ಒಂದೇ ರಾತ್ರಿಯಲ್ಲಿ ಬೆಂಗಳೂರಿನ ಸಿಎಂಟಿಐ ಕ್ಯಾಂಪಸ್‌ನಿಂದ 23 ಶ್ರೀಗಂಧದ ಮರಗಳ ಕಳ್ಳತನ

ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಆವರಣದಲ್ಲಿದ್ದ 23 ಶ್ರೀಗಂಧದ ಮರಗಳು ಕಳ್ಳತನವಾಗಿದೆ. ದುಷ್ಕರ್ಮಿಗಳು ರಾತ್ರೋರಾತ್ರಿ 23 ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿದ್ದಾರೆ. ಇನ್ನು ಪೊಲೀಸರು ಶ್ರೀಗಂಧದ ಮರಗಳ ಕಳ್ಳತನದ ಬಗ್ಗೆ ತನಿಖೆ ಆರಂಭಿಸಿದ್ದು ಸಿಎಮ್‌ಟಿಐ ಆಡಳಿತವು ತನ್ನ ಲೋಪವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಒಂದೇ ರಾತ್ರಿಯಲ್ಲಿ ಬೆಂಗಳೂರಿನ ಸಿಎಂಟಿಐ ಕ್ಯಾಂಪಸ್‌ನಿಂದ 23 ಶ್ರೀಗಂಧದ ಮರಗಳ ಕಳ್ಳತನ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Aug 31, 2023 | 1:34 PM

ಬೆಂಗಳೂರು, ಆ.31: ತುಮಕೂರು ರಸ್ತೆಯಲ್ಲಿರುವ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ (CMTI campus) ಆವರಣದಲ್ಲಿದ್ದ 23 ಶ್ರೀಗಂಧದ ಮರಗಳು(sandalwood trees) ಕಳ್ಳತನವಾಗಿದೆ. ದುಷ್ಕರ್ಮಿಗಳು ರಾತ್ರೋರಾತ್ರಿ 23 ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿದ್ದಾರೆ. ಆಗಸ್ಟ್ 18 ಮತ್ತು 19 ರ ಮಧ್ಯರಾತ್ರಿಯಲ್ಲಿ ಕಳ್ಳತನ ನಡೆದಿದೆ ಎಂದು CMTI ಯ ಸಿಇಒ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಪೊಲೀಸರು ಶ್ರೀಗಂಧದ ಮರಗಳ ಕಳ್ಳತನದ ಬಗ್ಗೆ ತನಿಖೆ ಆರಂಭಿಸಿದ್ದು ಸಿಎಮ್‌ಟಿಐ ಆಡಳಿತವು ತನ್ನ ಲೋಪವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಶ್ರೀಗಂಧದ ಮರಗಳನ್ನು ಬೆಳೆಸಲಾಗಿದ್ದ ಜಾಗದಲ್ಲಿ ಯಾವುದೇ ಸಿಸಿಟಿವಿ ಕಣ್ಗಾವಲು ಇಲ್ಲ. ಅಲ್ಲದೆ ಕಳ್ಳತನವನ್ನು ತುಂಬಾ ಚಾಲಾಕಿತನದಿಂದ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ವೇಳೆ ಪತ್ತೆಯಾಗಿದೆ.

ಆರ್‌ಎಂಸಿ(RMC) ಯಾರ್ಡ್ ಪೊಲೀಸರು ಕರ್ನಾಟಕ ಅರಣ್ಯ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 279 (ಕಳ್ಳತನ) ಅಡಿಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಎಂಟಿಐ ಕಂಪನಿಯ ಸಿಇಒ ಆಗಿರುವ ವೆಂಕಟಾಚಲಂ ಅವರು ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಿರುವಂತೆ, ಆಗಸ್ಟ್ 18 ರಂದು ರಾತ್ರಿ 11 ರಿಂದ ಆಗಸ್ಟ್ 19 ರ ಬೆಳಿಗ್ಗೆ 8 ಗಂಟೆಯ ನಡುವೆ ಮರಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳತನವಾದ 23 ಮರಗಳ ಪೈಕಿ 18 ಮರಗಳು ಕ್ಯಾಂಪಸ್ ಆವರಣದೊಳಗಿದ್ದವು. ಕಾಂಪೌಂಡ್ ಮತ್ತು ತುಮಕೂರು ರಸ್ತೆ ಸರ್ವಿಸ್ ಲೈನ್​ ಸಮೀಪಕ್ಕಿದ್ದವು. ಇನ್ನು ಉಳಿದ ಐದು ಮರಗಳು ಕಾಂಪೌಂಡ್ ಹೊರಗಿದ್ದು ಏರ್ ಫೋರ್ಸ್ ಮುಖ್ಯ ಇಂಜಿನಿಯರ್ ಕ್ಯಾಂಪಸ್​ಗೆ ಸಮೀಪವಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ, ಅರೆಬೆತ್ತಲೆ ಮೆರವಣಿಗೆ; ಚಾಮರಾಜನಗರದಲ್ಲೂ ಹೋರಾಟ

ಮನುಷ್ಯರು ಹೆಚ್ಚಾಗಿ ಸಂಚರಿಸದ ದಟ್ಟವಾದ ಪೊದೆಗಳು ಬೆಳೆದಿದ್ದಂತಹ ಜಾಗದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಲಾಗಿತ್ತು. “ಇದಕ್ಕೆ ಭದ್ರತಾ ಸಿಬ್ಬಂದಿ ಅಥವಾ ಸಿಸಿಟಿವಿ ಕಣ್ಗಾವಲು ಇರಲಿಲ್ಲ” ತುಮಕೂರು ರಸ್ತೆಯಲ್ಲಿ ಭಾರೀ ವಾಹನಗಳ ದಟ್ಟಣೆಯಿಂದ ಉಂಟಾಗುವ ಶಬ್ದದಿಂದಾಗಿ ಕಳ್ಳರು ಮರ ಕಡಿಯುವ ಶಬ್ದ ಕೇಳಿಬಂದಿರದೆ ಇರಬಹುದು. ವಾಹನ ಶಬ್ದಗಳಿಂದಾಗಿ ಖದೀಮರಿಗೆ ಮರ ಕಡಿದು ಕಳ್ಳತನ ಮಾಡಲು ಅನುಕೂಲವಾಗಿದೆ ಎಂದು ವೆಂಕಟಾಚಲಂ ಅವರು ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ ತನಿಖೆ ನಡೆಸುತ್ತಿರುವ ಪೊಲೀಸರು ಹೇಳುವಂತೆ, ದೂರಿನಲ್ಲಿ ತಿಳಿಸಲಾದ ದಿನಾಂಕಕ್ಕಿಂತ ಮುಂಚೆಯೇ ಮರಗಳನ್ನು ಕಡಿಯಲಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಕಡಿದ ಮರಗಳ ಅವಶೇಷಗಳಿಂದ ಪಡೆದ ಪುರಾವೆಗಳು ಸಿಇಒ ಅವರ ದೂರಿನಲ್ಲಿ ಸೂಚಿಸಲಾದ ಕಾಲಮಿತಿಗಿಂತ ಮುಂಚೆಯೇ ಮರಗಳ ಕಳ್ಳತನ ನಡೆದಿರಬಹುದು ಎಂದು ತಿಳಿಸುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ