ಇಡೀ ಬೆಂಗಳೂರಿನಲ್ಲಿ 3% ಮಾತ್ರ ಹಸಿರು ಪರಿಸರ: ಐಐಎಸ್ಸಿ ತಜ್ಞರ ವರದಿಯ ಶಾಕಿಂಗ್ ಅಂಶ ಬಹಿರಂಗ
ಐಐಎಸ್ಸಿ ತಜ್ಞರು ಬಿಡುಗಡೆ ಮಾಡಿದ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಹಸಿರು ಪರಿಸರ ಗಣನೀಯವಾಗಿ ಕಡಿಮೆಯಾಗಿದೆ. 1970ರಲ್ಲಿ 70% ಇದ್ದ ಹಸಿರು ಪರಿಸರ ಈಗ 3%ಗೆ ಇಳಿದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ ಎನ್ನಲಾಗುತ್ತಿದೆ. ಹಾಗಾದರೆ ತಜ್ಞರ ವರದಿಯಲ್ಲಿ ಏನಿದೆ? ಇಲ್ಲಿದೆ ಮಾಹಿತಿ.

ಬೆಂಗಳೂರು, ಜುಲೈ 21: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಅಭಿವೃದ್ಧಿ ಹೆಸರಲ್ಲಿ ದಿನದಿಂದ ದಿನಕ್ಕೆ ಮರಗಳ ಮಾರಣ ಹೋಮವಾಗುತ್ತಿದೆ. ಹಾಗಾಗಿ ಹಸಿರು (greenery) ಮಾಯವಾಗುತ್ತಿದೆ. ಐಐಎಸ್ಸಿ ತಜ್ಞರು ಹೊಸದೊಂದು ವರದಿಯನ್ನು ಬಿಡುಗಡೆ ಮಾಡಿದ್ದು, ಆ ವರದಿಯಲ್ಲಿ ಶಾಕಿಂಗ್ ಅಂಶಗಳನ್ನು ಬೆಳಕಿಗೆ ಬಂದಿದೆ. ಜನರು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ ಎನ್ನುತ್ತಿದ್ದಾರೆ ತಜ್ಞರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ನ ವಿಜ್ಞಾನಿಗಳ ಪ್ರಕಾರ, ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇದರಿಂದ ಮುಂದೆ ನಗರದಲ್ಲಿ ಏನೆಲ್ಲಾ ಸಮಸ್ಯೆ ಆಗಬಹುದು, ಇದರಿಂದ ಜನರು ಯಾವ ತೊಂದರೆಗಳನ್ನು ಎದುರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಮಳೆ ಅಬ್ಬರಕ್ಕೆ ಒಂದೇ ದಿನ ಐವರು ಸಾವು, ಹಲವೆಡೆ ಭೂಕುಸಿತ
ತಜ್ಞರ ವರದಿಯಲ್ಲಿ ಏನೆನಿದೆ ಅಂತ ನೋಡುವುದಾದರೆ, ಗಾರ್ಡನ್ ಸಿಟಿ ಬೆಂಗಳೂರಲ್ಲಿ 1970ರಲ್ಲಿ 70% ಗ್ರೀನ್ ಕವರ್ ಆಗಿತ್ತು. ಆದರೆ ಈಗ 50 ವರ್ಷದಲ್ಲಿ 3%ಗೆ ಪರಿಸರ ಇಳಿದಿದೆ. ಇದರಿಂದ ಈಗಾಗಲೇ ಗ್ಲೋಬಲ್ ವಾರ್ಮಿಂಗ್ ಎಮರ್ಜೆನ್ಸಿ ನಿರ್ಮಾಣವಾಗಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಬದಲಾವಣೆ ಆಗುತ್ತಿದೆ. 33% ಪರಿಸರ ಉಳಿಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಈಗಲಾದರೂ ಎಚ್ಚತ್ತುಕೊಂಡು 10 ರಿಂದ 11% ಪರಿಸರವನ್ನ ಬೆಂಗಳೂರಿನಲ್ಲಿ ಹೆಚ್ಚಳ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತುಂಬಾ ಸಮಸ್ಯೆ ಆಗಲಿದೆ ಎಂದು ಪರಿಸರವಾದಿ ವಿನೋದ್ ಕರ್ತವ್ಯ ಹೇಳಿದ್ದಾರೆ.
ಇನ್ನೂ ಪರಿಸರ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಏನೆಲ್ಲಾ ತೊಂದರೆಗಳು ಆಗಬಹುದು ಅಂತ ನೋಡುವುದಾದರೆ, ವಾಯು ಮಾಲಿನ್ಯ ಜಾಸ್ತಿ ಆಗುತ್ತದೆ. ಬೋರ್ವೆಲ್ಗಳು ಬತ್ತಿ ಹೋಗುತ್ತೆ. ಬರುಡು ಪ್ರದೇಶ ಆಗುತ್ತೆ. ಪ್ರಾಣಿ-ಪಕ್ಷಿಗಳು ಇರುವುದಿಲ್ಲ. ಬಯೋಡೈವರ್ಸಿಟಿ ಕಳೆದುಕೊಳ್ಳಬೇಕಾಗುತ್ತದೆ. ಹೀಟ್ ಐಲ್ಯಾಂಡ್ ಆಗುತ್ತೆ, ಬಿಸಿಲು ಪ್ರಮಾಣ ಜಾಸ್ತಿ ಆಗುತ್ತೆ. 45% ಗಿಂತ ಜಾಸ್ತಿ ಬಿಸಿಲು ಬರುತ್ತೆ. ಜನರ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಎಂದು ಪರಿಸರ ತಜ್ಞ ಅಜಯ್ ಚಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ರಾಜಾಜಿನಗರದಲ್ಲಿ ಬೃಹತ್ ಮರ ಉರುಳಿ ಐದಾರು ವಾಹನಗಳು ಜಖಂ, ಅದೃಷ್ಟವಶಾತ್ ಪ್ರಾಣಾಪಾಯವಿಲ್ಲ
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಮೆಟ್ರೋ ವಿಸ್ತರಣೆ ಮಾಡುತ್ತೇವೆ, ವೈಟ್ ಟಾಪಿಂಗ್ ಮಾಡುತ್ತೇವೆ, ಆ ಕಾಮಗಾರಿ, ಈ ಕಾಮಗಾರಿ ಅಂತ ಮರಗಳ ಮಾರಣಹೋಮ ಮಾಡಲಾಗುತ್ತಿದೆ. ತಜ್ಞರ ಈ ವರದಿ ಬಳಿಕವಾದರೂ ಹಸಿರು ಉಳಿಸಲು ಮುಂದಾಗುತ್ತಾರಾ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



