ಫೆಬ್ರವರಿಯಲ್ಲೇ ಬಿಸಿಲಿನ ಝಳಕ್ಕೆ ತತ್ತರಿಸುತ್ತಿದೆ ಬೆಂಗಳೂರು: ಗರಿಷ್ಠ ಉಷ್ಣಾಂಶ ದೆಹಲಿಗಿಂತಲೂ ಹೆಚ್ಚು

| Updated By: Ganapathi Sharma

Updated on: Feb 17, 2025 | 9:19 AM

ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲಡೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ನಗರದಲ್ಲಿ ಬಿಸಿಲಿನ ಹೊಡೆತಕ್ಕೆ ಜನ ಕಂಗಲಾಗಿದ್ದಾರೆ. ಮನೆಯಿಂದ ಹೊರ ಬರಲು ಯೋಚನೆ ಮಾಡುವಂತಾಗಿದೆ. ಶಿವರಾತ್ರಿಗೂ ಮುನ್ನವೇ ಸಿಲಿಕಾನ್ ಸಿಟಿಯ ಜನರು ಶಿವ ಶಿವ ಎನ್ನುವಂತಾಗಿದೆ. ಫೆಬ್ರವರಿ ಮಧ್ಯದಲ್ಲಿ ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಹೆಚ್ಚಿನ ತಾಪಮಾನ ಕಂಡುಬಂದಿದ್ದು, ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ವರ್ಷದ ಈ ಸಮಯದಲ್ಲಿನ ಸರಾಸರಿಗಿಂತ 2.7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಫೆಬ್ರವರಿಯಲ್ಲೇ ಬಿಸಿಲಿನ ಝಳಕ್ಕೆ ತತ್ತರಿಸುತ್ತಿದೆ ಬೆಂಗಳೂರು: ಗರಿಷ್ಠ ಉಷ್ಣಾಂಶ ದೆಹಲಿಗಿಂತಲೂ ಹೆಚ್ಚು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 17: ಬೆಂಗಳೂರಿನಲ್ಲಿ ಈ ವರ್ಷ ಬಿಸಿಲಿನ ಪ್ರಮಾಣ ಜೋರಾಗಿಯೇ ಇದೇ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ‌ ಆರಂಭವಾಗುವ ಬಿಸಿಲಿನ ಝಳ ಈ ಬಾರಿ ಫೆಬ್ರವರಿಯಲ್ಲೇ ಶುರುವಾಗಿದ್ದು, ಪ್ರಮುಖವಾಗಿ ಬೆಂಗಳೂರಿನಲ್ಲಿ ಸುಡುಬಿಸಿಲಿನಿಂದ ಜನರು ರೋಸಿಹೋಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ 32-33 ಡಿಗ್ರಿ ಸೆಲ್ಸಿಯಸ್​ ವರೆಗೂ ಉಷ್ಣಾಂಶ ದಾಖಲಾಗುತ್ತಿದೆ. ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ಕಲಬುರಗಿಯಲ್ಲಿ 36 ಡಿಗ್ರಿ ಹಾಗೂ ಬಾಗಲಕೋಟೆ, ಧಾರವಾಡ, ಗದಗ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 34.4 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಮುಂದಿನ ಏಳು ದಿನಗಳವರೆಗೆ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ. ಜೊತೆಗೆ ಮುಂದಿನ 48 ಗಂಟೆಯೊಳಗೆ ಒಂದೆರಡು ಡಿಗ್ರಿ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲಿಯೂ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟೆಷ್ಟಿದೆ ಉಷ್ಣಾಂಶ?

ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 32.8 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ ಉಷ್ಣಾಂಶ 18.2 ಡಿಗ್ರಿ ಸೆಲ್ಸಿಯಸ್ ಇದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶ 32.6 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ ಉಷ್ಣಾಂಶ 17.4 ಡಿಗ್ರಿ ಸೆಲ್ಸಿಯಸ್ಇದೆ. ಹೆಚ್‌ಎ‌ಎಲ್ ಏರ್ಪೋರ್ಟ್ ಗರಿಷ್ಠ ಉಷ್ಣಾಂಶ 32.0 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ ಉಷ್ಣಾಂಶ 16.5 ಡಿಗ್ರಿ ಸೆಲ್ಸಿಯಸ್ ಇದೆ.

ದೆಹಲಿಗಿಂತಲೂ ಹೆಚ್ಚಾಯ್ತು ಹಗಲಿನ ತಾಪ!

ಬೆಂಗಳೂರಿನಲ್ಲಿ ಹಗಲಿನ ಹೊತ್ತಿನಲ್ಲಿ ತಾಪಮಾನವು ದೆಹಲಿಗಿಂತಲೂ ಹೆಚ್ಚಾಗಿರುವುದು ಕಂಡುಬಂದಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಇದು 29 ಡಿಗ್ರಿ ಸೆಲ್ಸಿಯಸ್ ಆಗಿದೆ. ಆದಾಗ್ಯೂ, ರಾತ್ರಿ ವೇಳೆ ಬೆಂಗಳೂರಿನಲ್ಲಿ ತಂಪಾದ ವಾತಾವರಣ ಇದೆ. ಸಾಮಾನ್ಯವಾಗಿ ರಾತ್ರಿ ಸುಮಾರು 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ಇದು ಸಾಮಾನ್ಯಕ್ಕಿಂತ 0.1 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ದೆಹಲಿಯು ರಾತ್ರಿಯಲ್ಲಿ 15 ಡಿಗ್ರಿ ಸೆಲ್ಸಿಯಸ್​​ಗಿಂತ ಕಡಿಮೆ ತಾಪಮಾನದೊಂದಿಗೆ ಹೆಚ್ಚು ತಂಪಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರು, ಹಾಸನ, ಮೈಸೂರಿನಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ಝಳ ಜೋರಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ.‌ ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ