ಮತ್ತೆ ಮದುವೆಯಾಗುತ್ತೇನೆ, ಈಗ ಸೇರುವ ಬಾ ಎಂದು ನಂಬಿಸಿ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್: ಕೊನೆಯ ಬಾರಿ ಲಾಡ್ಜ್‌ಗೆ ಬಂದಾಗ ನಡೆದದ್ದೇ ಬೇರೆ

ಬೆಂಗಳೂರಿನಲ್ಲಿ ನಡೆದ ಭೀಕರ ಕೊಲೆ ಪ್ರಕರಣದಲ್ಲಿ, ಪ್ರಿಯಕರ ಸಂತೋಷ್ ತನ್ನ ಪ್ರೇಯಸಿ ಐಶ್ವರ್ಯಳನ್ನು ಲಾಡ್ಜ್ ಮಹಡಿಯಿಂದ ತಳ್ಳಿ ಹತ್ಯೆಗೈದಿದ್ದಾನೆ. ಜಾತಿಯ ಅಡೆತಡೆ ಮೀರಿ ವಿವಾಹಕ್ಕೆ ಪೋಷಕರ ಒಪ್ಪಿಗೆ ಪಡೆದಿದ್ದರೂ, ಮದುವೆಗೆ ನಿರಾಕರಿಸಿ, ಬ್ಲಾಕ್‌ಮೇಲ್ ಮಾಡಿ ಕೊಲೆ ಮಾಡಿದ್ದಾನೆ. ಪೊಲೀಸರು ಸಂತೋಷ್‌ನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಮತ್ತೆ ಮದುವೆಯಾಗುತ್ತೇನೆ, ಈಗ ಸೇರುವ ಬಾ ಎಂದು ನಂಬಿಸಿ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್: ಕೊನೆಯ ಬಾರಿ ಲಾಡ್ಜ್‌ಗೆ ಬಂದಾಗ ನಡೆದದ್ದೇ ಬೇರೆ
ಐಶ್ವರ್ಯ ಮತ್ತು ಸಂತೋಷ
Image Credit source: Tv9 kannada
Edited By:

Updated on: Nov 24, 2026 | 9:35 PM

ಬೆಂಗಳೂರು, ನ.24: ಮೂರು ವರ್ಷಗಳ ಪ್ರೀತಿ, ಜಾತಿಯ ಅಡೆತಡೆಯನ್ನೂ ಮೀರಿ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದ ಪೋಷಕರು, ಇಷ್ಟೆಲ್ಲಾ ಇದ್ದರೂ ಕ್ಷಣಿಕ ಸುಖಕ್ಕೆ ಆಸೆ ಬಿದ್ದ ಪ್ರಿಯಕರನೊಬ್ಬ ಪ್ರೀತಿಸಿದ ಯುವತಿಯನ್ನೇ ಲಾಡ್ಜ್ ಮಹಡಿಯಿಂದ ತಳ್ಳಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾಸನ ಮೂಲದ ಸುಂಕದಕಟ್ಟೆ ನಿವಾಸಿ ಐಶ್ವರ್ಯ ಮೃತ ದುರ್ದೈವಿಯಾಗಿದ್ದು, ಆರೋಪಿ ಪ್ರಿಯಕರ ಅಬ್ಬಿಗೆರೆ ನಿವಾಸಿ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅಬ್ಬಿಗೆರೆ ನಿವಾಸಿ ಸಂತೋಷ್ ಹಾಗೂ ಹಾಸನ ಮೂಲದ ಐಶ್ವರ್ಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆರಂಭದಲ್ಲಿ ಜಾತಿ ಕಾರಣಕ್ಕೆ ಎರಡೂ ಮನೆಯವರು ವಿರೋಧ ವ್ಯಕ್ತಪಡಿಸಿದ್ದರೂ, ಕೊನೆಗೆ ಮಕ್ಕಳ ಪ್ರೀತಿಗೆ ಸೋತು ಮದುವೆಗೆ ಒಪ್ಪಿಗೆ ನೀಡಿದ್ದರು. ಪೋಷಕರು ಒಪ್ಪಿದ ಬಳಿಕ ಸಂತೋಷ್ ತನ್ನ ವರಸೆ ಬದಲಿಸಿದ್ದ. “ಈಗಲೇ ಮದುವೆಗೆ ಅರ್ಜೆಂಟ್ ಏನಿದೆ, ಲೈಫ್ ಸೆಟಲ್ ಆಗಲಿ” ಎಂದು ನೆಪ ಹೇಳುತ್ತಾ ದಿನದೂಡುತ್ತಿದ್ದ. ಇದರಿಂದ ಬೇಸತ್ತ ಐಶ್ವರ್ಯ ಆತನೊಂದಿಗೆ ಬ್ರೇಕ್‌ಅಪ್ ಮಾಡಿಕೊಂಡಿದ್ದರು. ಆದರೆ ಆಕೆಯ ಮೇಲೆ ಕಣ್ಣಿಟ್ಟಿದ್ದ ಸಂತೋಷ್, “ಇನ್ನೊಂದು ಆರು ತಿಂಗಳಲ್ಲಿ ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ನಂಬಿಸಿ ಮತ್ತೆ ಹಿಂದೆ ಬಿದ್ದಿದ್ದ.

Loading...

ಯುವತಿಯನ್ನು ನಂಬಿಸಿ ಲಾಡ್ಜ್‌ಗೆ ಕರೆಸಿಕೊಂಡ ಸಂತೋಷ್, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ಅದೇ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಾ ಪದೇ ಪದೇ ಲಾಡ್ಜ್‌ಗೆ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ; ಬಾತ್ ರೂಮ್‌ಗೆ ಹೋಗಲು ಟೈಮ್ ಇಲ್ಲ; ಮಗುವಿನ ಆರೈಕೆಯಲ್ಲಿ ಸುಸ್ತಾದ ಮಹಿಳೆ

ನವೆಂಬರ್ 19ರಂದು ಲಾಡ್ಜ್‌ನಲ್ಲಿ ನಡೆದಿದ್ದೇನು? ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್

ಕಳೆದ ನವೆಂಬರ್ 19ರಂದು ಇದೇ ರೀತಿ ಅಬ್ಬಿಗೆರೆ ಬಳಿಯ ಖಾಸಗಿ ಲಾಡ್ಜ್‌ಗೆ ಐಶ್ವರ್ಯಳನ್ನು ಕರೆಸಿಕೊಂಡಿದ್ದ ಸಂತೋಷ್ ಜೊತೆ ಮದುವೆ ವಿಚಾರವಾಗಿ ತೀವ್ರ ಗಲಾಟೆ ನಡೆದಿದೆ. ಈ ವೇಳೆ ಕೋಪಗೊಂಡ ಸಂತೋಷ್, ಐಶ್ವರ್ಯಳನ್ನು ಲಾಡ್ಜ್ ಮೇಲಿಂದ ಕೆಳಗೆ ತಳ್ಳಿದ್ದಾನೆ. ಕೆಳಗೆ ಬೀಳುವಾಗ ಆಕೆಯ ಕೈಗೆ ವಿದ್ಯುತ್ ತಂತಿ ತಗುಲಿದ್ದು, ಬಳಿಕ ನೆಲಕ್ಕೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಐಶ್ವರ್ಯ ಕೊನೆಯುಸಿರೆಳೆದಿದ್ದಾರೆ.

ಆರಂಭದಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಆದರೆ ವಿಚಾರಣೆ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಪರಿಶೀಲನೆ ವೇಳೆ ಸಂತೋಷ್ ನಡೆಸಿದ ಬ್ಲ್ಯಾಕ್‌ಮೇಲ್ ಮತ್ತು ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಕೃತ್ಯ ಬಯಲಾಗಿದೆ ಎಂದು ಯಶವಂತಪುರ ಡಿಸಿಪಿ ನಾಗೇಶ್ ಡಿ.ಎಲ್. ತಿಳಿಸಿದ್ದಾರೆ. ಸದ್ಯ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸಂತೋಷ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:24 pm, Tue, 24 November 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us