ಬೆಂಗಳೂರಿನಲ್ಲಿ ಕಂಡ ಕಂಡಲ್ಲಿ ಕಸ ಎಸೆದರೆ ಹುಷಾರ್, ಬೀಳಲಿದೆ ಭಾರಿ ದಂಡ: ಕಠಿಣ ಕ್ರಮಕ್ಕೆ ಜಿಬಿಎ ಸಿದ್ಧತೆ
ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊರಟಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಇದೀಗ ಕಂಡ ಕಂಡಲ್ಲಿ ಕಸ ಎಸೆಯುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲು ಸಿದ್ಧತೆ ಮಾಡಿದೆ. ಆ ಮೂಲಕ ರಾಜಧಾನಿಯ ಬ್ಲಾಕ್ ಸ್ಪಾಟ್ಗಳ ನಿಯಂತ್ರಣಕ್ಕೆ ತಯಾರಾಗಿದೆ. ಏಕಬಳಕೆಯ ಪ್ಲಾಸ್ಟಿಕ್ ಬಳಕೆಗೂ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡಿರುವ ಜಿಬಿಎ ಇದುವರೆಗೆ ಲಕ್ಷ ಲಕ್ಷ ರೂ. ದಂಡ ವಸೂಲಿ ಮಾಡಿದೆ.

ಬೆಂಗಳೂರು, ಸೆಪ್ಟೆಂಬರ್ 13: ಕಂಡ ಕಂಡಲ್ಲಿ ಕಸ ಎಸೆಯುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತೀರ್ಮಾನಿಸಿದೆ. ಮನೆ ಮುಂದೆ ಕಸದ ವಾಹನ ಬಂದರೂ ಕಸ ಹಾಕದೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬಿಸಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಿರುವ ಮಾರ್ಷಲ್ಗಳ, ಪದೇ ಪದೇ ಅದೇ ತಪ್ಪು ಮಾಡಿದರೆ 2 ಸಾವಿರ ರೂಪಾಯಿ ತನಕ ದಂಡ ವಸೂಲಿ ಮಾಡಲಿದ್ದಾರೆ. ಪ್ಲಾಸ್ಟಿಕ್ ನಿಷೇಧ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ ಮಾಡುವವರಿಂದ ಬರೋಬ್ಬರಿ 38 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದೆ.
ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸದ ವಿಲೇವಾರಿಗೆ ಕಣ್ಣೂರು ಲ್ಯಾಂಡ್ ಫಿಲ್ಲಿಂಗ್ ಬಳಕೆ ಮಾಡುತ್ತಿರುವ ಜಿಬಿಎ, ಇದೀಗ ಬೀದಿ ಬೀದಿಗಳಲ್ಲಿ ಕಸ ವಿಂಗಡನೆಯಿಂದ ಆಗುತ್ತಿದ್ದ ಸಮಸ್ಯೆಗೂ ಪರಿಹಾರ ಕಂಡುಹಿಡಿಯಲು ಚಿಂತನೆ ನಡೆಸಿದೆ. ಸದ್ಯ ಬೆಂಗಳೂರಿನ 26 ಕಡೆಗಳಲ್ಲಿ ಟ್ರಾನ್ಸ್ ಫಾರ್ಮಮೇಷನ್ ಸೆಂಟರ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ಮುಂದಾಗಿರುವ ಜಿಬಿಎ, ಸಾರ್ವಜನಿಕ ಸ್ಥಳಗಳಲ್ಲಿ ಕಸದಿಂದ ಆಗುತ್ತಿರುವ ಸಮಸ್ಯೆಗಳನ್ನು ಪತ್ತೆಹಚ್ಚಲು ಹೊರಟಿದೆ. ಇತ್ತ ರಾಜಧಾನಿಯ ಕಸದ ಸಮಸ್ಯೆ ಬಗ್ಗೆ ಪದೇ ಪದೇ ದೂರು ಬರುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಜಿಬಿಎ, ಇದೀಗ ತ್ಯಾಜ್ಯ ವಿಲೇವಾರಿಯಲ್ಲಿ ಸುಧಾರಣೆ ತರಲು ತಯಾರಿ ನಡೆಸಿದೆ.
ಇದನ್ನೂ ಓದಿ: ಕೈಗೆ ಬಂದ ತುತ್ತು ಬಾಯಿಗಿಲ್ಲ? ಜಿಎಸ್ಟಿ ದರ ಇಳಿಕೆ ಬೆನ್ನಲ್ಲೇ ವಾಣಿಜ್ಯ ಬಳಕೆ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾದ ಕರ್ನಾಟಕ
ಸದ್ಯ ಬ್ರ್ಯಾಂಡ್ ಬೆಂಗಳೂರಿನ ಕಸದ ಸಮಸ್ಯೆ ಮುಗಿಯದ ಕತೆಯಾಗಿದ್ದು, ತ್ಯಾಜ್ಯ ವಿಲೇವಾರಿಗೆ ಹೊಸ ಹೊಸ ಪ್ರಯೋಗ ಮಾಡಲು ಜಿಬಿಎ ಮುಂದಾಗಿದೆ. ಕಸ ಸಂಗ್ರಹಣಾ ಆಟೋದ ಸಮಯ ಬದಲಾವಣೆ ಮಾಡುವ ಮೂಲಕ ಸಮರ್ಪಕವಾಗಿ ಕಸ ಸಂಗ್ರಹ ಮಾಡಲು ಈಗಾಗಲೇ ಕ್ರಮ ಕೈಗೊಂಡಿದೆ. ಸದ್ಯ ಎಲ್ಲೆಂದರಲ್ಲಿ ಕಸ ಎಸೆಯುವ ಸಮಸ್ಯೆ ಬಗೆಹರಿಸಲು ದಂಡ ವಸೂಲಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.



