
ಬೆಂಗಳೂರು, ಜೂನ್ 27: ಕಾಳೇನ ಅಗ್ರಹಾರ ದಿಂದ ನಾಗಾವರ ವರೆಗಿನ ಪಿಂಕ್ ಲೈನ್ ಮೆಟ್ರೋದಲ್ಲಿ (Pink Line Metro) ಒಟ್ಟು 18 ಸ್ಟೇಷನ್ಗಳಿದ್ದು, ಆ ಪೈಕಿ ಈ ಡಿಸೆಂಬರ್ ವೇಳೆಗೆ 6 ಮೆಟ್ರೋ ಸ್ಟೇಷನ್ಗಳಲ್ಲಿ ಚಾಲಕರಹಿತ ರೈಲು ಸಂಚಾರ ಮಾಡಲಿದೆ. 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ಗಳಿಗೆ ಮುಂದಿನ ವರ್ಷ ಡಿಸೆಂಬರ್ನಲ್ಲಿ ಚಾಲನೆ ಸಿಗಲಿದೆ. ಸದ್ಯ ಹಳದಿ ಲೈನ್ನಲ್ಲಿ ಈಗಾಗಲೇ ಡ್ರೈವರ್ಲೆಸ್ ರೈಲು (Driverless Metro Train) ಪ್ರಾಯೋಗಿಕ ಸಂಚಾರ ಮಾಡುತ್ತಿದೆ. ಡಿಸೆಂಬರ್ ವೇಳೆಗೆ ಪಿಂಕ್ ಲೈನ್ ಮಾರ್ಗದಲ್ಲಿಯೂ ಸಂಚಾರ ಮಾಡಲಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಕಾಳೇನ ಅಗ್ರಹಾರ ದಿಂದ ನಾಗವಾರ ಮಾರ್ಗ 21.25 ಕಿಮೀ ವಿಸ್ತೀರ್ಣವಿದ್ದು, ಒಟ್ಟು 18 ಮೆಟ್ರೋ ಸ್ಟೇಷನ್ಗಳು ಇರಲಿವೆ. ಅದರಲ್ಲಿ 6 ಎಲಿವೇಟೆಡ್ ಸ್ಟೇಷನ್ಗಳು, 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ಗಳಾಗಿವೆ.
ಕಾಳೇನ ಅಗ್ರಹಾರ ದಿಂದ ಸ್ವಾಗತ್ ಕ್ರಾಸ್ ವರೆಗೆ ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳಿದ್ದು, ಅವುಗಳ ಕಾಮಗಾರಿ ಈಗಾಗಲೇ ಮುಗಿಯುವ ಹಂತದಲ್ಲಿದೆ. ಹೀಗಾಗಿ ಮೊದಲ ಹಂತದಲ್ಲಿ ಈ ಸ್ಟೇಷನ್ಗಳ ಮಧ್ಯೆ ಡ್ರೈವರ್ಲೆಸ್ ರೈಲುಗಳನ್ನು ಓಡಿಸಲು ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಂಡಿದೆ. ಸ್ವಾಗತ್ ಕ್ರಾಸ್ ದಿಂದ ನಾಗವಾರ 12 ಅಂಡರ್ ಗ್ರೌಂಡ್ ಸ್ಟೇಷನ್ ಇದ್ದು, ಅವುಗಳ ಕಾಮಗಾರಿ ಇನ್ನೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ ಗಳ ವ್ಯಾಪ್ತಿಯಲ್ಲಿ ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ.
ಈಗಾಗಲೇ ಈ ಮಾರ್ಗಕ್ಕಾಗಿ ಬೆಮಲ್ನಲ್ಲಿ 16 ಚಾಲಕರಹಿತ ರೈಲುಗಳು ಸಿದ್ದವಾಗುತ್ತಿವೆ. ಮೊದಲ ರೈಲು ಸೆಪ್ಟೆಂಬರ್ಗೆ ಬರಲಿದೆ. ಪ್ರತಿ ತಿಂಗಳು ಎರಡು ಚಾಲಕರಹಿತ ರೈಲುಗಳು ಪೂರೈಕೆಯಾಗಲಿವೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು, ಈ ಬನ್ನೇರುಘಟ್ಟ ರೋಡ್ನಲ್ಲಿ ವಿಪರೀತವಾದ ಟ್ರಾಫಿಕ್ ಇರುತ್ತದ. ಮೆಟ್ರೋ ಸಂಚಾರ ಆರಂಭವಾದರೆ ತುಂಬಾ ಉಪಯೋಗವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: Yellow Line Metro: ನಮ್ಮ ಮೆಟ್ರೋ ಯೆಲ್ಲೋ ಮಾರ್ಗ ಕಾರ್ಯಾರಂಭ ಮತ್ತೆ ವಿಳಂಬ
ಒಟ್ಟಿನಲ್ಲಿ ಈ ವರ್ಷ ಪಿಂಕ್ ಲೈನ್ ಮೆಟ್ರೋದ 6 ಮೆಟ್ರೋ ಸ್ಟೇಷನ್ಗಳ ವ್ಯಾಪ್ತಿಯಲ್ಲಿ ಡ್ರೈವರ್ಲೆಸ್ ರೈಲುಗಳು ಸಂಚಾರ ಮಾಡಲಿದ್ದು, ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.
Published On - 7:59 am, Fri, 27 June 25