ಬೆಂಗಳೂರು, ಮೇ 25: ಬೆಂಗಳೂರಿನಲ್ಲಿ ಮಾವಿನ ಸೀಸನ್ ಆರಂಭವಾಗಿದ್ದು, ಮಾವು ಮಾರಾಟ ಕಳೆಗಟ್ಟಿದೆ. ಇದೀಗ ಲಾಲ್ ಬಾಗ್ನಲ್ಲಿ (Lalbagh) ಮಾವು ಮೇಳ (Mango Mela 2024) ಇಂದಿನಿಂದ ಆರಂಭವಾಗಿದೆ. ಇಂದಿನಿಂದ ಜೂನ್ 10 ವರೆಗೂ ಮಾವಿನ ಮೇಳ ನಡೆಯಲಿದೆ. ಈ ವರ್ಷ ತಾಪಮಾನ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜಾಧಾನಿಯಲ್ಲಿ ಮಾವಿನ ಸೀಸನ್ (Mango Season) ತಡವಾಗಿ ಆರಂಭವಾಗಿದೆ. ಮಳೆ ಬಂದ ನಂತರ ಸಿಲಿಕಾನ್ ಸಿಟಿಯ ಮಂದಿ ಈಗ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಸವಿಯುತ್ತಿದ್ದಾರೆ. ಇಂದು ತೋಟಗಾರಿಕೆ ಇಲಾಖೆ ಹಾಗೂ ಮಾವು ನಿಗಮ ಮಂಡಳಿ ಅಧಿಕೃತವಾಗಿ ಮಾವು ಮೇಳಕ್ಕೆ ಚಾಲನೆ ನೀಡಿದೆ.
ಮಾವಿನ ಜೊತಗೆ ಹಲಸಿನ ಮೇಳ ಕೂಡ ಇರಲಿದೆ. ಮಾವಿನ ಮೇಳದಲ್ಲಿ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಿದ್ದು ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳು, ಜತೆಗೆ ಉಪ್ಪಿನಕಾಯಿಗೆ ಬಳಸುವ ಮಿಡಿ, ಮಿಡಿ ಮಾವು ಜೊತೆಗೆ ರೈತರು ಬೆಳೆದ ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ.
ಈ ವರ್ಷದ ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ, ಸಕ್ಕರೆಗುತ್ತಿ ಸೇರಿದಂತೆ ನಾನಾ ತಳಿಯ ಹಣ್ಣುಗಳಿದ್ದು, ತೋಟಗಾರಿಕೆ ಇಲಾಖೆಯೇ ಹಣ್ಣುಗಳ ಬೆಲೆ ನಿಗದಿ ಮಾಡಿದೆ.
ಇದನ್ನೂ ಓದಿ: ಅಚ್ಚರಿಯ ಹೇಳಿಕೆ ನೀಡಿದ ಆಹಾರ ತಜ್ಞ, ಬೆಂಗಳೂರಿನ ಶೇ 87 ರಷ್ಟು ಪೊಲೀಸರು ಅನ್ಫಿಟ್
ಪ್ರತಿವರ್ಷ ಮಾವಿನ ಸೀಸನ್ನಲ್ಲಿ ರಾಜ್ಯದಲ್ಲಿ ಸುಮಾರು 15 ಲಕ್ಷ ಟನ್ ಮಾವು ಉತ್ಪಾದನೆಯಾಗಬೇಕಿತ್ತು. ಆದರೆ, ಮಳೆಯಿಲ್ಲದ ಪರಿಣಾಮ ಹಾಗೂ ಅಧಿಕ ತಾಪಮಾನದಿಂದಾಗಿ ಕೇವಲ 4-5 ಲಕ್ಷ ಟನ್‌ನಷ್ಟು ಮಾವಿನ ಫಸಲು ಕಡಿಮೆ ಬಂದಿದೆ. ಹೀಗಾಗಿ ಈ ಬಾರಿ ಮೇಳದಲ್ಲಿ ದರ ಕೊಂಚ ಏರಕೆಯಾಗಿದೆ. ಆದ್ರೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ರೈತರು ಹೇಳಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ