ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕ್ರಿಯೆಯನ್ನು ಕೆಎಸ್ಐಐಡಿಸಿ ಪ್ರಾರಂಭಿಸಿದ್ದು, ನಗರದ ಹೊರವಲಯದಲ್ಲಿರುವ ಮೂರು ಸ್ಥಳಗಳ ವಿವರವಾದ ಕಾರ್ಯತಂತ್ರ ಮತ್ತು ತಾಂತ್ರಿಕ ಕಾರ್ಯಸಾಧ್ಯತಾ ಮೌಲ್ಯಮಾಪನಕ್ಕಾಗಿ ಸಲಹೆಗಾರರನ್ನು ನೇಮಿಸಲು ಟೆಂಡರ್ ಕರೆಯಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಡಿಸೆಂಬರ್ 13: ನಗರದಲ್ಲಿ 2ನೇ ವಿಮಾನ ನಿಲ್ದಾಣಕ್ಕಾಗಿ (International airport) ರಾಜ್ಯ ಸರಕಾರವು ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಸ್ಥಳಗಳನ್ನು ಗುರುತಿಸಿದೆ. ಸಮಗ್ರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಕೆಎಸ್ಐಐಡಿಸಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ (Minister MB Patil) ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಇವುಗಳ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ನೀಡಿದೆ. ಈಗ ಟೆಂಡರಿನಲ್ಲಿ ಆಯ್ಕೆಯಾಗುವ ಸಲಹಾ ಸಂಸ್ಥೆಯು 5 ತಿಂಗಳಲ್ಲಿ ಸರಕಾರಕ್ಕೆ ತನ್ನ ಸಮಗ್ರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿ ಸಲ್ಲಿಸಬೇಕಾಗುತ್ತದೆ ಎಂದಿದ್ದಾರೆ.
ಸಚಿವ ಎಂ.ಬಿ ಪಾಟೀಲ್ ಟ್ವೀಟ್
#KSIIDC has set the process in motion for Bengaluru’s second International airport by floating a tender to appoint a consultant for a detailed strategic and technical feasibility assessment of three shortlisted locations on the city’s outskirts.
This step follows a preliminary… pic.twitter.com/iVu5cln92L
— M B Patil (@MBPatil) December 13, 2025
ಕಳೆದ 5 ವರ್ಷಗಳಲ್ಲಿ ವಾರ್ಷಿಕವಾಗಿ 250 ಕೋಟಿ ರೂ. ಮೊತ್ತದ ಕೆಲಸಗಳನ್ನು ನಿರ್ವಹಿಸಿರುವಂತ ಮತ್ತು ಕ್ಷೇತ್ರದಲ್ಲಿ ಕನಿಷ್ಟಪಕ್ಷ ಐದು ಯೋಜನೆಗಳನ್ನಾದರೂ ನಿರ್ವಹಿಸಿರುವ, ಸಲಹಾ ವರದಿ ನೀಡಿರುವಂತಹ ಸಂಸ್ಥೆಗಳು ಟೆಂಡರ್ನಲ್ಲಿ ಭಾಗವಹಿಸಬಹುದು. ಟೆಂಡರ್ನಲ್ಲಿ ಆಯ್ಕೆಯಾಗುವ ಸಂಸ್ಥೆಯು ನಾವು ಸೂಚಿಸುತ್ತಿರುವ ಮೂರು ಸ್ಥಳಗಳ ಮಳೆ ಪ್ರಮಾಣ, ಭೂಲಕ್ಷಣ, ವಿದ್ಯುತ್, ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆಯಂಥ ಮೂಲಸೌಕರ್ಯಗಳು, ಸುತ್ತಮುತ್ತಲಿನ ಜನಸಂಖ್ಯೆ, ಅಭಿವೃದ್ಧಿ, ಶಬ್ದ ಮತ್ತು ವಿಮಾನ ನಿಲ್ದಾಣದಿಂದ ಉಂಟಾಗುವ ಮಾಲಿನ್ಯ ಇತ್ಯಾದಿಗಳತ್ತ ಗಮನ ಹರಿಸಲಿದೆ.
ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈ ನಿಯಮ ಪಾಲಿಸಲೇಬೇಕು, ಉಲ್ಲಂಘಿಸಿದ್ರೆ ದಂಡ ಖಂಡಿತ
2ನೇ ವಿಮಾನ ನಿಲ್ದಾಣ ಅಭಿವೃದ್ಧಿಗೆ ತಗುಲುವ ವೆಚ್ಚ, ಅಗತ್ಯ ಇರುವ ಭೂಮಿ, ಡಿಜಿಸಿಎ ಸೇರಿ ಹಲವು ಕಡೆಗಳಿಂದ ಪಡೆಯಬೇಕಾಗುವ ಅನುಮೋದನೆಗಳ ವಿವರಗಳು ಮುಂತಾದ ಕಾರ್ಯಸಾಧ್ಯತಾ ವರದಿಯಲ್ಲಿ ನೀಡಬೇಕಾಗುತ್ತದೆ. ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದಿಂದ ಇಲ್ಲಿನ ಕೈಗಾರಿಕೆ, ಪ್ರವಾಸೋದ್ಯಮ, ಜನರ ಓಡಾಟ ಇತ್ಯಾದಿ ಅಂಶಗಳನ್ನು ಅದು ವಿವರಿಸಲಿದೆ.
ವಿಮಾನ ನಿಲ್ದಾಣ ನಿರ್ಮಾಣ ನಂತರ ಏನೆಲ್ಲಾ ಮೂಲಸೌಕರ್ಯ ಅಭಿವೃದ್ಧಿ ಪಡಿಸಬೇಕು ಎಂಬುದರ ಬಗ್ಗೆಯೂ ಸಲಹಾ ಸಂಸ್ಥೆ ಅಧ್ಯಯನ ನಡೆಸಲಿದೆ. ಇದಲ್ಲದೆ, ಸರಕು ಸಾಗಣೆ ಮತ್ತು ಪ್ರಯಾಣಿಕ ಸೇವೆಗಳು ಹಾಗೂ ಅದರಿಂದಾಗುವ ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆಯೂ ಅಧ್ಯಯನ ನಡೆಸಬೇಕಾಗಿದೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣ: ಬೆಂಗಳೂರಿಗೆ ದೇಶದಲ್ಲೇ ಮೊದಲನೇ ಸ್ಥಾನ!
ಒಟ್ಟಿನಲ್ಲಿ ಮೂರು ಸ್ಥಳಗಳ ಬಗ್ಗೆ ಅಧ್ಯಯನ ನಡೆಸಿ, ಯಾವುದು ಹೆಚ್ಚು ಸೂಕ್ತ ಎನ್ನುವ ಅಭಿಪ್ರಾಯ ಕೂಡ ಸಲಹಾ ಸಂಸ್ಥೆ ನೀಡಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ದಟ್ಟಣೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. 2033ರ ಹೊತ್ತಿಗೆ ನಾವು ಮತ್ತೊಂದು ವಿಮಾನ ನಿಲ್ದಾಣ ಹೊಂದಬೇಕಾಗಿದೆ. ಮುಂದಾಲೋಚನೆಯನ್ನು ಇಟ್ಟುಕೊಂಡು ಈಗಿನಿಂದಲೇ ಪ್ರಯತ್ನಗಳನ್ನು ಆರಂಭಿಸಲಾಗಿದೆ. ಈಗಾಗಲೇ ನವದೆಹಲಿ ಮತ್ತು ಮುಂಬೈ ನಗರಗಳು ಎರಡೆರಡು ವಿಮಾನ ನಿಲ್ದಾಣ ಹೊಂದಿವೆ. ಕಾರ್ಯಸಾಧ್ಯತಾ ವರದಿ ಬಂದ ನಂತರ ಮುಂದಿನ ಹೆಜ್ಜೆ ಏನಿರಬೇಕೆಂದು ನಿರ್ಧರಿಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ಮಾಹಿತಿ ನೀಡಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




