ಮ್ಯಾಟ್ರಿಮೋನಿಯಲ್ಲಿ ನಕಲಿ ಡಾಕ್ಟರ್‌ ಅವತಾರ: 10ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ ತಾಯಿ-ಮಗ ವಯನಾಡಿನಲ್ಲಿ ಅರೆಸ್ಟ್

ಬೆಂಗಳೂರಿನಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ನಡೆದ ವಂಚನೆಯ ಪ್ರಕರಣವೊಂದರಲ್ಲಿ, ತಾಯಿ-ಮಗನನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಡಾಕ್ಟರ್ ಪ್ರೊಫೈಲ್ ಸೃಷ್ಟಿಸಿ 10ಕ್ಕೂ ಹೆಚ್ಚು ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿಗಳನ್ನು ಆಡುಗೋಡಿ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಈ ವಂಚಕರು ಮದುವೆಯ ಆಸೆ ತೋರಿಸಿ ಚಿನ್ನಾಭರಣ, ಕಾರು ಹಾಗೂ ನಗದುಗಾಗಿ ಬೇಡಿಕೆ ಇಡುತ್ತಿದ್ದರು.

ಮ್ಯಾಟ್ರಿಮೋನಿಯಲ್ಲಿ ನಕಲಿ ಡಾಕ್ಟರ್‌ ಅವತಾರ: 10ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ ತಾಯಿ-ಮಗ ವಯನಾಡಿನಲ್ಲಿ ಅರೆಸ್ಟ್
ಮ್ಯಾಟ್ರಿಮೋನಿ ವಂಚನೆ ಬೆಂಗಳೂರು
Edited By:

Updated on: Aug 24, 2026 | 10:28 PM

ಬೆಂಗಳೂರು, ಆ.24: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಸುಮಾರು 10ಕ್ಕೂ ಹೆಚ್ಚು ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಕಿರಾತಕ ತಾಯಿ-ಮಗನನ್ನು ಬೆಂಗಳೂರಿನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ನಕಲಿ ಡಾಕ್ಟರ್ ಪ್ರದೀಪ್ ಜೋಸೆಫ್ (ಪ್ರದೀಪ್ ಸೊಲೊಮನ್) ಹಾಗೂ ಆತನ ತಾಯಿ ಕಲಾವತಿ ಬಂಧಿತ ಆರೋಪಿಗಳು. ಕೇರಳದ ವಯನಾಡಿನ ಮನೆಯೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

‘ಶಾದಿ ಡಾಟ್ ಕಾಮ್’ ನಂತಹ ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡಾಕ್ಟರೇಟ್ ಪದವೀಧರ, ಡಾಕ್ಟರ್ ಮತ್ತು ನ್ಯಾಯಾಧೀಶರಾಗಲು ಪರೀಕ್ಷೆ ಬರೆದಿರುವುದಾಗಿ ಸುಳ್ಳು ಮಾಹಿತಿ ಹಾಕಿ ಯುವತಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಮೈಸೂರಿನಲ್ಲಿ ಬಂಗ್ಲೆಯೊಂದನ್ನು ಬಾಡಿಗೆಗೆ ಪಡೆದು, ತನಗೆ 3 ಎಕರೆ ಜಾಗ ಹಾಗೂ ಕಾಂಪ್ಲೆಕ್ಸ್ ಇದೆ ಎಂದು ನಂಬಿಸಿ ಶ್ರೀಮಂತಿಕೆಯ ಬಿಲ್ಡಪ್ ನೀಡುತ್ತಿದ್ದ.

ಬೆಂಗಳೂರು ಮೂಲದ ಯುವತಿಯೊಬ್ಬರಿಗೆ ಪರಿಚಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆರೋಪಿಗಳು, ಮದುವೆಗೆ ಬಂಗಾರದ ಆಭರಣಗಳು, ಐಷಾರಾಮಿ ಕಾರು ಹಾಗೂ ಬೆಂಗಳೂರಿನಲ್ಲಿ ಒಂದು ಮನೆ ತಮಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಮುಂಗಡ ಹಣದ ರೂಪದಲ್ಲಿ 20 ಲಕ್ಷ ರೂ. ಪಡೆದುಕೊಂಡ ನಂತರ, ಬೇಡಿಕೆ ಈಡೇರಿಸದಿದ್ದರೆ ಮದುವೆ ರದ್ದುಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದರು.

ಇದನ್ನೂ ಓದಿ: ಕಲಬುರಗಿ ಡಿಸಿ ವಿರುದ್ಧ ಅವಹೇಳನ ಹೇಳಿಕೆ ಪ್ರಕರಣ: ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್‌ಗೆ ಜಾಮೀನುರಹಿತ ಬಂಧನ ವಾರಂಟ್

ಕಳೆದ ಮೇ ತಿಂಗಳಲ್ಲಿ ಸಂತ್ರಸ್ತ ಯುವತಿಯ ಕುಟುಂಬ ನೀಡಿದ ದೂರಿನ ಮೇರೆಗೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಕಳೆದ 3 ತಿಂಗಳುಗಳಿಂದ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ತಾಯಿ-ಮಗನನ್ನು ಜಾಡು ಹಿಡಿದು ಹೋದ ಆಡುಗೋಡಿ ಪೊಲೀಸರು ಅಂತಿಮವಾಗಿ ಕೇರಳದಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us