
ಬೆಂಗಳೂರು, ನವೆಂಬರ್ 1: ಬೆಂಗಳೂರಿನ ಐಷಾರಾಮಿ ಕಾನ್ರಾಡ್ ಹೋಟೆಲ್‌ನ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶದಿಂದ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿರುವ ದುರಂತ ಪ್ರಕರಣ ಇದೀಗ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಪಂಚತಾರಾ ಹೋಟೆಲ್‌ನಲ್ಲೇ ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಇಬ್ಬರನ್ನು ರಕ್ಷಿಸಲು ಮುಂದಾದ ಅಮೆರಿಕದ ಪ್ರವಾಸಿಗ ಹಾಗೂ ಹೋಟೆಲ್ ಸಿಬ್ಬಂದಿಯೂ ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಈಜುಕೊಳದ ವಿದ್ಯುತ್ ವ್ಯವಸ್ಥೆ, ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈಜುಕೊಳದ ಸುತ್ತಲಿನ ರೇಲಿಂಗ್‌ಗಳು ಹಾಗೂ ನೀರಿನ ಒಳಭಾಗದಲ್ಲಿ ಅಳವಡಿಸಲಾಗಿದ್ದ ಎಲ್‌ಇಡಿ ದೀಪಗಳ ವಿದ್ಯುತ್ ಸಂಪರ್ಕದಲ್ಲಿ ಸೋರಿಕೆಯಾಗಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ವಿದ್ಯುತ್ ಸೋರಿಕೆಯಿಂದಲೇ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಉಪಕರಣಗಳು ಮತ್ತು ಸಂಪರ್ಕ ವ್ಯವಸ್ಥೆಗಳನ್ನು ತಪಾಸಣೆ ಮಾಡಲಾಗುತ್ತಿದೆ. ಈಜುಕೊಳದ ವಿದ್ಯುತ್ ಸುರಕ್ಷತಾ ವ್ಯವಸ್ಥೆ ಸಮರ್ಪಕವಾಗಿತ್ತೇ? ನಿಯಮಿತವಾಗಿ ತಾಂತ್ರಿಕ ತಪಾಸಣೆ ನಡೆಸಲಾಗಿತ್ತೇ? ನೀರಿನ ಸಮೀಪ ವಿದ್ಯುತ್ ಸಂಪರ್ಕ ಅಳವಡಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿತ್ತೇ? ಎಂಬ ಪ್ರಶ್ನೆಗಳು ತನಿಖೆಯ ಕೇಂದ್ರಬಿಂದುವಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಘಟನೆ ನಡೆದ ಸಂದರ್ಭದಲ್ಲಿ ಪೂಲ್‌ನಲ್ಲಿ ಈಜುತ್ತಿದ್ದ ಸ್ಲೋವಾಕಿಯಾ ಮೂಲದ ಜುರಾಜ್ ಹೋರ್ವತ್ ಮತ್ತು ಜರ್ಮನಿ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೈಸ್ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರು. ಸಮೀಪದಲ್ಲಿದ್ದ ಅಮೆರಿಕದ ಪ್ರವಾಸಿಗ ಮ್ಯಾಥ್ಯೂ ಡೆಸಾಂಟಿಸ್ ಮತ್ತು ಪೂಲ್ ಅಟೆಂಡೆಂಟ್ ರಾಹುಲ್ ತಿವಾರಿ ರಕ್ಷಣೆಗೆ ಧಾವಿಸಿದಾಗ ಅವರಿಗೂ ವಿದ್ಯುತ್ ಆಘಾತ ತಗುಲಿ ಗಾಯಗಳಾಗಿವೆ. ರಾಹುಲ್ ತಿವಾರಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಇಬ್ಬರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ.
ಘಟನೆ ಬಳಿಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡದಿರುವುದು ಹಾಗೂ ಪ್ರಕರಣದ ವಿವರಗಳನ್ನು ಹೊರಗಿನವರಿಗೆ ತಿಳಿಸದಿರುವಂತೆ ಒತ್ತಡವಿತ್ತೇ ಎಂಬ ಆರೋಪಗಳೂ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿಯ ಪ್ರತಿಕ್ರಿಯೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ ಆರೋಪದಡಿ ಬಿಎನ್‌ಎಸ್ ಸೆಕ್ಷನ್ 106ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ವರದಿ ಹೊರಬಂದ ಬಳಿಕವೇ ದುರಂತಕ್ಕೆ ನಿಖರ ಕಾರಣ ಮತ್ತು ಹೊಣೆಗಾರರು ಯಾರು ಎಂಬುದು ಸ್ಪಷ್ಟವಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ