ಬೆಂಗಳೂರಿಗರೇ ರೆಡಿಯಾಗಿ: ಬಸವನಗುಡಿಯಲ್ಲಿ ಡಿಸೆಂಬರ್ 5ರಿಂದ ಕಡಲೆಕಾಯಿ ಪರಿಷೆ ಸಂಭ್ರಮ!

ಬೆಂಗಳೂರಿನ ಬಸವನಗುಡಿಯ ಪ್ರಸಿದ್ಧ ಕಡಲೆಕಾಯಿ ಪರಿಷೆ ಈ ಬಾರಿ ಡಿಸೆಂಬರ್ 5ರಿಂದ 8ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ರೈತರು ಮತ್ತು ವ್ಯಾಪಾರಿಗಳು ಆಗಮಿಸಲಿದ್ದಾರೆ. ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ಸಾಂಪ್ರದಾಯಿಕ ತಿಂಡಿಗಳು, ಆಟಿಕೆಗಳ ಮಾರಾಟ ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ. ಈ ಬಾರಿ ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.

ಬೆಂಗಳೂರಿಗರೇ ರೆಡಿಯಾಗಿ: ಬಸವನಗುಡಿಯಲ್ಲಿ ಡಿಸೆಂಬರ್ 5ರಿಂದ ಕಡಲೆಕಾಯಿ ಪರಿಷೆ ಸಂಭ್ರಮ!
ಕಡಲೆಕಾಯಿ ಪರಿಷೆ
Image Credit source: PTI

Updated on: Nov 21, 2026 | 8:54 PM

ಮುಖ್ಯಾಂಶಗಳು

  • ಬೆಂಗಳೂರಿನ ಬಸವನಗುಡಿಯಲ್ಲಿ ಡಿಸೆಂಬರ್ 5ರಿಂದ 8ರವರೆಗೆ ಕಡಲೆಕಾಯಿ ಪರಿಷೆ ಸಂಭ್ರಮ.
  • ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ರೈತರು ಆಗಮನ.
  • ಹಸಿ ಕಡಲೆಕಾಯಿ, ಸಾಂಪ್ರದಾಯಿಕ ತಿಂಡಿಗಳು, ಆಟಿಕೆಗಳ ಮಾರಾಟ ಜಾತ್ರೆಯ ಪ್ರಮುಖ ಆಕರ್ಷಣೆ.

ಬೆಂಗಳೂರು, ನವೆಂಬರ್ 21: ಬೆಂಗಳೂರಿನ ಐತಿಹಾಸಿಕ ಸಂಭ್ರಮಗಳಲ್ಲಿ ಒಂದಾದ ಬಸವನಗುಡಿಯ ಕಡಲೆಕಾಯಿ ಪರಿಷೆ ಮತ್ತೆ ಬಂದಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಈ ಸಾಂಪ್ರದಾಯಿಕ ಜಾತ್ರೆ ಈ ಬಾರಿ ಡಿಸೆಂಬರ್ 5ರಿಂದ 8ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಡಿಸೆಂಬರ್ 7ರಂದು ಕಡಲೆಕಾಯಿ ಪರಿಷೆಯ ಪ್ರಮುಖ ಧಾರ್ಮಿಕ ಆಚರಣೆ ನಡೆಯಲಿದ್ದು, ಬಸವನಗುಡಿ ಹಾಗೂ ಸುತ್ತಮುತ್ತಲಿನ ರಸ್ತೆಗಳು ಕಡಲೆಕಾಯಿ ವ್ಯಾಪಾರ, ಸಾಂಪ್ರದಾಯಿಕ ತಿಂಡಿ-ತಿನಿಸುಗಳು ಮತ್ತು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿವೆ. ಮುಜರಾಯಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಂಟಿಯಾಗಿ ಜಾತ್ರೆಯನ್ನು ಆಯೋಜಿಸಲಿವೆ.

ರೈತರು, ವ್ಯಾಪಾರಿಗಳಿಂದ ವಿವಿಧ ಬಗೆಯ ಕಡಲೆಕಾಯಿ ಮಾರಾಟ

ಕಡಲೆಕಾಯಿ ಪರಿಷೆಗೆ ಕರ್ನಾಟಕದ ವಿವಿಧ ಜಿಲ್ಲೆಗಳ ರೈತರು ಮತ್ತು ವ್ಯಾಪಾರಿಗಳು ತಮ್ಮ ಉತ್ಪನ್ನಗಳೊಂದಿಗೆ ಆಗಮಿಸಲಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ, ಮಂಡ್ಯ, ಮಾಗಡಿ, ಮೈಸೂರು, ಕುಣಿಗಲ್ ಹಾಗೂ ತುಮಕೂರು ಭಾಗಗಳಿಂದ ಕಡಲೆಕಾಯಿ ಬರಲಿದೆ. ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದಲೂ ವ್ಯಾಪಾರಿಗಳು ಕಡಲೆಕಾಯಿ ತಂದು ಮಾರಾಟ ಮಾಡಲಿದ್ದಾರೆ.

Loading...

ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ ಸೇರಿದಂತೆ ವಿವಿಧ ಬಗೆಯ ಕಡಲೆಕಾಯಿ ಖರೀದಿಗೆ ಅವಕಾಶವಿರಲಿದೆ. ಇದರ ಜೊತೆಗೆ ಮಂಡಕ್ಕಿ, ಜಿಲೇಬಿ, ಬತ್ತಾಸು ಸೇರಿದಂತೆ ಸಾಂಪ್ರದಾಯಿಕ ಸಿಹಿ ಮತ್ತು ಖಾರದ ತಿಂಡಿಗಳ ಮಳಿಗೆಗಳು ಜಾತ್ರೆಯ ಆಕರ್ಷಣೆಯಾಗಲಿವೆ. ಮಕ್ಕಳ ಆಟಿಕೆಗಳು, ಬಳೆಗಳು, ಕಿವಿಯೋಲೆಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟವೂ ನಡೆಯಲಿದೆ.

ಈ ಬಾರಿ ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಆದ್ಯತೆ

ಕಡಲೆಕಾಯಿ ಪರಿಷೆಯನ್ನು ಪರಿಸರ ಸ್ನೇಹಿಯಾಗಿ ಆಯೋಜಿಸಲು ಈ ಬಾರಿ ಪ್ಲಾಸ್ಟಿಕ್ ಮುಕ್ತ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡುವ ಸಾಧ್ಯತೆಯಿದೆ. ಬಸವನಗುಡಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಜನಸಂದಣಿ ನಿಯಂತ್ರಣ, ಭದ್ರತೆ, ಸಂಚಾರ ನಿರ್ವಹಣೆ ಹಾಗೂ ಸ್ವಚ್ಛತೆಗಾಗಿ ಅಧಿಕಾರಿಗಳು ಸಿದ್ಧತೆ ಕೈಗೊಳ್ಳಲಿದ್ದಾರೆ.

ಈ ಬಾರಿ ಕಡಲೆಕಾಯಿ ಬೆಲೆ ಏರಿಕೆಯಾಗುವ ಸಾಧ್ಯತೆ

ರಾಜ್ಯದಲ್ಲಿ ಸಮರ್ಪಕ ಮಳೆಯಾಗದ ಕಾರಣ ಕಡಲೆಕಾಯಿ ಇಳುವರಿ ಕುಸಿದಿದೆ. ಹೀಗಾಗಿ ಈ ಬಾರಿ ಜಾತ್ರೆಯಲ್ಲಿ ಕಡಲೆಕಾಯಿ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಕಾಲು ಲೀಟರ್ ಅಳತೆಯ ಕಡಲೆಕಾಯಿ ಬೆಲೆ 20ರಿಂದ 25 ರೂಪಾಯಿ ಆಸುಪಾಸಿನಲ್ಲಿದ್ದು, ಡಿಸೆಂಬರ್ ಆರಂಭದಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಕಡಲೆಕಾಯಿ ಪರಿಷೆ ಕೇವಲ ವ್ಯಾಪಾರ ಮೇಳವಲ್ಲ, ಬೆಂಗಳೂರಿನ ಕೃಷಿ ಪರಂಪರೆ ಮತ್ತು ಧಾರ್ಮಿಕ ನಂಬಿಕೆಯ ಪ್ರತೀಕವೂ ಹೌದು. ರೈತರು ತಮ್ಮ ಮೊದಲ ಫಸಲನ್ನು ಬಸವಣ್ಣನಿಗೆ ಅರ್ಪಿಸಿ ಆಶೀರ್ವಾದ ಪಡೆಯುವ ಸಂಪ್ರದಾಯ ಈ ಜಾತ್ರೆಯ ವಿಶೇಷವಾಗಿದೆ. ಹೀಗಾಗಿ ಈ ಬಾರಿಯೂ ಸಾವಿರಾರು ಜನರು ಜಾತ್ರೆಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us