ಹೊಸ ವರ್ಷಕ್ಕೆ ಕೌಂಟ್ಡೌನ್: ಬೆಂಗಳೂರಲ್ಲಿ ಅದಾಗಲೇ ಫೀಲ್ಡ್ಗೆ ಇಳಿದಿದ್ದೇಕೆ ಖಾಕಿ?
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೂರ್ವಭಾವಿಯಾಗಿ ಪೊಲೀಸರು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸಂಭಾವ್ಯ ಅಹಿತಕರ ಘಟನೆಗಳನ್ನು ತಡೆಯಲು ನಗರದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ನಡೆಸಲಾಗ್ತಿದೆ. ಪಬ್, ರೆಸ್ಟೋರೆಂಟ್‌ಗಳ ಭದ್ರತೆ, ಸಿಸಿಟಿವಿ ಮತ್ತು ತುರ್ತು ನಿರ್ಗಮನ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತಿದೆ.

ಬೆಂಗಳೂರು, ಡಿಸೆಂಬರ್ 14: 2025 ಇನ್ನೇನು ಕೆಲ ದಿನಗಳಲ್ಲಿ ಮುಗಿಯಲ್ಲಿದ್ದು, 2026ರ ಹೊಸ ವರ್ಷ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ನ್ಯೂ ಇಯರ್ ವೆಲ್ಕಮ್ ಬೆಂಗಳೂರಲ್ಲಿ ತುಸು ಜೋರಾಗಿಯೇ ಇರಲಿದ್ದು, ಪಬ್, ಕ್ಲಬ್ ಮತ್ತು ರೆಸ್ಟೋರೆಂಟ್ಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ನಗರದಾದ್ಯಂತ ಬ್ಯಾರಿಕೆಡ್ ಹಾಕಿ ವಾಹನಗಳ ಪರಿಶೀಲನೆ ಕಾರ್ಯ ಅದಾಗಲೇ ಆರಂಭವಾಗಿದೆ.
ಖಾಕಿ ಹದ್ದಿನ ಕಣ್ಣು
ಮಾದಕ ವಸ್ತುಗಳ ಸಾಗಾಟ, ಮಾರಾಟದ ಬಗ್ಗೆ ಮುಖ್ಯವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಎಲ್ಲಾ ಠಾಣೆ ವ್ಯಾಪ್ತಿಗಳಲ್ಲಿ ಪೊಲೀಸ್ ತಪಾಸಣೆ ನಡೆಯುತ್ತಿದೆ. ಆಟೋ, ಕಾರು, ಬೈಕ್ ಸೇರಿ ಪ್ರತೀ ವಾಹನವನ್ನೂ ಚೆಕ್ ಮಾಡಲಾಗ್ತಿದೆ. ಖುದ್ದು ಡಿಸಿಪಿ, ಎಸಿಪಿ ಅಧಿಕಾರಿಗಳೇ ಫೀಲ್ಡ್ಗೆ ಇಳಿದಿದ್ದು, ಎಂ.ಜಿ. ರೋಡ್, ಬ್ರಿಗೆಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದ 80 ಫೀಟ್ ರಸ್ತೆ, ಇಂದಿರಾನಗರದ 100 ಫೀಟ್ ರಸ್ತೆ ಸೇರಿ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಬೆನ್ನಲ್ಲೇ ಕೇಂದ್ರದ ತನಿಖಾ ಸಂಸ್ಥೆಗಳು ಎಲ್ಲ ರಾಜ್ಯಗಳಲ್ಲೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವ ಹಿನ್ನಲೆ ಬೆಂಗಳೂರಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಹೊಸ ವರ್ಷ ಆಚರಣೆ ವೇಳೆ ನಗರದ ಮೇಲೆ ಹದ್ದಿನ ಕಣ್ಣಿಡಲಿರುವ ಡ್ರೋಣ್ ಕ್ಯಾಮರಾಗಳ ಬಗ್ಗೆ ತರಬೇತಿ ಸಂಬಂಧ ಪ್ರಾಯೋಗಿಕ ಹಾರಾಟವೂ ನಡೆಯುತ್ತಿದೆ.
ಇದನ್ನೂ ಓದಿ: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈ ನಿಯಮ ಪಾಲಿಸಲೇಬೇಕು, ಉಲ್ಲಂಘಿಸಿದ್ರೆ ದಂಡ ಖಂಡಿತ
ಪಬ್, ರೆಸ್ಟೋರೆಂಟ್‌ಗಳ ಬುಕ್ಕಿಂಗ್ ಶುರು
ಬೆಂಗಳೂರು ಸಿಟಿಯಲ್ಲಿ ಹದಿನೈದು ದಿನದ ಮುಂಚೆಯೇ ನ್ಯೂ ಇಯರ್ ವೈಬ್ ಶುರುವಾಗಿದ್ದು, ಪಬ್, ರೆಸ್ಟೋರೆಂಟ್‌ಗಳ ಬುಕ್ಕಿಂಗ್ ಆರಂಭವಾಗಿದೆ. ಹೀಗಾಗಿ ಪಾರ್ಟಿ ಹಾಟ್ಸ್ಪಾಟ್ಗಳಲ್ಲಿ ಪೊಲೀಸರು ಚೆಕಿಂಗ್ ನಡೆಸುತ್ತಿದ್ದು, ಹೋಟೆಲ್, ರೆಸ್ಟೋರೆಂಟ್ ಮತ್ತು ಪಬ್ಗಳಲ್ಲಿನ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ. ಸಿಸಿಟಿವಿ, ಅಲ್ಲಿನ ಸೆಕ್ಯೂರಿಟಿ ವ್ಯವಸ್ಥೆ, ಬೌನ್ಸರ್ ಗಳ ವ್ಯವಸ್ಥೆ, ಎಮೆರ್ಜೆನ್ಸಿ ಎಕ್ಸಿಟ್, ಅಗ್ನಿ ಅವಘಡ ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಸೇರಿ ವಿವಿಧ ಆಯಾಮಗಳಲ್ಲಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:50 am, Sun, 14 December 25



