ನಮ್ಮ ಮೆಟ್ರೋ: 6 ತಿಂಗಳಲ್ಲಿ 27,000 ಪ್ರಯಾಣಿಕರಿಂದ ನಿಯಮಗಳ ಉಲ್ಲಂಘನೆ, ಆದರೂ ದಂಡ ವಿಧಿಸಿಲ್ಲವೇಕೆ ಗೊತ್ತೇ!
ಕಳೆದ ಆರು ತಿಂಗಳಲ್ಲಿ ನಮ್ಮ ಮೆಟ್ರೋದಲ್ಲಿ 27,000ಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ಬೇರೆಯವರಿಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತುಕೊಳ್ಳುವುದು ಹೀಗೆ ಮುಂತಾದ ನಿಯಮ ಉಲ್ಲಂಘನೆಗಳಿಗೆ ಯಾವುದೇ ದಂಡ ವಿಧಿಸಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇಂತಹ ನಿಯಮ ಉಲ್ಲಂಘನೆಗಳನ್ನು ತಪ್ಪಿಸುವಂತೆ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಮನವಿ ಮಾಡಿದೆ.

ಬೆಂಗಳೂರು, ಏಪ್ರಿಲ್ 04: ನಮ್ಮ ಮೆಟ್ರೋ (Metro).. ನಮ್ಮ ಹೆಮ್ಮೆ.. ಬೆಂಗಳೂರಿಗರ ಜೀವನಾಡಿ. ಲಕ್ಷಾಂತರ ಜನರಿಗೆ ಆಧಾರವಾಗಿದೆ. ಮೆಟ್ರೋ ಅಂದರೆ ಸಾಕು ಜನರು ಮುಗಿಬೀಳುತ್ತಾರೆ. ಸಾಮಾನ್ಯವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರು (Passengers) ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಆದರೆ ಕಳೆದ 6 ತಿಂಗಳ ಅವಧಿಯಲ್ಲಿ, ಸುಮಾರು 27,000 ಪ್ರಯಾಣಿಕರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆದರೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದಂಡ ವಿಧಿಸಿಲ್ಲ.
27,000 ಪ್ರಯಾಣಿಕರಿಂದ ನಿಯಮ ಉಲ್ಲಂಘಣೆ
ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ನಮ್ಮ ಮೆಟ್ರೋ, ಸಪ್ಟೆಂಬರ್ 2024 ರಿಂದ ಮಾರ್ಚ್ 2025ರ ವರೆಗೆ ಅಂದರೆ ಕಳೆದ ಆರು ತಿಂಗಳಲ್ಲಿ ಸಂಚಾರ ದಟ್ಟಣೆ ಇಲ್ಲದ ಸಮಯದಲ್ಲಿ ಮೆಟ್ರೋದ ಭದ್ರತಾ ದಳವು ನಡೆಸಿದ ವಾಡಿಕೆಯ ಭದ್ರತಾ ತಪಾಸಣೆಯ ಪ್ರಕಾರ ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುವ ಹಾಗೂ ಮೆಟ್ರೋ ನಿಯಮಗಳ ಉಲಂಘನೆ ಮಾಡಿದ ಸುಮಾರು 27,000 ಕ್ಕೂ ಹೆಚ್ಚು ಘಟನೆಗಳು ಬಹಿರಂಗವಾಗಿದೆ ಎಂದು ತಿಳಿಸಿದೆ.
ನಮ್ಮ ಮೆಟ್ರೋ ಟ್ವೀಟ್
ಕಳೆದ 6 ತಿಂಗಳ ಅವಧಿಯಲ್ಲಿ , ಸುಮಾರು 27,000 ಪ್ರಯಾಣಿಕರು #ನಮ್ಮಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಾರೆ. #ಮೆಟ್ರೋ ನಿಯಮಗಳನ್ನು ಪಾಲಿಸುವುದರಿಂದ ಪ್ರಯಾಣಿಕರು ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ. ಜವಾಬ್ದಾರಿಯುತ ಮೆಟ್ರೋ ಬಳಕೆದಾರರಾಗೋಣ! ಹೆಚ್ಚಿನ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. #BMRCL pic.twitter.com/4eUBj9OPuS
— ನಮ್ಮ ಮೆಟ್ರೋ (@OfficialBMRCL) April 3, 2025
ಪ್ರಯಾಣಿಕರು ಮೊಬೈಲ್‌ನಲ್ಲಿ ಜೋರಾಗಿ ಮ್ಯೂಸಿಕ್ ಕೇಳುತ್ತಿದ್ದ ಒಟ್ಟು 11,922 ಪ್ರಕರಣಗಳು ದಾಖಲಾಗಿವೆ. ವಿಕಲಾಂಗ ವ್ಯಕ್ತಿಗಳು (PwD), ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಶಿಶುಗಳೊಂದಿಗೆ ಪ್ರಯಾಣಿಸುವವರಿಗೆ ಆದ್ಯತೆಯ ಆಸನಗಳನ್ನು ನೀಡದಿರುವ 14,162 ಪ್ರಕರಣಗಳು ಹಾಗೂ ರೈಲಿನಲ್ಲಿ ಪ್ರಯಾಣ ಮಾಡುವಾಗ ಪದಾರ್ಥಗಳ ಸೇವನೆಯ 554 ಪ್ರಕರಣಗಳು ಕಂಡುಬಂದಿವೆ. ಅಲ್ಲದೆ, 474 ಘಟನೆಗಳು ದೊಡ್ಡ ಗಾತ್ರದ ಲಗೇಜ್ಗಳನ್ನು ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕೂಡ ಕಂಡುಬಂದಿದೆ.
ಇದನ್ನೂ ಓದಿ: Cab Price Hike: ಕರ್ನಾಟಕದ ಜನರಿಗೆ ಶಾಕ್ ಮೇಲೆ ಶಾಕ್: ಇಂದಿನಿಂದ ಟ್ಯಾಕ್ಸಿ, ಕ್ಯಾಬ್ ದರ ಹೆಚ್ಚಳ, ಇಲ್ಲಿದೆ ವಿವರ
ಈ ಕ್ರಮಗಳಿಗೆ ಯಾವುದೇ ದಂಡವನ್ನು ವಿಧಿಸಲಾಗಿಲ್ಲವಾದರೂ, ಅಂತಹ ನಡವಳಿಕೆಗಳನ್ನು ನಿರುತ್ಸಾಹಗೊಳಿಸಲು ಮತ್ತು ಸಾಮರಸ್ಯದ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಮಾರ್ಗಸೂಚಿಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಭದ್ರತಾ ದಳವು ಕಠಿಣ ಎಚ್ಚರಿಕೆಗಳನ್ನು ನೀಡಿದೆ. ಇದು ಪ್ರಯಾಣಿಕರಲ್ಲಿ ಹೆಚ್ಚಿನ ಅರಿವು ಮತ್ತು ಪರಿಗಣನೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: Karnataka Weather: ಕರ್ನಾಟಕದ ಕರಾವಳಿ ಸೇರಿ 14 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ, ಬೆಂಗಳೂರು ಹವಾಮಾನ ಹೇಗಿದೆ?
ಸುಗಮವಾದ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ದಂಡ ವಿಧಿಸುವ ಅವಕಾಶಗಳನ್ನು ತಪ್ಪಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮವು ಪ್ರಯಾಣಿಕರಲ್ಲಿ ವಿನಂತಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:02 am, Fri, 4 April 25