಿಗಿದು ಭಾರತಕ್ಕೆ ಬಂದಿದ್ದಾರೆ.
ನಕಲಿ ಏಜೆನ್ಸಿ ಮುಖಾಂತರ ಮನೆ ಕೆಲಸಕ್ಕೆ ದುಬೈಗೆ ಹೋಗಿದ್ದ ಯುವತಿಯ ಪಾಸ್ಪೋರ್ಟ್ ಏಜೆನ್ಸಿಯಿಂದ ನೇಮಕಗೊಂಡಿದ್ದ ಶ್ರೀಲಂಕಾ ಪ್ರಜೆ ಬಳಿ ಸಿಲುಕಿಕೊಂಡಿತ್ತು. ಮನೆ ಮಾಲೀಕರ ಕಾಟ ತಾಳಲಾರದೇ ಬೇಸತ್ತ ಯುವತಿ ಪಾಸ್ಪೋರ್ಟ್ ನೀಡುವಂತೆ ಮನವಿ ಮಾಡಿದಾಗ ಆತ 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆದರೆ, ಕೈಯಲ್ಲಿ ಹಣವಿಲ್ಲದ ಕಾರಣ ಯುವತಿಗೆ 2 ಲಕ್ಷ ನೀಡುವುದು ಸಾಧ್ಯವಾಗಿಲ್ಲ.
ಇತ್ತ ಊಟ ನೀಡದೇ ಚಿತ್ರಹಿಂಸೆ ನೀಡುತ್ತಿದ್ದ ಮಾಲೀಕ ಯುವತಿಗೆ ಮತ್ತಷ್ಟು ಕಿರುಕುಳ ನೀಡಲಾರಂಭಿಸಿದ್ದಾನೆ. ಕೊನೆಗೆ ಅವರ ಕಾಟವನ್ನು ತಾಳಲಾರದ ಯುವತಿ ಜುಲೈ 25 ರಂದು ಕೆಲಸ ಮಾಡುತ್ತಿದ್ದ ಮನೆಯ ಕಿಟಕಿಯಿಂದ ಹಾರಿ, ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದಾರೆ. ಅಲ್ಲಿ ದುಬೈನ ಭಾರತೀಯ ರಾಯಭಾರಿ ಕಚೇರಿಯಿಂದ ಬೆಂಗಳೂರಿನ ವಲಸಿಗರ ಸಂರಕ್ಷಕರ ಕಚೇರಿಯನ್ನು ಸಂಪರ್ಕಿಸಲಾಗಿದೆ. ಬಳಿಕ ಯುವತಿಯ ರಕ್ಷಣೆಗೆ ಮುಂದಾದ ವಲಸಿಗರ ಸಂರಕ್ಷಕ ಕಚೇರಿ ಅಧಿಕಾರಿಗಳು ಆಕೆಯನ್ನು ಕರೆದುಕೊಂಡು ಬರಲು ನಿರ್ಧರಿಸಿದ್ದಾರೆ.
ಯುವತಿ ಬಳಿ ಪಾಸ್ಪೋರ್ಟ್ ಇಲ್ಲದ ಕಾರಣ, ಎಮರ್ಜೆನ್ಸಿ ಸರ್ಟಿಫಿಕೇಟ್ ಮೂಲಕ ಆಕೆ ಬೆಂಗಳೂರಿಗೆ ವಾಪಾಸಾಗಿದ್ದು, ಜುಲೈನಿಂದ ನಿನ್ನೆಯವರೆಗೂ ಯುವತಿಯ ಸಂಪೂರ್ಣ ಖರ್ಚು ವೆಚ್ಚವನ್ನು ವಲಸಿಗರ ಸಂರಕ್ಷಕರ ಕಚೇರಿ ಭರಿಸಿದೆ. ಬೆಂಗಳೂರಿನಲ್ಲಿ ಒಟ್ಟು 29 ಫೇಕ್ ಏಜೆನ್ಸಿಗಳಿದ್ದು ಅವುಗಳ ವಿರುದ್ಧ ವಲಸಿಗರ ಸಂರಕ್ಷಕರ ಕಚೇರಿ ಇದೀಗ ದೂರು ನೀಡಿದೆ. ಈ ನಡುವೆ ಯುವತಿ ಬಳಿ ಹಣವಿಲ್ಲದ ಕಾರಣ ಆಕೆಯನ್ನು ದುಬೈಗೆ ಕಳುಹಿಸಿಕೊಟ್ಟಿದ್ದ ಏಜೆನ್ಸಿ ದುಬೈನ ಮನೆ ಮಾಲೀಕರಿಂದ 30 ಸಾವಿರ ರೂಪಾಯಿ ಸಂಬಳದ ಹಣವನ್ನ ಪಡೆದುಕೊಂಡಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರವಾಸಕ್ಕೆ ಬರುವ ಯುವತಿಯರ ಅಶ್ಲೀಲ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಸಿಂಧನೂರು: ಬಾಂಗ್ಲಾ ಕ್ಯಾಂಪ್‌ನಲ್ಲಿ ಅಪ್ರಾಪ್ತನಿಂದ ಪ್ರೀತಿ ಕಿರುಕುಳ, ಬಾಲಕಿ ಆತ್ಮಹತ್ಯೆ
(Bengaluru girl trapped in Dubai escaped from window and reached India)